ಮಹಾಕುಂಭ ಮೇಳ 2025; ಕಲ್ಪವಾಸದಲ್ಲಿ ಭಾಗಿಯಾಗಲಿರುವ ಸ್ಟೀವ್ ಜಾಬ್ಸ್ ಪತ್ನಿ ಲ್ಯೂರೆನ್
ಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಧಾರ್ಮಿಕ ಕಾರ್ಯಕ್ರಮ. ಆದರೆ 144 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. 2025ರಲ್ಲಿ 144 ವರ್ಷಗಳ ಬಳಿಕ ಮಹಾಕುಂಭಮೇಳ ನಡೆಯಲಿದ್ದು, ಪ್ರಯಾಗ್‌ರಾಜ್ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಜನವರಿ 13ರಿಂದ ಆರಂಭವಾಗಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೋಟ್ಯಂತರ ಮಂದಿ ಪಾಲ್ಗೊಳ್ಳಲಿದ್ದಾರೆ.
ಅದರಲ್ಲೂ ಈ ಬಾರಿ ಮಹಾಕುಂಭ ಮೇಳ ನಡೆಯುತ್ತಿರುವ ಕಾರಣ 44 ದಿನಗಳ ಕಾರ್ಯಕ್ರಮದಲ್ಲಿ ಸುಮಾರು 40-50 ಕೋಟಿ ಜನ ಭಾಗವಹಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಕುಂಭಮೇಳವನ್ನು ವೀಕ್ಷಿಸಲು ವಿಐಪಿಗಳು, ವಿವಿಐಪಿಗಳು, ದಾರ್ಶನಿಕರು ಮತ್ತು ಸಂತರು ಭಾಗವಹಿಸಲಿದ್ದಾರೆ. ಸಾವಿರಾರು ಜನ ಕಲ್ಪವಾಸಿಗಳು ಕೂಡ ಕುಂಭಮೇಳಕ್ಕೆ ಆಗಮಿಸಲಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಮತ್ತು ಬಿಹಾರದ ಗ್ರಾಮೀಣ ಭಾಗದಿಂದ ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಕಲ್ಪವಾಸಿಗಳು ಕುಂಭಮೇಳ ನಡೆಯುವ ಸಂಗಮದ ದಂಡೆಯಲ್ಲಿ 44 ದಿನ ನೆಲೆಸಲಿದ್ದಾರೆ.
'ಕಲ್ಪವಾಸಿಗಳು' ಮೈಕೊರೆಯುವ ಚಳಿಯಲ್ಲೂ ನಿಷ್ಠೆಯಿಂದ ಮುಂಜಾನೆ ಸ್ನಾನ ಮಾಡಿ ಪೂಜಾ ವಿಧಿ ವಿಧಾನದಲ್ಲಿ ಭಾಗವಹಿಸುತ್ತಾರೆ. ಪ್ರತಿದಿನ ಗಂಗಾ ಸ್ನಾನ ಮಾಡಿಕೊಂಡು ಧಾರ್ಮಿಕ ಪ್ರವಚನ, ಭಜನೆ ಮತ್ತು ಕೀರ್ತನೆಗಳನ್ನು ಕೇಳಲು ಮತ್ತು ಹಾಡಲು ವಿವಿಧ ದಾರ್ಶನಿಕರ ಮತ್ತು ಸಂತರ ಶಿಬಿರಗಳಿಗೆ ಭೇಟಿ ನೀಡುತ್ತಾರೆ.
ಮಹಾಕುಂಭಮೇಳ ಆರಂಭಕ್ಕೆ ಇನ್ನು ಕೆಲವೇ ದಿನ ಬಾಕಿ ಉಳಿದಿದ್ದು ಕಲ್ಪವಾಸಿಗಳು ಈಗಾಗಲೇ ದಿನಬಳಕೆ ವಸ್ತುಗಳನ್ನು ಹೊಂದಿರುವ ಚೀಲಗಳನ್ನು ಹೊತ್ತು ಗಂಗಾನದಿಯ ದಡಕ್ಕೆ ಬರಲು ಪ್ರಾರಂಭಿಸಿದ್ದಾರೆ. ಡೇರೆಯನ್ನು ನಿರ್ಮಾಣ ಮಾಡಲು ಮರ, ಹುಲ್ಲು ಮತ್ತು ಬಿದಿರುಗಳನ್ನು ಕೂಡ ತಂದಿದ್ದು, ಡೇರೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.
ಲ್ಯೂರೆನ್ ಪೊವೆಲ್ ಜಾಬ್ಸ್ ಭಾಗಿ
ಈ ಕಲ್ಪವಾಸಿಗಳನ್ನು ನೋಡಲು ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಶ್ರೀಮಂತರು, ಉದ್ಯಮಿಗಳು ಕೂಡ ಆಗಮಿಸುವುದು ವಿಶೇಷ. ಈ ಬಾರಿ ಮಹಾಕುಂಭಮೇಳದಲ್ಲಿ ಆಪಲ್‌ನ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಆಗಿದ್ದ ಸ್ಟೀವ್ ಜಾಬ್ಸ್ ಅವರ ಪತ್ನಿ ಲ್ಯೂರೆನ್ ಪೊವೆಲ್ ಜಾಬ್ಸ್ ಕೂಡ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಲ್ಯೂರೆನ್ ಜಾಬ್ಸ್ ಜನವರಿ 13ರಂದು ಕುಂಭಮೇಳಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಜನವರಿ 29ರವರೆಗೆ ನಿರಂಜನಿ ಅಖಾರದ 'ಮಹಾಮನಾದ್ಲೇಶ್ವರ' ಸ್ವಾಮಿ ಕಾಲಿಯಾಶಾನಂದ ಶಿಬಿರದಲ್ಲಿ ತಂಗಲಿದ್ದಾರೆ ಎನ್ನಲಾಗಿದೆ. ಲಾರೆನ್ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದು, ಪ್ರವಚನಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿವೆ.












Click it and Unblock the Notifications