ಚುನಾವಣೆ ದಿನಾಂಕ ಘೋಷಣೆ : ಫಾರಂ 26 ಎಂದರೇನು?
ಬೆಂಗಳೂರು, ಮಾರ್ಚ್ 11 : ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ. ದೇಶಾದ್ಯಂತ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ಭಾನುವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರು. ಏಪ್ರಿಲ್ 18 ಮತ್ತು 23ರಂದು ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತದಾನ ನಡೆದ ಬಳಿಕ ಒಂದು ತಿಂಗಳ ಕಾಲ ರಾಜ್ಯದ ಜನರು ಫಲಿತಾಂಶಕ್ಕಾಗಿ ಕಾಯಬೇಕಿದೆ.
ಚುನಾವಣಾ ನೀತಿ ಸಂಹಿತೆ ಮಾ.10ರ ಭಾನುವಾರದಿಂದಲೇ ಜಾರಿಗೆ ಬಂದಿದೆ. ಈ ಬಾರಿಯ ಚುನಾವಣೆ ಹಲವು ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಈ ಬಾರಿ ಫಾರಂ 26 ಭರ್ತಿ ಮಾಡುವುದು ಅಗತ್ಯವಾಗಿದೆ.
ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥ ಹಲವು ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅವುಗಳಲ್ಲಿ ಬಿಫಾರಂ, ಫಾರಂ ಬಿಎ, ಫಾರಂ2ಸಿ ಸೇರಿವೆ. ನಾಮಪತ್ರವನ್ನು ಸಲ್ಲಿಸುವ ಅಭ್ಯರ್ಥಿಯು ಫಾರಂ 26 ಅನ್ನು ಸಲ್ಲಿಸಬೇಕಾಗಿದೆ.

5 ವರ್ಷದ ಆದಾಯ ತೆರಿಗೆ ಮಾಹಿತಿ
ಚುನಾವಣಾ ಆಯೋಗ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವಾಗ 5 ವರ್ಷದ ಆದಾಯ ತೆರಿಗೆ ಪಾವತಿ ಮಾಡಿದ ಮಾಹಿತಿ ಒದಗಿಸುವಂತೆ ಕಾನೂನು ಬದಲಾವಣೆ ಮಾಡಬೇಕು ಎಂದು ಫೆ. 13ರಂದು ಕೇಂದ್ರ ಕಾನೂನು ಇಲಾಖೆಗೆ ಪತ್ರ ಬರೆದಿತ್ತು. ಇದಕ್ಕೆ ಕಾನೂನು ಇಲಾಖೆಯು ಬದಲಾವಣೆ ತಂದಿದ್ದು ಅಭ್ಯರ್ಥಿ ಫಾರಂ 26 ಭರ್ತಿ ಮಾಡಿ ನೀಡಬೇಕು ಎಂದು ಸೂಚನೆ ನೀಡಿದೆ.

ಏನಿದು ಫಾರಂ 26?
ಫಾರಂ 26 ಭರ್ತಿ ಮಾಡಿದರೆ ಅಭ್ಯರ್ಥಿಯ ಆಸ್ತಿಯ ವಿವರಗಳು, ವಿದ್ಯಾರ್ಹತೆ, ಕ್ರಿಮಿನಲ್ ಪ್ರಕರಣಗಳು (ಇತ್ಯರ್ಥ ಆಗಿರುವುದು, ಬಾಕಿ ಇರುವುದು) ಮುಂತಾದ ಮಾಹಿತಿಗಳು ಇದರಲ್ಲಿ ಸಿಗಲಿವೆ. ಅಭ್ಯರ್ಥಿ ನಾಮಪತ್ರವನ್ನು ಸಲ್ಲಿಸುವಾಗ ಫಾರಂ 26 ಅನ್ನು ಭರ್ತಿ ಮಾಡಿ ನೀಡಬೇಕಿದೆ.

ಏನು ಬದಲಾವಣೆಯಾಗಿದೆ?
ಫಾರಂ 26 ಭರ್ತಿ ಮಾಡುವಲ್ಲಿ ಕೆಲವು ನಿಯಮ ಬದಲಾವಣೆಯಾಗಿದೆ. ಹಿಂದೆ ಅಭ್ಯರ್ಥಿಯು ಹಿಂದಿನ ವರ್ಷದ ತನ್ನ ಆದಾಯ ತೆರಿಗೆ ಪಾವತಿ ಮಾಡಿದ ಮಾಹಿತಿ ನೀಡಿದರೆ ಸಾಕಿತ್ತು. ವಿದೇಶದಲ್ಲಿರುವ ಆಸ್ತಿಯ ಮಾಹಿತಿ ನೀಡುವ ಅಗತ್ಯವಿರಲಿಲ್ಲ. ಫೆ.26ರಂದು ಕಾನೂನು ಇಲಾಖೆ ಹೊರಡಿಸಿರುವ ಆದೇಶದಂತೆ ವಿದೇಶದಲ್ಲಿರುವ ಆಸ್ತಿ, ಅಲ್ಲಿ ಮಾಡಿರುವ ಹೂಡಿಕೆ, ವ್ಯವಹಾರದ ಪಾಲುದಾರಿಕೆಯ ಮಾಹಿತಿ ನೀಡಬೇಕು.

ನಾಮಪತ್ರ ತಿರಸ್ಕಾರವಾಗಲಿದೆ
ಫಾರಂ 26 ಅನ್ನು ಅಭ್ಯರ್ಥಿ ಭರ್ತಿ ಮಾಡುವುದರಿಂದ ಮತದಾರರಿಗೆ ಸಂಪೂರ್ಣ ಮಾಹಿತಿ ತಿಳಿಯಲಿದೆ. ಆತನ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದರೆ ಆ ಮಾಹಿತಿಗಳು ಸಿಗಲಿವೆ. ಕಳೆದ ಐದು ವರ್ಷಗಳಲ್ಲಿ ಅಭ್ಯರ್ಥಿ ಎಷ್ಟು ತೆರಿಗೆ ಕಟ್ಟಿದ್ದಾನೆ. ಅವನ ಆಸ್ತಿ ಎಷ್ಟು ಹೆಚ್ಚಾಗಲಿದೆ ಎಂಬ ಮಾಹಿತಿಗಳು ಸಿಗಲಿವೆ. ಫಾರಂ 26 ಭರ್ತಿ ಮಾಡದಿದ್ದರೆ ಅಭ್ಯರ್ಥಿ ನಾಮಪತ್ರವನ್ನು ತಿರಸ್ಕಾರ ಮಾಡಲು ಚುನಾವಣಾಧಿಕಾರಿಗೆ ಅಧಿಕಾರವಿದೆ.












Click it and Unblock the Notifications