ಕೇರಳ ಹೆಸರನ್ನು "ಕೇರಳಂ" ಎಂದು ಬದಲಾಯಿಸುವ ಬೇಡಿಕೆ: ಕೇಂದ್ರದಿಂದ ಗ್ರೀನ್ ಸಿಗ್ನಲ್ ಸಾಧ್ಯತೆ
ಕೇರಳ ರಾಜ್ಯದ ಹೆಸರನ್ನು ಅದರ ಮೂಲ ಮಲಯಾಳಂ ಉಚ್ಚಾರಣೆಗೆ ಅನುಗುಣವಾಗಿ 'ಕೇರಳಂ' ಎಂದು ಬದಲಾಯಿಸಬೇಕೆಂಬ ದಶಕಗಳ ಬೇಡಿಕೆಗೆ ಕೊನೆಗೂ ಚಾಲನೆ ಸಿಗುವ ಲಕ್ಷಣಗಳು ಕಾಣುತ್ತಿವೆ. ರಾಜ್ಯ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದ್ದ ನಿರ್ಣಯಕ್ಕೆ ಕೇಂದ್ರ ಸಚಿವ ಸಂಪುಟವು ಶೀಘ್ರದಲ್ಲೇ ಅಸ್ತು ಎನ್ನುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ್ದ ಈ ನಿರ್ಣಯಕ್ಕೆ ಪ್ರತಿಪಕ್ಷಗಳು ಮಾತ್ರವಲ್ಲದೆ, ಪ್ರಸ್ತುತ ಶಾಸಕರನ್ನು ಹೊಂದಿಲ್ಲದಿದ್ದರೂ ಕೇರಳ ಬಿಜೆಪಿ ಘಟಕವು ಸಂಪೂರ್ಣ ಬೆಂಬಲ ಘೋಷಿಸಿದೆ. ಭಾರತೀಯ ಸಂವಿಧಾನದ ವಿಧಿ 3ರ ಅಡಿಯಲ್ಲಿ ಸಂವಿಧಾನದ ಮೊದಲ ಅನುಸೂಚಿಯನ್ನು ತಿದ್ದುಪಡಿ ಮಾಡುವ ಮೂಲಕ ಈ ಬದಲಾವಣೆ ತರುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.

ಹೆಸರು ಬದಲಾವಣೆಗೆ ಕಾರಣವೇನು?
ಮಲಯಾಳಂ ಭಾಷೆಯಲ್ಲಿ ರಾಜ್ಯದ ಹೆಸರನ್ನು 'ಕೇರಳಂ' ಎಂದೇ ಉಚ್ಚರಿಸಲಾಗುತ್ತದೆ. ಆದರೆ ಅಧಿಕೃತ ದಾಖಲೆಗಳಲ್ಲಿ ಇದು 'ಕೇರಳ' ಎಂದು ನಮೂದಾಗಿದೆ. ವಸಾಹತುಶಾಹಿ ಪ್ರಭಾವದಿಂದ ಇಂದು ಹಾಗೆಯೇ ಮುಂದುವರಿದಿದೆ. 'ಕೇರಳ' ಎಂಬುದು ಬ್ರಿಟಿಷರ ಕಾಲದ ಉಚ್ಚಾರಣೆಯಾಗಿದ್ದು, ಇದನ್ನು ಬದಲಿಸಿ ಸ್ಥಳೀಯ ಸಂಸ್ಕೃತಿ ಮತ್ತು ಐತಿಹಾಸಿಕ ಬೇರುಗಳನ್ನು ಬಿಂಬಿಸುವ 'ಕೇರಳಂ' ಹೆಸರನ್ನು ಅಧಿಕೃತಗೊಳಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.
ರಾಜ್ಯದ ಹೆಸರನ್ನು ಬದಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮೊದಲು ರಾಜ್ಯ ಸರ್ಕಾರವು ಪ್ರಸ್ತಾವನೆ ಸಲ್ಲಿಸಬೇಕು. ನಂತರ ಕೇಂದ್ರ ಗೃಹ ಸಚಿವಾಲಯವು ರೈಲ್ವೆ, ರಿಜಿಸ್ಟ್ರಾರ್ ಜನರಲ್ ಮುಂತಾದ ವಿವಿಧ ಇಲಾಖೆಗಳಿಂದ ಆಕ್ಷೇಪಣಾ ರಹಿತ ಪತ್ರ (ಎನ್‌ಒಸಿ) ಪಡೆಯಬೇಕು. ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ನಂತರ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಬೇಕಾಗುತ್ತದೆ.
2010ರಲ್ಲಿ ಆಗಿನ ಸಿಎಂ ವಿ.ಎಸ್. ಅಚ್ಯುತಾನಂದನ್ ಈ ಬಗ್ಗೆ ಪ್ರಯತ್ನಿಸಿದ್ದರು. 2023ರಲ್ಲಿ ಮಂಡಿಸಿದ್ದ ನಿರ್ಣಯವನ್ನು ಕೆಲವು ತಾಂತ್ರಿಕ ಕಾರಣಗಳಿಂದ ಕೇಂದ್ರವು ವಾಪಸ್ ಕಳುಹಿಸಿತ್ತು. ಮಾರ್ಚ್ 6 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಪ್ರಣಾಳಿಕೆ ಬಿಡುಗಡೆ ಮಾಡಲು ಕೊಚ್ಚಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮಲಯಾಳಂನಲ್ಲಿ ತಮ್ಮ ಭಾಷಣ ಆರಂಭಿಸಿ ಈ 'ಹೆಸರು ಬದಲಾವಣೆ'ಯ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ. ಇದು ಕೇರಳದ ಜನರ ಭಾವನೆಗಳನ್ನು ಗೌರವಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದು ಬಿಜೆಪಿಯ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ಮಲಯಾಳಿಗಳ ಪ್ರಕಾರ 'ಕೇರಳ' ಎಂಬುದು ವಿದೇಶಿ ಅಥವಾ ಇಂಗ್ಲಿಷ್ ಉಚ್ಚಾರಣೆಯಾದರೆ, 'ಕೇರಳಂ' ಎಂಬುದು ಅವರ ಮಣ್ಣಿನ ಸೊಗಡಿನ ಹೆಸರು. ಈ ಭಾಷಾ ಸಮಾನತೆಯನ್ನು ತರಲು ಈಗ ಕೇಂದ್ರ ಸರ್ಕಾರವು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸುವುದು ಕೇವಲ ಹೆಸರಿನ ಬದಲಾವಣೆಯಲ್ಲ, ಬದಲಾಗಿ ಅದು ವಸಾಹತುಶಾಹಿ ಪ್ರಭಾವದಿಂದ ಹೊರಬಂದು ತನ್ನ ಸ್ವಂತ ಭಾಷಾ ಅಸ್ಮಿತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಎನ್ನಲಾಗಿದೆ.
2011ರಲ್ಲಿ 'ಒರಿಸ್ಸಾ' ಎಂಬ ಹೆಸರನ್ನು 'ಒಡಿಶಾ' ಎಂದು ಬದಲಾಯಿಸಲಾಯಿತು. ಪಶ್ಚಿಮ ಬಂಗಾಳವನ್ನು 'ಪಶ್ಚಿಮ ಬಂಗಾ' ಎಂದು ಹೆಸರು ಬದಲಾಯಿಸಲು 2011 ಮತ್ತು 2016ರಲ್ಲಿ ಪ್ರಯತ್ನ ನಡೆದಿದ್ದರೂ ಕೇಂದ್ರವು 2020ರಲ್ಲಿ ಅದನ್ನು ತಿರಸ್ಕರಿಸಿತ್ತು.













Click it and Unblock the Notifications