Haryana Assembly Election 2024: ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್
ಹರಿಯಾಣದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಇನ್ನೇನು ಕೆಲವೇ ವಾರಗಳು ಬಾಕಿ ಇವೆ. ಕಾಂಗ್ರೆಸ್ ಪಕ್ಷ ಕೂಡ ಈ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಸ್ಟಾರ್ ಪ್ರಚಾರಕರ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಇನ್ನು ಈ ಪಟ್ಟಿಯಲ್ಲಿ 40 ಮಂದಿ ಪ್ರಚಾರಕರ ಸ್ಥಾನ ಪಡೆದಿದಿದ್ದಾರೆ.
ಅಕ್ಟೋಬರ್ 5ರಂದು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಭರ್ಜರಿ ಪ್ರಚಾರಕ್ಕೆ ಯೋಜನೆ ರೂಪಿಸಿಕೊಂಡಿದೆ. ಇಲ್ಲಿನ ಜುಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತನ್ನ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಬಾರಿ ಎಲ್ಲರ ಚಿತ್ತ ವಿನೇಶ ಫೋಗಟ್ ಅವರತ್ತ ವಾಲಿದೆ.

ಯಾರೆಲ್ಲ ಸ್ಟಾರ್ ಪ್ರಚಾರಕರು?: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕುಮಾರಿ ಸೆಲ್ಜಾ, ಭೂಪಿಂದರ್ ಹೂಡಾ, ರಣದೀಪ್ ಸಿಂಗ್ ಸುರ್ಜೇವಾಲ ಪ್ರಮುಖವಾಗಿ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಾಗಲಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿಕೊಂಡಿರುವ ಭಾರತೀಯ ಕುಸ್ತಿಪಟುಗಳಾದ ವಿಶೇಶ್ ಫೋಗಟ್ ಹಾಗೂ ಭಜರಂಗ್ ಪೂನಿಯಾ ಕೂಡ ಈ ಪಟ್ಟಿಯಲ್ಲಿದ್ದಾರೆ.
ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು, ಹರಿಯಾಣ ಉಸ್ತುವಾರಿ ದೀಪಕ್ ಬಬಾರಿಯಾ, ಹರಿಯಾಣ ರಾಜ್ಯ ಘಟಕದ ಅಧ್ಯಕ್ಷ ಉದಯ್ ಭಾನ್, ಆನಂದ್ ಶರ್ಮಾ, ಸಚಿನ್ ಪೈಲಟ್, ಅಜಯ್ ಮಕಾನ್, ಬಿರೇಂದರ್ ಸಿಂಗ್, ಮಾಜಿ ಸಿಎಂ ಅಶೋಕ್ ಗೆಹಲೋಟ್, ಚರಂಜಿತ್ ಸಿಂಗ್ ಚನ್ನಿ, ಭೂಪೇಶ್ ಬಾಘೇಲ್ ಕೂಡ ಸ್ಟಾರ್ ಪ್ರಚಾರಕರಾಗಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಸೇರಿಕೊಂಡಿರುವ ವಿನೇಶ್ ಫೋಗಟ್, ನಾನು ರಾಜಕೀಯಕ್ಕೆ ಬರುತ್ತಿರುವುದು ನನ್ನ ಅದೃಷ್ಟ ಎಂದುಕೊಂಡಿದ್ದೇನೆ. ನಾನು ಪ್ರತಿ ವರ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಜುಲಾನಾ ಕ್ಷೇತ್ರದ ಜನ ನನಗೆ ನೀಡುತ್ತಿರುವ ಪ್ರೀತಿಗೆ ನಾನು ಆಭಾರಿ. ಹಾಗಾಗಿ ನನ್ನ ಗೆಲುವು ಖಚಿತ ಎಂದು ಫೋಗಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆ.ಜಿ.ಯ ಕುಸ್ತಿ ಪಂದ್ಯದಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಾದ ಕಾರಣಕ್ಕೆ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಘಟನೆ ಬಳಿಕ ಭಾರತಕ್ಕೆ ಮರಳಿದ್ದ ಫೋಗಟ್ ಕುಸ್ತಿಗೆ ನಿವೃತ್ತಿ ಘೋಷಿಸಿದರು. ಇದ್ದಕ್ಕಿದ್ದಂತೆ ರಾಜಕೀಯದತ್ತ ಒಲವು ತೋರಿಸುವ ಫೋಗಟ್, ಕಾಂಗ್ರೆಸ್ ಸೇರ್ಪಡೆಗೊಂಡರು. ಬಳಿಕ ಈ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲೂ ಅವರು ಯಶಸ್ವಿಯಾದರು.

ಜುಲಾನಾ ಕ್ಷೇತ್ರದಲ್ಲಿ ವಿನೇಶ್ ಫೋಗಟ್ ಅವರ ವಿರುದ್ಧ ನಿವೃತ್ತ ಪೈಲಟ್ ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮತ್ತೊಂದೆಡೆ ಕುಸ್ತಿಪಟು ಕವಿತಾ ದಲಾಲ್ ಅವರನ್ನೂ ಆಮ್ ಆದ್ಮಿ ಪಾರ್ಟಿ (ಎಎಪಿ) ಫೋಗಟ್ ವಿರುದ್ಧ ಚುನಾವಣೆಗೆ ನಿಲ್ಲಿಸಿದೆ. ಇತ್ತ ಬಿಜೆಪಿ ವಿರುದ್ಧವೇ ಬಂಡಾಯವಾಗಿರುವ ಸಾವಿತ್ರಿ ಜಿಂದಾಲ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.












Click it and Unblock the Notifications