CBSE ಶಾಲೆಗಳಲ್ಲಿ ಈಗ ಸ್ಥಳೀಯ ಭಾಷೆಗಳಲ್ಲಿ ಕಲಿಕೆ!
ಹೊಸದಿಲ್ಲಿ ಜುಲೈ 22: ಬಹುಭಾಷಾ ಶಾಲಾ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ಭಾರತೀಯ ಭಾಷೆಗಳಲ್ಲಿ ಶಿಕ್ಷಣವನ್ನು ನೀಡಲು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಶಾಲೆಗಳಿಗೆ ಅನುಮತಿ ನೀಡಿದೆ. ಪ್ರಸ್ತುತ ಬಹುಪಾಲು CBSE-ಸಂಯೋಜಿತ ಶಾಲೆಗಳಲ್ಲಿ, ಬೋಧನಾ ಮಾಧ್ಯಮವು ಇಂಗ್ಲಿಷ್ ಆಗಿದೆ ಮತ್ತು ಕೆಲವು ಶಿಕ್ಷಣವನ್ನು ಹಿಂದಿಯಲ್ಲಿ ನೀಡಲಾಗುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ಯು ವಿವಿಧ ಹಂತದ ಶಿಕ್ಷಣದಲ್ಲಿ ಮನೆ ಭಾಷೆ, ಮಾತೃಭಾಷೆ, ಸ್ಥಳೀಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸುವುದನ್ನು ಪ್ರತಿಪಾದಿಸುತ್ತದೆ. ಹೀಗಾಗಿ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (NCERT) 22 ನಿಗದಿತ ಭಾರತೀಯ ಭಾಷೆಗಳಲ್ಲಿ ಹೊಸ ಪಠ್ಯಪುಸ್ತಕಗಳನ್ನು ತಯಾರಿಸಲು ನಿರ್ದೇಶಿಸಿದೆ. ಇವುಗಳನ್ನು 2024-25 ಶೈಕ್ಷಣಿಕ ಅಧಿವೇಶನದಿಂದ ಲಭ್ಯಗೊಳಿಸಲಾಗುತ್ತದೆ.

ಈ ಬಗ್ಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ, ಶಾಲೆಗಳಿಗೆ ನೀಡಲಾದ ಸುತ್ತೋಲೆಯಲ್ಲಿ, ಬಹುಭಾಷಾ ಶಿಕ್ಷಣವು ಭಾಷಾ ವೈವಿಧ್ಯತೆ, ಸಾಂಸ್ಕೃತಿಕ ತಿಳುವಳಿಕೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸನ್ನು ಬೆಳೆಸುವ ಮೌಲ್ಯಯುತ ವಿಧಾನವೆಂದು ಎಂದು ತಿಳಿಸಿದೆ.
"ಸಿಬಿಎಸ್‌ಇ-ಸಂಯೋಜಿತ ಶಾಲೆಗಳು ಅಸ್ತಿತ್ವದಲ್ಲಿರುವ ಇತರ ಆಯ್ಕೆಗಳ ಜೊತೆಗೆ ಐಚ್ಛಿಕ ಮಾಧ್ಯಮವಾಗಿ ಅಡಿಪಾಯದ ಹಂತದಿಂದ ದ್ವಿತೀಯ ಹಂತದ ಅಂತ್ಯದವರೆಗೆ (ಪೂರ್ವ ಪ್ರಾಥಮಿಕದಿಂದ XII ವರೆಗೆ) ಭಾರತೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸುವುದನ್ನು ಪರಿಗಣಿಸಬಹುದು" ಎಂದು ಮಂಡಳಿ ಹೇಳಿದೆ.
ಮಾತ್ರವಲ್ಲದೆ ಬಹುಭಾಷೆಯಲ್ಲಿ ಕಲಿಸುವ ಸಾಮರ್ಥ್ಯವಿರುವ ನುರಿತ ಶಿಕ್ಷಕರ ಲಭ್ಯತೆ, ಬಹುಭಾಷಾ ಪಠ್ಯಪುಸ್ತಕಗಳ ರಚನೆ ಮತ್ತು ಲಭ್ಯವಿರುವ ಸೀಮಿತ ಸಮಯದಂತಹ ಸವಾಲುಗಳನ್ನು ಮಂಡಳಿಯು ಒತ್ತಿಹೇಳುತ್ತದೆ. ಕೇಂದ್ರ ಭಾರತೀಯ ಭಾಷೆಗಳ ಮೂಲಕ ಶಿಕ್ಷಣವನ್ನು ಉತ್ತೇಜಿಸಲು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ನಿರ್ದೇಶಕ (ಶಿಕ್ಷಣ ತಜ್ಞರು) ಜೋಸೆಫ್ ಇಮ್ಯಾನುಯೆಲ್ ಹೇಳಿದರು.
ಸಿಬಿಎಸ್‌ಇ ನಿರ್ಧಾರದ ಕುರಿತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿ, "ಶಾಲೆಗಳಲ್ಲಿ ಮಾತೃಭಾಷೆ ಮತ್ತು ಭಾರತೀಯ ಭಾಷೆಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಶ್ಲಾಘನೀಯ ಹೆಜ್ಜೆಯಾಗಿದೆ' ಎಂದಿದ್ದಾರೆ.












Click it and Unblock the Notifications