ವಯನಾಡು: ಚಿನ್ನ ಕದ್ದುತರುವುದೇ ಈ ಗಗನಸಖಿ ಉದ್ಯೋಗ!

ಹೀಗೆ ಅಪರ ಉದ್ಯೋಗ ಮಾಡಿ ಸಿಕ್ಕಿಹಾಕಿಕೊಂಡ ಗಗನಸಖಿ ಯಾರಪ್ಪಾ ಅಂದರೆ ಏರ್ ಇಂಡಿಯಾದ ಹಿರೊಮಸ್ ಸೆಬಾಸ್ಟಿಯನ್. ಕೋಯಿಕ್ಕೋಡ್ ಅಂತರಾಷ್ಟ್ರೀಯ ವಿಮಾನದಲ್ಲಿ ಶುಕ್ರವಾರ ಈಕೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ ಅನ್ನಿ. ಗಗನಸಖಿ ಹಿರೊಮಸ್ ಕೊಲ್ಲಿ ರಾಷ್ಟ್ರಗಳಿಂದ ವಿಮಾನದಲ್ಲಿ ಹಾರಿಬರುವಾಗ ಯಾರ ಗಮನಕ್ಕೂ ಬೀಳದೆ ಅಕ್ರಮವಾಗಿ ಚಿನ್ನ ತರುವುದನ್ನೇ ಪಾರ್ಟ್ ಟೈಂ ಉದ್ಯೋಗ ಮಾಡಿಕೊಂಡಿದ್ದಳು.
ಕಳೆದ ನಾಲ್ಕಾರು ತಿಂಗಳಲ್ಲಿ ಕೊಚ್ಚಿ, ಚೆನ್ನೈ ಮತ್ತು ಕೋಯಿಕ್ಕೋಡ್ ವಿಮಾನ ನಿಲ್ದಾಣಗಳ ಮೂಲಕ 32 ಕೆಜಿ ಚಿನ್ನ ತಂದಿರುವುದನ್ನು ಆಕೆಯೇ ತಪ್ಪೊಪ್ಪಿಕೊಂಡಿದ್ದಾಳೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 11 ಕೋಟಿ ರೂ. ಗೂ ಅಧಿಕ ಎನ್ನಲಾಗಿದೆ.
ವಯನಾಡಿನವಳಾದ ಸೆಬಾಸ್ಟಿಯನ್ ಮತ್ತು ಅವಳ ಬಂಧು ರಹೀಲಾ ಚೀರಾಯಿ ಶುಕ್ರವಾರ 6 ಕೆಜಿ ಚಿನ್ನದ ಜತೆಗೆ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಪಡೆಯ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಏರ್ ಇಂಡಿಯಾ ಎಕ್ಸ್ ಪ್ರಸ್ ವಿಮಾನದಲ್ಲಿ ಗಗನಸಖಿಯಾಗಿ ಸೇರಿದ ಬಳಿಕ ಹಿರೊಮಸ್, ಅನೇಕ ಸಲ ಸುಂಕ ತಪ್ಪಿಸಿ ವಿದೇಶಿ ಸರಕುಗಳನ್ನು ತಂದಿದ್ದಾಳೆ. ಆದರೆ ಕಳೆದ ಕೆಲವು ತಿಂಗಳಿಂದ ಗಲ್ಫ್ ದೇಶಗಳಿಂದ ಅಕ್ರಮವಾಗಿ ಚಿನ್ನ ತರುವುದು ಅವಳ ಖಾಯಂ ಅರೆಕಾಲಿಕ ಉದ್ಯೋಗವಾಗಿತ್ತು. ವಿಮಾನ ಸಿಬ್ಬಂದಿಯಾದ್ದರಿಂದ ಹೆಚ್ಚಿನ ತಪಾಸಣೆಯಿಲ್ಲದೆ ಪಾರಾಗುತ್ತಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿನ್ನದ ಬೆಲೆ ವಿಪರೀತ ಏರಿರುವುದರಿಂದ ಗಲ್ಫ್ ದೇಶದಿಂದ ಸುಂಕ ತಪ್ಪಿಸುವ ಅಕ್ರಮವಾಗಿ ಚಿನ್ನ ತರುವ ಹಲವು ತಂಡಗಳು ಸಕ್ರಿಯವಾಗಿವೆ. ದೇಶದ ಬಹಳಷ್ಟು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆಗಾಗ ಚಿನ್ನ ವಶವಾಗುವ ಸುದ್ದಿಗಳು ವರದಿಯಾಗಿರುತ್ತವೆ. ಆದರೆ ಕೇರಳದ ಮೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಕ್ರಮ ಚಿನ್ನ ಗರಿಷ್ಠ ಪ್ರಮಾಣದಲ್ಲಿ ವಶವಾಗಿದೆ.












Click it and Unblock the Notifications