ಗಂಡನ ಅಗಲಿಕೆ ನೋವನ್ನೇ ಶಕ್ತಿಯಾಗಿಸಿ ಸೇನೆ ಸೇರಿದ ಗೌರಿ: ವೀರ ಪತಿಯ ಸಮವಸ್ತ್ರತೊಟ್ಟು ಈಗ ಲೆಫ್ಟಿನೆಂಟ್

ಪ್ರೀತಿ ಎಂದರೆ ಕೇವಲ ಜೊತೆಯಾಗಿರುವುದಲ್ಲ, ಸಂಗಾತಿಯ ಕನಸುಗಳನ್ನ ತಮ್ಮದಾಗಿಸಿಕೊಂಡು, ಅವರ ಹೆಜ್ಜೆಗುರುತಿನಲ್ಲಿ ಮುನ್ನಡೆಯುವುದು ಕೂಡ ಹೌದು. ಮುಂಬೈನ ವಿರಾರ್ ಮೂಲದ ಯುವತಿ ಗೌರಿ ಮಹಾಡಿಕ್ ಅವರ ಜೀವನಗಾಥೆ ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎನ್ನಬಹುದು.

ವಕೀಲೆಯಾಗಿ ಹಾಗೂ ಕಂಪನಿ ಸೆಕ್ರೆಟರಿಯಾಗಿ ತಮ್ಮ ವೃತ್ತಿಜೀವನವನ್ನ ಕಟ್ಟಿಕೊಂಡಿದ್ದ ಗೌರಿ, ಬಿಹಾರ ರೆಜಿಮೆಂಟ್‌ನ ಕ್ಯಾಪ್ಟನ್ ಪ್ರಸಾದ್ ಮಹಾಡಿಕ್ ಅವರನ್ನ ವಿವಾಹವಾಗಿದ್ದರು. ಪ್ರಸಾದ್ ಅವರು ಪ್ರೇಮ ನಿವೇದನೆ ಮಾಡಿದಾಗ, ಗೌರಿ "ಖಂಡಿತ ಕ್ಯಾಪ್ಟನ್" ಎಂದು ನಗುನಗುತ್ತಾ ಒಪ್ಪಿಕೊಂಡಿದ್ದರಂತೆ. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು.

Lieutenant Gauri Mahadik The Inspiring Story Of A War Widow Who Joined The Indian Army For Love

ವೀರ ಯೋಧ ಪತಿಯನ್ನ ಕಳೆದುಕೊಂಡ ನಂತರ ಆ ನೋವಿನಲ್ಲಿ ಕುಗ್ಗಿ ಹೋಗದೆ, ಅದೇ ಸೇನೆಯ ಸಮವಸ್ತ್ರ ತೊಟ್ಟು 'ಲೆಫ್ಟಿನೆಂಟ್ ಗೌರಿ ಮಹಾಡಿಕ್' ಆಗಿ ಹೊರಹೊಮ್ಮಿದ ಅವರ ಕಥೆಯನ್ನ ಕೇಳಿದ ಪ್ರತಿಯೊಬ್ಬ ಭಾರತೀಯನಿಗೂ ರೋಮಾಂಚನ ಉಂಟಾಗುತ್ತದೆ.

ಮೇಜರ್ ಪ್ರಸಾದ್ ಮಹಾಡಿಕ್ ಅವರ ಹುತಾತ್ಮರಾಗಿದ್ದು ಹೇಗೆ?

2017ರ ಅಕ್ಟೋಬರ್ ವೇಳೆಗೆ ಕ್ಯಾಪ್ಟನ್ ಪ್ರಸಾದ್ ಮಹಾಡಿಕ್ ಅವರು ಮೇಜರ್ ಆಗಿ ಬಡ್ತಿ ಪಡೆದಿದ್ದರು. ಅವರನ್ನ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರುವ ಸುಮಾರು 15,000 ಅಡಿ ಎತ್ತರದ ಮುಂಚೂಣಿ ನೆಲೆಗೆ ನಿಯೋಜಿಸಲಾಗಿತ್ತು. ಚೀನಾ ಗಡಿಯ ಸಮೀಪವಿದ್ದ ಆ ಸೇನಾ ನೆಲೆಯಲ್ಲಿ, 2017ರ ಡಿಸೆಂಬರ್ 30ರಂದು ಮುಂಜಾನೆ ಸುಮಾರು 6.30ರ ಸುಮಾರಿಗೆ ಅವರ ಬ್ಯಾರಕ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತು. ದುರದೃಷ್ಟವಶಾತ್, ಆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಮೇಜರ್ ಪ್ರಸಾದ್ ಅವರು ಗಂಭೀರ ಸುಟ್ಟ ಗಾಯಗಳಿಂದಾಗಿ ವೀರಮರಣ ಅಪ್ಪಿದರು.

ಪತಿಯ ಈ ದಿಢೀರ್ ಸಾವಿನಿಂದ ಗೌರಿ ತೀವ್ರ ಆಘಾತಕ್ಕೊಳಗಾದರು. ಪತಿಯ ನೆನಪು ಕಾಡಿದಾಗಲೆಲ್ಲಾ ಅವರು ರೆಕಾರ್ಡ್ ಮಾಡಿಕೊಂಡಿದ್ದ ಫೋನ್ ಕರೆಗಳನ್ನ ಕೇಳುತ್ತಿದ್ದರು. ಪ್ರಸಾದ್ ಅವರ ಧ್ವನಿಯಲ್ಲಿ "ಐ ಲವ್ ಯು" ಎಂಬ ಮಾತುಗಳನ್ನ ಕೇಳುತ್ತಾ, ತಮ್ಮ ನೋವನ್ನು ಮರೆಯಲು ಯತ್ನಿಸುತ್ತಿದ್ದರು. ಈ ನೋವೇ ಮುಂದೆ ಅವರ ಬದುಕಿಗೆ ಹೊಸ ದಾರಿ ತೋರಿಸಿತು.

ಯುದ್ಧ ವಿಧವೆಯರ ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಅಗ್ರಸ್ಥಾನ

ತಮ್ಮ ಪತಿಯ ದೇಶಸೇವೆಯ ಅಪೂರ್ಣ ಕನಸನ್ನು ತಾವೇ ಪೂರ್ಣಗೊಳಿಸಬೇಕೆಂದು ನಿರ್ಧರಿಸಿದ ಗೌರಿ, ಸೇನೆಗೆ ಸೇರುವ ಕಠಿಣ ನಿರ್ಧಾರ ತೆಗೆದುಕೊಂಡರು. 2018ರ ಅಂತ್ಯದ ವೇಳೆಗೆ ಭೋಪಾಲ್‌ನಲ್ಲಿ ನಡೆದ ಯುದ್ಧ ವಿಧವೆಯರಿಗಾಗಿ ಎಸ್‌ಎಸ್‌ಬಿ (ಸರ್ವೀಸಸ್ ಸೆಲೆಕ್ಷನ್ ಬೋರ್ಡ್) ಪರೀಕ್ಷೆಗೆ ಹಾಜರಾದರು.

ದೇಶಾದ್ಯಂತ ಮೂರು ಕೇಂದ್ರಗಳಲ್ಲಿ ನಡೆದ ಈ ಕಠಿಣ ಪ್ರಕ್ರಿಯೆಯಲ್ಲಿ ಕೇವಲ 16 ಯುದ್ಧ ವಿಧವೆಯರು ಮಾತ್ರ ಅರ್ಹತೆ ಪಡೆದಿದ್ದರು. ವಿಶೇಷವೆಂದರೆ, ಗೌರಿ ಮಹಾಡಿಕ್ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ತಮ್ಮ ದೃಢ ಸಂಕಲ್ಪವನ್ನ ಸಾಬೀತುಪಡಿಸಿದರು.

ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಚೆನ್ನೈನಲ್ಲಿ ಕಠಿಣ ತರಬೇತಿ

ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ, 2019ರ ಏಪ್ರಿಲ್‌ನಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) 49 ವಾರಗಳ ಅತ್ಯಂತ ಕಠಿಣ ಸೇನಾ ತರಬೇತಿಯನ್ನ ಆರಂಭಿಸಿದರು. ತರಬೇತಿಗೆ ಸೇರುವ ಮುನ್ನ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ನಾನು ನನ್ನ ಪತಿಯ ಸಮವಸ್ತ್ರವನ್ನ ಧರಿಸುತ್ತೇನೆ. ಆ ಸಮವಸ್ತ್ರದ ಮೇಲಿರುವ ಅವರ ಸ್ಟಾರ್‌ಗಳನ್ನ ನಾನು ನನ್ನ ಹೆಗಲ ಮೇಲೆ ಹೊರುತ್ತೇನೆ" ಎಂದು ಭಾವುಕರಾಗಿ ಹೇಳಿದ್ದರು.

ಅವರ ಈ ಮಾತುಗಳು ಕೇವಲ ಭಾವನೆಯಾಗಿರದೆ, ಛಲವಾಗಿತ್ತು. ಶಾರೀರಿಕ ಹಾಗೂ ಮಾನಸಿಕವಾಗಿ ಅತ್ಯಂತ ಕಠಿಣವಾದ 49 ವಾರಗಳ ತರಬೇತಿಯನ್ನ ಯಶಸ್ವಿಯಾಗಿ ಪೂರೈಸಿದ ಅವರು, 2020ರ ಮಾರ್ಚ್ ತಿಂಗಳಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ 'ಲೆಫ್ಟಿನೆಂಟ್ ಗೌರಿ ಪ್ರಸಾದ್ ಮಹಾಡಿಕ್' ಆಗಿ ಭಾರತೀಯ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಪತಿಯ ಅಗಲಿಕೆಯ ದುಃಖವನ್ನ ಶಕ್ತಿಯಾಗಿ ಪರಿವರ್ತಿಸಿ, ಅದೇ ಸಮವಸ್ತ್ರದಲ್ಲಿ ದೇಶಸೇವೆಗೆ ನಿಂತ ಲೆಫ್ಟಿನೆಂಟ್ ಗೌರಿ ಮಹಾಡಿಕ್ ಅವರ ಈ ಪಯಣ, ಮಹಿಳಾ ಸಬಲೀಕರಣ ಮತ್ತು ಅಪ್ರತಿಮ ದೇಶಭಕ್ತಿಗೆ ಒಂದೊಳ್ಳೆ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+