ಕಸದ ಲಾರಿಯಲ್ಲಿ ಹೋಗಿಯಾಗಿತ್ತು ಬಂಪರ್ ಗೆದ್ದ ಲಾಟರಿ ಟಿಕೆಟ್: ಪೌರಕಾರ್ಮಿಕರ ನೆರವಿನಿಂದ 9 ಕೋಟಿ ರೂ. ಪಡೆದ ಮಹಿಳೆ!
ಮಹಿಳೆಯೊಬ್ಬರು ಒಂದೇ ಒಂದು ಮಾತನ್ನು ಅಪಾರ್ಥ ಮಾಡಿಕೊಂಡ ಕಾರಣ ಒಲಿದು ಬಂದ ಲಕ್ಷ್ಮೀಯನ್ನೇ ಕಸದ ಬುಟ್ಟಿಗೆ ಎಸೆದಿದ್ದಾರೆ. ಹೌದು, ಮಹಿಳೆಯೊಬ್ಬರು ಲಾಟರಿಯಲ್ಲಿ 9.5 ಕೋಟಿ ಗೆದ್ದಿದ್ದಾರೆ. ಗ್ರಾಹಚಾರ ಕೆಟ್ರೆ ಹಗ್ಗ ಕೂಡಾ ಹಾವಾಗುವುದಂತೆ. ಹಾಗೆಯೇ ಅದೃಷ್ಟ ಬೆನ್ನು ಹತ್ತಿದರೆ ಏನೇ ಆದ್ರೂ ನಮಗೆ ಸೇರಬೇಕಾದದ್ದು ಸಿಕ್ಕೇ ಸಿಗೋದು.
ಇಟಲಿಯ ಬಿಟೊಂಟೊ ನಗರದ ಮಹಿಳೆಯೊಬ್ರು ಲಾಟರಿ ಖರೀದಿಸಿದ್ರು. ಮಾರನೇ ದಿನ ಟಕೆಟ್ ಡ್ರಾ ಆಗುತ್ತಿದ್ದ ಹಾಗೆಯೇ ಅಂಗಡಿಗೆ ಹೋಗಿ ತಮ್ಮ ಬಳಿಯಿರುವ ಟಿಕೆಟ್ ನಂಬರ್ ಹಾಕಿ ಚೆಕ್ ಮಾಡಿದ್ದಾರೆ. ಈ ಟಿಕೆಟ್‌ಗೆ ಲಕ್ಕಿ ಡ್ರಾನಲ್ಲಿ ಹಣ ಬಂದಿತ್ತು. ಆದ್ರೆ, ಆ ಮಿಷನ್‌ನಲ್ಲಿ ಮಾತ್ರ ನಾನ್ ಪೇಯೇಬಲ್ ಎನ್ನುವ ಮೆಸೇಜ್ ಬಂದಿತ್ತು. ಆ ಮಹಿಳೆ ಗೆದ್ದ ಹಣದ ಮೊತ್ತ ತುಂಬಾ ದೊಡ್ಡದಾಗಿದ್ದರಿಂದ ಸಣ್ಣ ಅಂಗಡಿಯಲ್ಲಿ ಆ ಹಣವನ್ನು ನೀಡಲು ಸಾಧ್ಯವಿಲ್ಲ ಎನ್ನುವುದು ಆ ಮೆಸೇಜ್‌ನ ಅರ್ಥವಾಗಿತ್ತು. ಆದ್ರೆ, ಮಹಿಳೆ ತಾನು ಲಾಟರಿ ಗೆದ್ದಿಲ್ಲ ಎನ್ನುವ ರೀತಿಯಲ್ಲಿ ಅದನ್ನು ಅರ್ಥ ಮಾಡಿಕೊಳ್ತಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಅವರು ಟಿಕೆಟನ್ನು ಮುದ್ದೆ ಮಾಡಿ ಅಂಗಡಿಯ ಕಸದ ಡಬ್ಬಿಗೆ ಎಸೆಯುತ್ತಾರೆ.

ಈ ಮಹಿಳೆ ಯಾವಾಗ ಟಿಕೆಟ್ ಖರೀದಿಸಿದರೂ ಅದೇ ಸಂಖ್ಯೆಗಳನ್ನು ಬಳಸುತ್ತಿದ್ದರು. ಆ ನಂಬರ್‌ಗಳು ತನಗೆ ಲಕ್ಕಿ ಎನ್ನುವುದು ಮಹಿಳೆಯ ಭಾವನೆ. ಹಾಗಾಗಿ ಅವರು ಪ್ರತಿ ಸಲ ಆ ನಂಬರ್ ಕಾಂಬಿನೇಶನ್ ಮೇಲೆಯೇ ಹಣ ಕಟ್ಟಿತ್ತಿದ್ದರು. ಈ ಸಲ ಕೂಡಾ ಮಹಿಳೆ ಅದೇ ನಂಬರ್ ಇರುವ ಲಾಟರಿ ತೆಗೆದುಕೊಂಡಿದ್ದರು. ಮಾರನೇ ದಿನ ಇಟಾಲಿಯನ್ ಪತ್ರಿಕೆಯಲ್ಲಿ ಲಾಟರಿಯ ಫಲಿತಾಂಶ ಬಂದಿದೆ. ಇದರ ಪ್ರಕಾರ 2, 4, 8, 10, ಮತ್ತು 51 ಸಂಯೋಜನೆಯ ನಂಬರ್‌ಗೆ ಹಣ ಬಂದಿರುವುದು ಗೊತ್ತಾಗಿದೆ. ಇದನ್ನು ಗಮನಿಸಿದ ಮಹಿಳೆಯ ಸಂಬಂಧಿಯೊಬ್ಬರು ಮಹಿಳೆಗೆ ವಿಷಯ ತಿಳಿಸಿದ್ದಾರೆ.
ಒಂದು ಸಲ ಮಹಿಳೆಗೆ ಆಕಾಶವೇ ಕಳಚಿ ಬಿದ್ದ ಅನುಭವ. ಒಲಿದು ಬಂದ ಲಕ್ಷ್ಮೀಯನ್ನು ಕಸದ ಬುಟ್ಟಿಗೆ ಎಸೆದಾಗಿದೆ. ಮುಂದೆ ಏನು ಮಾಡುವುದು ಎನ್ನುವುದೇ ಮಹಿಳೆಗೆ ತೋಚುತ್ತಿರಲಿಲ್ಲ. ಮಹಿಳೆ ತಕ್ಷಣ ಅಂಗಡಿಯಲ್ಲಿ ವಿಚಾರಿಸುತ್ತಾರೆ. ಆದ್ರೆ ಕಸ ಸಂಗ್ರಹಣೆ ಮಾಡುವ ವ್ಯಾನ್ ಈಗಾಗಲೇ ಅಂಗಡಿಯ ಕಸವನ್ನು ತೆಗೆದುಕೊಂಡು ಹೋಗಿಯಾಗಿತ್ತು.
ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವ ಸ್ಥಿತಿ ಮಹಿಳೆಯದ್ದಾಗಿತ್ತು. ಕೂಡಲೇ ಅವರು ತ್ಯಾಜ್ಯ ನಿರ್ವಹಣಾ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಎಲ್ಲಾ ವಿಷಯವನ್ನು ತಿಳಿಸಿದ್ದಾರೆ. ಕೂಡಲೇ ಲಾಟರಿ ಅಂಗಡಿಯಿಂದ ಕಸ ತೆಗೆದುಕೊಂಡು ಬಂದ ಲಾರಿ ಯಾವುದು ಎನ್ನುವುದನ್ನು ಅಶಧಿಕಾರಿಗಳು ಗುರುತಿಸಿದ್ದಾರೆ. ಅದರ ಕಸ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹೋಗದಂತೆ ತಡೆದಿದ್ದಾರೆ. ಆ ಲಾರಿಯಲ್ಲಿದ್ದ ಎಲ್ಲಾ ಕಸವನ್ನು ಚೆಕ್ ಮಾಡಿಸಿದ್ದಾರೆ.
ಇಲ್ಲಿನ ಪೌರಕಾರ್ಮಿಕರು ಮಹಿಳೆಯ ಲಾಟರಿ ಟಿಕೆಟ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ವಾಸನೆಯಿಂದ ನಾರುತ್ತಿದ್ದ ಕಸವನ್ನು ಒಂದೂ ಬಿಡದಂತೆ ಚೆಕ್ ಮಾಡಿ ನೋಡಿದ್ದಾರೆ. ಪೌರ ಕಾರ್ಮಿಕರ ಸಹಾಯದಿಂದ ಮಹಿಳೆಗೆ ತನ್ನ ಲಾಟರಿ ಟಿಕೆಟ್ ಸಿಕ್ಕಿದೆ. ಆಶ್ವರ್ಯ ಎಂದರೆ ಆ ಲಾಟರಿ ಟಿಕೆಟ್ ತುಂಡಾಗದೆ ಹಾಗೆಯೇ ಇತ್ತು.
ಮಹಿಳೆಗೆ ಸಂತೋಷ ತಡೆಯೋದಕ್ಕೆ ಆಗಲಿಲ್ಲ. ಅಷ್ಟು ದೊಡ್ಡ ಮೊತ್ತದ ಹಣ ಕೈ ತಪ್ಪಿ ಹೋಯಿತು ಎಂದು ಬೇಜಾರಾಗುತ್ತಿದ್ದ ಮಹಿಳೆಯ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯಿತು. ಅವರು ಪೌರ ಕಾರ್ಮಿಕರಿಗೆ ಕೈ ಎತ್ತಿ ನಮಿಸಿದ್ದಾರೆ. ಲಾಟರಿ ಹುಡುಕಾಟದ ವೇಳೆ ತಗುಲಿದ ಹಣವನ್ನು ತಾನೇ ನೀಡುವುದಾಗಿ ಮಹಿಳೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅದೃಷ್ಟ ಚೆನ್ನಾಗಿದ್ದಾಗ ಹುಲ್ಲು ಕಡ್ಡಿ ಕೂಡಾ ಆಸರೆಯಾಗುತ್ತದೆಯಂತೆ. ಹಾಗೆ ಈ ಮಹಿಳೆಯ ಅದೃಷ್ಟ ಚೆನ್ನಾಗಿತ್ತು. ತ್ಯಾಜ್ಯ ನಿರ್ವಹಣಾ ಘಟಕದ ಅಧಿಕಾರಿಗಳು, ನೌಕರರು ಎಲ್ಲರೂ ಟಿಕೆಟ್ ಹುಡುಕಾಟದಲ್ಲಿ ನೆರವಾಗಿದ್ದಾರೆ.


Click it and Unblock the Notifications
