Asha Bhosle: ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಹೃದಯಾಘಾತ: ಮುಂಬೈ ಆಸ್ಪತ್ರೆಗೆ ದಾಖಲು
ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ಶನಿವಾರ (ಏಪ್ರಿಲ್ 11) ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಆಸ್ಪತ್ರೆಯ ವೈದ್ಯರಾದ ಪ್ರದೀತ್ ಸಮದಾನಿ ಅವರು ನೀಡಿರುವ ಮಾಹಿತಿಯಂತೆ, ಶನಿವಾರ ಸಂಜೆ ಆಶಾ ಭೋಸ್ಲೆ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಸದ್ಯ ಅವರು ತುರ್ತು ವೈದ್ಯಕೀಯ ಸೇವೆಗಳ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸದ್ಯಕ್ಕೆ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ತಮ್ಮ ಅದ್ಭುತ ಕಂಠದ ಮೂಲಕ ದಶಕಗಳ ಕಾಲ ಭಾರತೀಯ ಚಿತ್ರರಂಗವನ್ನು ಆಳಿದ ಗಾಯಕಿಯ ಆರೋಗ್ಯದ ಬಗ್ಗೆ ಕೇಳಿಬಂದ ಸುದ್ದಿ ಇಡೀ ದೇಶಕ್ಕೆ ಆಘಾತ ತಂದಿದೆ. 92 ವರ್ಷ ವಯಸ್ಸಿನ ಅವರು ವಯೋಸಹಜ ಸಮಸ್ಯೆಗಳ ಹೊರತಾಗಿಯೂ ಇತ್ತೀಚಿನವರೆಗೆ ಸಕ್ರಿಯರಾಗಿದ್ದರು. ಅವರ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಯು ನಿರಂತರ ನಿಗಾ ಇಟ್ಟಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಸಂಗೀತ ಲೋಕದ ದಿಗ್ಗಜರಾದ ಆಶಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಚಿತ್ರರಂಗದ ಗಣ್ಯರು ಮತ್ತು ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಏಳು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಆಶಾ ಭೋಂಸ್ಲೆ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರ ಆರೋಗ್ಯ ಚೇತರಿಕೆಗಾಗಿ ದೇಶಾದ್ಯಂತ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಪ್ರಾರ್ಥಿಸುತ್ತಿದ್ದಾರೆ.
ಆತಂಕ ಬೇಡ ಎಂದ ಕುಟುಂಬ
ಹಿರಿಯ ಗಾಯಕಿ ಆಶಾ ಭೋಸ್ಲೆ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳ ಬೆನ್ನಲ್ಲೇ, ಅವರ ಮೊಮ್ಮಗಳು ಜನೈ ಭೋಂಸ್ಲೆ ಇನ್‌ಸ್ಟಾಗ್ರಾಮ್ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಅಜ್ಜಿ ಆಶಾ ಭೋಸ್ಲೆ ಅವರು ಅತಿಯಾದ ಆಯಾಸ (Extreme Exhaustion) ಮತ್ತು ಎದೆಯ ಸೋಂಕಿನಿಂದ (Chest Infection) ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜನೈ ಪೋಸ್ಟ್ ಮಾಡಿದ್ದಾರೆ.
"ಸದ್ಯ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲವೂ ಶೀಘ್ರವೇ ಸರಿಯಾಗಲಿದೆ ಎಂಬ ಭರವಸೆ ನಮಗಿದೆ. ಅವರ ಆರೋಗ್ಯದ ಬಗ್ಗೆ ಸಕಾರಾತ್ಮಕ ಅಪ್‌ಡೇಟ್‌ಗಳನ್ನು ನಾವು ನೀಡುತ್ತಿರುತ್ತೇವೆ" ಎಂದು ತಿಳಿಸುವ ಮೂಲಕ ಅಭಿಮಾನಿಗಳು ಆತಂಕಪಡದಂತೆ ಅವರು ಮನವಿ ಮಾಡಿದ್ದಾರೆ. ಹೃದಯಾಘಾತದ ವದಂತಿಗಳ ನಡುವೆ, ಕುಟುಂಬ ಸದಸ್ಯರೇ ಸೋಂಕು ಮತ್ತು ಆಯಾಸದ ಬಗ್ಗೆ ಸ್ಪಷ್ಟನೆ ನೀಡಿರುವುದು ಆಶಾ ಅವರ ಕೋಟ್ಯಂತರ ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಗಾಯಕಿ ಶೀಘ್ರ ಗುಣಮುಖರಾಗಲಿ ಎಂದು ಸಂಗೀತ ಲೋಕ ಹಾರೈಸುತ್ತಿದೆ.












Click it and Unblock the Notifications