12 ಗಂಟೆ ಚರ್ಚೆ, 288 ಪರವಾದ ಮತ: ಲೋಕಸಭೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ
ನವದೆಹಲಿ, ಏಪ್ರಿಲ್ 03: ದೇಶಾದ್ಯಂತ ತೀವ್ರವಾದ ಚರ್ಚೆಗೆ ಕಾರಣವಾಗಿರುವ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಬುಧವಾರ ಬೆಳಗ್ಗೆ ಲೋಕಸಭೆಯ ಕಲಾಪದಲ್ಲಿ ವಕ್ಫ್ ತಿದ್ದುಪಡಿ ಮಸೂದೆ-2025 ಮಂಡನೆ ಮಾಡಲಾಗಿತ್ತು. ತಡರಾತ್ರಿ ತನಕ ಈ ಕುರಿತು ಚರ್ಚೆಗಳು ನಡೆದಿವೆ. ಸುಮಾರು 12 ಗಂಟೆಗಳ ಚರ್ಚೆಯ ಬಳಿಕ ಗುರುವಾರ ಮುಂಜಾನೆ 1.30ರ ಸುಮಾರಿಗೆ ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ ದೊರೆಯಿತು. ವಕ್ಫ್ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯ ಒಪ್ಪಿಗೆ ಬಾಕಿ ಇದೆ.
ವಕ್ಫ್ ತಿದ್ದುಪಡಿ ಮಸೂದೆ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರವಾದ ಚರ್ಚೆ ನಡೆಯಿತು. ವಕ್ಫ್ ತಿದ್ದುಪಡಿ ಮಸೂದೆ ಪರವಾಗಿ 288, ವಿರುದ್ಧವಾಗಿ 232 ಮತಗಳು ಚಲಾವಣೆಗೊಂಡವು. ಸದಸ್ಯರ ಮತದಾನದ ಬಳಿಕ ಅಂತಿಮವಾಗಿ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಪ್ರಕಟಿಸಿದರು.

ಬುಧವಾರ ಬೆಳಗ್ಗೆ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ-2025 ಮಂಡನೆ ಮಾಡಿದರು. ಈ ಮಸೂದೆ ಯಾವುದೇ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದರು.
ವಕ್ಫ್ (ತಿದ್ದುಪಡಿ) ಮಸೂದೆ-2025ರ ಮಂಡನೆ ಬಳಿಕ ಎನ್‌ಡಿಎ ಮೈತ್ರಿಕೂಟ, ಇಂಡಿಯಾ ಮೈತ್ರಿಕೂಟದ ಸದಸ್ಯರು ಮಸೂದೆ ಕುರಿತು ವಿವರವಾದ ಚರ್ಚೆಯನ್ನು ನಡೆಸಿದರು. ಎನ್‌ಡಿಎ ಮೈತ್ರಿಕೂಟದ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ 61 ಸದಸ್ಯರು ಮಾತನಾಡಿದರು.
ಧ್ವನಿ ಮತದಲ್ಲಿ ಮಸೂದೆಗೆ ವಿರೋಧ: ಸುಮಾರು 12 ತಾಸುಗಳ ಚರ್ಚೆಯ ಬಳಿಕ ಸ್ಪೀಕರ್ ಓಂ ಬಿರ್ಲಾ ಗುರುವಾರ ಮುಂಜಾನೆ 1.30ರ ಸುಮಾರಿಗೆ ವಕ್ಫ್ (ತಿದ್ದುಪಡಿ) ಮಸೂದೆ-2025 ಅನ್ನು ಮತಕ್ಕೆ ಹಾಕಿದರು. ವಿರೋಧ ಪಕ್ಷಗಳ ಸದಸ್ಯರು ಧ್ವನಿ ಮತದ ಮೂಲಕ ವಕ್ಫ್ (ತಿದ್ದುಪಡಿ) ಮಸೂದೆ-2025ಯನ್ನು ವಿರೋಧಿಸಿದರು.
ಬಳಿಕ ಸ್ಪೀಕರ್ ಮಸೂದೆಯನ್ನು ಎಲೆಕ್ಟ್ರಾನಿಕ್ ಮತಕ್ಕೆ ಹಾಕಿದರು. ಆಗ ಪ್ರತಿ ಸದಸ್ಯರಿಗೂ ಮಸೂದೆ ಪರವಾಗಿ, ವಿರೋಧವಾಗಿ ಕುಳಿತ ಜಾಗದಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಯಿತು. ವಕ್ಫ್ (ತಿದ್ದುಪಡಿ) ಮಸೂದೆ-2025ರ ಪರವಾಗಿ 288 ಮತ್ತು ವಿರುದ್ಧವಾಗಿ 232 ಮತಗಳು ಚಲಾವಣೆಗೊಂಡವು.
ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಲ ಹೆಚ್ಚಿದೆ. ಆದ್ದರಿಂದ ವಕ್ಫ್ (ತಿದ್ದುಪಡಿ) ಮಸೂದೆ-2025 ಸುಲಭವಾಗಿ ಅನುಮೋದನೆಗೊಂಡಿದೆ. ಗುರುವಾರ ರಾಜ್ಯಸಭೆ ಕಲಾಪದಲ್ಲಿ ಇದನ್ನು ಮಂಡಿಸಲಾಗುತ್ತದೆ. ಅಲ್ಲಿ ಸರ್ಕಾರ ಸದಸ್ಯರ ಕೊರತೆ ಎದುರಿಸುತ್ತಿದ್ದು, ಮಸೂದೆಗೆ ಅನುಮೋದನೆ ದೊರೆಯಲಿದೆಯೇ? ಎಂದು ಕಾದು ನೋಡಬೇಕಿದೆ.
ವಕ್ಫ್ (ತಿದ್ದುಪಡಿ) ಮಸೂದೆ-2025ರಲ್ಲಿ ಹಲವಾರು ಹೊಸ ಹೊಸ ಅಂಶಗಳನ್ನು ಕೇಂದ್ರ ಸರ್ಕಾರ ಸೇರಿಸಿದೆ. ಕೇಂದ್ರ ವಕ್ಫ್ ಪರಿಷತ್ ಮತ್ತು ವಕ್ಫ್ ಮಂಡಳಿಗಳಲ್ಲಿ ಎರಡು ಮುಸ್ಲಿಮೇತರ ಸದಸ್ಯರನ್ನು ಕಡ್ಡಾಯವಾಗಿ ಸೇರಿಸುವುದನ್ನು ಸಹ ಮಸೂದೆ ಒಳಗೊಂಡಿವೆ. ಆದ್ದರಿಂದ ಕಾಂಗ್ರೆಸ್ ಸೇರಿದಂತೆ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಮಸೂದೆಗೆ ಭಾರೀ ವಿರೋಧವನ್ನು ವ್ಯಕ್ತಪಡಿಸುತ್ತಿವೆ.
ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಅನುಸರಿಸಿದ ವ್ಯಕ್ತಿಗಳು ಮಾತ್ರ ವಕ್ಫ್‌ಗೆ ಆಸ್ತಿ ದಾನ ಮಾಡಬಹುದು ಎಂಬ ನಿಯಮವೂ ಇದೆ. ಪ್ರಸ್ತಾಪಿತ ಕಾನೂನಿನ ಅಡಿಯಲ್ಲಿ, ವಕ್ಫ್ ಎಂದು ಗುರುತಿಸಲ್ಪಟ್ಟ ಸರ್ಕಾರಿ ಆಸ್ತಿ ಅದಕ್ಕೆ ಸೇರಿಲ್ಲದಂತೆ ಆಗುತ್ತದೆ ಮತ್ತು ಸ್ಥಳೀಯ ಕಲೆಕ್ಟರ್ ಅದರ ಮಾಲೀಕತ್ವವನ್ನು ನಿರ್ಧರಿಸುತ್ತಾರೆ ಎಂಬ ಅಂಶಗಳನ್ನು ಸೇರಿಸಲಾಗಿದೆ.
ಈ ಹಿಂದೆ ವಿರೋಧ ಪಕ್ಷಗಳ ಆಕ್ಷೇಪದ ಹಿನ್ನಲೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ-2025ಯನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ವಹಿಸಲಾಗಿತ್ತು. ಲೋಕಸಭೆಯಲ್ಲಿ ಸಮಿತಿಯ ಪರಾಮರ್ಶೆ ಕುರಿತು ವಿವರವಾದ ಚರ್ಚೆ ನಡೆಯಿತು. ವಿರೋಧ ಪಕ್ಷಗಳ ಸದಸ್ಯರು ಈ ಸಮಿತಿ ನಮ್ಮ ಸಲಹೆಗಳನ್ನು ಪರಿಗಣಿಸಲಿಲ್ಲ, ಈ ಮಸೂದೆ ಅಸಂವಿಧಾನಿಕವಾಗಿದೆ ಎಂದು ಚರ್ಚೆಯ ವೇಳೆ ಆರೋಪವನ್ನು ಮಾಡಿತು.
ಬಿಜೆಪಿ, ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ನಾಯಕರು ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮಸೂದೆ ಆಸ್ತಿ ಮತ್ತು ಅದರ ನಿರ್ವಹಣೆ ಬಗ್ಗೆ ಇದೆ, ಧರ್ಮದ ಬಗ್ಗೆ ಅಲ್ಲ ಎಂದು ಲೋಕಸಭೆ ಚರ್ಚೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ನ ವೋಟ್‌ಬ್ಯಾಂಕ್ ರಾಜಕೀಯದ ಸಹಾಯದಿಂದ ವಕ್ಫ್ ದೊಡ್ಡ ಪ್ರಮಾಣದ ಭೂಮಿಗಳು ಮತ್ತು ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳಿಗೆ ಲಾಭವಾಗದಂತೆ ವಕ್ಫ್ ಆಸ್ತಿಯಲ್ಲಿ ಹಲವು ಅಕ್ರಮಗಳಿದ್ದವು. ಈ ಮಸೂದೆ ಮೂಲಕ ಕಾನೂನು ತಿದ್ದುಪಡಿ ಮಾಡಲಾಗಿದೆ. ಜನರ ಜೊತೆ, ವಿವಿಧ ಸಂಘಟನೆಗಳ ಜೊತೆ ವಿವರವಾದ ಚರ್ಚೆ, ಅಭಿಪ್ರಾಯ ಸಂಗ್ರಹ, ಸಲಹೆಗಳ ಸ್ವೀಕಾರದ ಬಳಿಕವೇ ಮಸೂದೆಯನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಬಿಜೆಪಿ ಹೇಳಿದೆ.












Click it and Unblock the Notifications