ಮೀನುಗಾರಿಕಾ ದೋಣಿಯಲ್ಲಿ ರೋಗಿಗಳ ರಕ್ಷಣೆ ಮಾಡಿದ 80ನೇ ವಯಸ್ಸಿನ ನರ್ಸ್ ಹಿಂಡುಂಬಿ ಗ್ಲೋಬಲ್ ಪ್ರಶಸ್ತಿಗೆ ಆಯ್ಕೆ
ಎಜ್ ಇಸ್ ಜಸ್ಟ್ ಅ ನಂಬರ್ (Age is Just a Number), ನಿಸ್ವಾರ್ಥ ಸೇವೆಗೆ ಅದು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಲಕ್ಷದ್ವೀಪದ 80 ವರ್ಷದ ವೃದ್ಧ ನರ್ಸ್ ಇಡೀ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಕವರತ್ತಿಯ ಸರ್ಕಾರಿ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕಳೆದ 53 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷದ್ವೀಪದ ನರ್ಸ್ ಹಿಂಡುಂಬಿ ಕೌರೊಮ್ ಕಕ್ಕಡ ಅವರ ಹೆಸರು ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
214 ದೇಶಗಳ 1,34,000ಕ್ಕೂ ಹೆಚ್ಚು ನರ್ಸ್‌ಗಳ ಪೈಕಿ, 2026ನೇ ಸಾಲಿನ ಆಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಅವಾರ್ಡ್‌ನ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಹಿಂಡುಂಬಿ ಅವರು ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಭಾರತದ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಜನಿಸಿದ ಹಿಂಡುಂಬಿ ಅವರ ತಂದೆ ಮಹಾತ್ಮ ಗಾಂಧೀಜಿಯವರ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಬಾಲ್ಯದಿಂದಲೇ ಸಮಾಜ ಸೇವೆಯ ಮೌಲ್ಯಗಳನ್ನ ಮೈಗೂಡಿಸಿಕೊಂಡಿದ್ದ ಅವರು, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ತರಬೇತಿ ಪಡೆದಿದ್ದರು.
ಆ ಕಾಲದಲ್ಲಿ ದ್ವೀಪದಿಂದ ಮುಖ್ಯಭೂಮಿಗೆ ಪ್ರಯಾಣಿಸುವುದು ಬಹಳ ಕಷ್ಟಕರವಾಗಿತ್ತು. ತರಬೇತಿ ಮುಗಿಸಿ ತಾಯ್ನಾಡಿಗೆ ಮರಳಿದಾಗ ಲಕ್ಷದ್ವೀಪದಲ್ಲಿ ವೈದ್ಯಕೀಯ ಸೌಲಭ್ಯಗಳು ತೀರಾ ವಿರಳವಾಗಿದ್ದವು. ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನ ಮೀನುಗಾರಿಕಾ ದೋಣಿಗಳಲ್ಲಿ ಕರೆದೊಯ್ಯಬೇಕಾದ ಪರಿಸ್ಥಿತಿ ಇತ್ತು. ಇಂತಹ ಸನ್ನಿವೇಶದಲ್ಲಿ ಹಿಂಡುಂಬಿ ಅವರು ದೋಣಿಯಲ್ಲೇ ರೋಗಿಗಳಿಗೆ ರಕ್ತ ವರ್ಗಾವಣೆ ಮಾಡಿದ ಹಾಗೂ ಭಾರಿ ಮಳೆಯ ನಡುವೆ ಹೆರಿಗೆ ಮಾಡಿಸಿದ ಸಾಹಸದ ಕಥೆಗಳಿವೆ.
20 ಸಾವಿರಕ್ಕೂ ಹೆಚ್ಚು ರೋಗಿಗಳ ಜೀವ ರಕ್ಷಣೆ
ತಮ್ಮ 53 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಹಿಂಡುಂಬಿ ಅವರು 20,000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ಮತ್ತು ತುರ್ತು ಪ್ರಕರಣಗಳನ್ನ ನಿಭಾಯಿಸಿದ್ದಾರೆ. ಸಿಬ್ಬಂದಿ ಹಾಗೂ ಸೌಲಭ್ಯಗಳ ಕೊರತೆಯ ನಡುವೆಯೂ ಅವರು ದ್ವೀಪದ ಜನರ ಆರೋಗ್ಯ ರಕ್ಷಣೆಗೆ ಹಗಲಿರುಳು ಶ್ರಮಿಸಿದ್ದಾರೆ.
ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳುತ್ತಿದ್ದ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು. ಕಾಲರಾ ಸಾಂಕ್ರಾಮಿಕ, 2004ರ ಸುನಾಮಿ ಮತ್ತು ಇತ್ತೀಚಿನ ಕೋವಿಡ್-19 ಮಹಾಮಾರಿಯಂತಹ ಸಮಯದಲ್ಲೂ ಅವರು ಎದೆಗುಂದದೆ ರೋಗಿಗಳ ಸೇವೆ ಮಾಡಿದ್ದಾರೆ. ಇಂದಿಗೂ ಲಕ್ಷದ್ವೀಪದ ಅನೇಕ ಜನರಿಗೆ ಹಿಂಡುಂಬಿ ಎಂದರೆ ತಮ್ಮ ಜೀವ ಉಳಿಸಿದ ದೇವತೆಯಂತಿದ್ದಾರೆ.
ಗ್ಲೋಬಲ್ ನರ್ಸಿಂಗ್ ಅವಾರ್ಡ್ 2026 ಗೌರವ
ನಿಯಮಗಳ ಪ್ರಕಾರ ಹಿಂಡುಂಬಿ ಅವರು ತಮ್ಮ 60ನೇ ವಯಸ್ಸಿನಲ್ಲಿಯೇ ನಿವೃತ್ತರಾಗಿದ್ದರು. ಆದರೆ, ಕೇವಲ ಮೂರೇ ತಿಂಗಳಲ್ಲಿ ಜನಸೇವೆಯ ಸೆಳೆತ ಅವರನ್ನು ಮತ್ತೆ ಆಸ್ಪತ್ರೆಗೆ ಕರೆತಂದಿತು. ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಮರಳಿದ ಅವರು 80ನೇ ವಯಸ್ಸಿನಲ್ಲೂ ಅದೇ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ.
ಅವರ ಈ ಅಸಾಧಾರಣ ಸೇವೆಗಾಗಿ 2023ರಲ್ಲಿ ಭಾರತದ ರಾಷ್ಟ್ರಪತಿಗಳು ನರ್ಸಿಂಗ್ ಕ್ಷೇತ್ರದ ಅತ್ಯುನ್ನತ 'ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ' ನೀಡಿ ಗೌರವಿಸಿದ್ದರು.
ಇದೀಗ, ಮೇ 2026ರಲ್ಲಿ ಆಸ್ಟರ್ ಡಿಎಂ ಹೆಲ್ತ್‌ಕೇರ್ ಘೋಷಿಸಿರುವ 'ಆಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಅವಾರ್ಡ್'ನ ಅಂತಿಮ 10 ಸ್ಪರ್ಧಿಗಳ ಪಟ್ಟಿಯಲ್ಲಿ ಹಿಂಡುಂಬಿ ಸ್ಥಾನ ಪಡೆದಿದ್ದಾರೆ. ಸ್ವತಂತ್ರ ಸಲಹೆಗಾರರಾದ ಅರ್ನ್ಸ್ಟ್ & ಯಂಗ್ (E&Y) ಮೇಲ್ವಿಚಾರಣೆಯಲ್ಲಿ ಮೂರು ಹಂತದ ಕಠಿಣ ಮೌಲ್ಯಮಾಪನದ ಮೂಲಕ ಈ ಆಯ್ಕೆ ನಡೆದಿದೆ.
ವಿಜೇತರಿಗೆ 2,50,000 ಯುಎಸ್ ಡಾಲರ್ ಬಹುಮಾನ ದೊರೆಯಲಿದ್ದು, ಈ ವರ್ಷದ ಅಂತ್ಯದಲ್ಲಿ ನವದೆಹಲಿಯಲ್ಲಿ ವಿಜೇತರನ್ನು ಪ್ರಕಟಿಸಲಾಗುತ್ತದೆ. ಪ್ರಶಸ್ತಿ ಏನೇ ಇರಲಿ, 80ರ ಹರೆಯದಲ್ಲೂ ಜನರ ಕಷ್ಟಗಳಿಗೆ ಮಿಡಿಯುವ ಹಿಂಡುಂಬಿ ಅವರ ಸೇವಾ ಮನೋಭಾವ ನಿಜಕ್ಕೂ ಜಗತ್ತಿಗೆ ಮಾದರಿ.


Click it and Unblock the Notifications
