ಪ್ರಧಾನಿ ಕೇರಳ ಭೇಟಿ: ಪ್ರಧಾನಿ ಮೋದಿಗೆ ಜೀವ ಬೆದರಿಕೆ ಹಾಕಿದ್ದ ಕೊಚ್ಚಿ ವ್ಯಕ್ತಿಯ ಬಂಧನ
ತಿರುವನಂತಪುರ, ಏಪ್ರಿಲ್. 23: ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನ ರಾಜ್ಯ ಬಿಜೆಪಿ ಕಚೇರಿಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಕೇರಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆದರಿಕೆ ಪತ್ರ ಬರೆದಿದ್ದರು ಎಂದು ಆರೋಪಿಸಲಾಗಿರುವ ಕೊಚ್ಚಿಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿ ಪೊಲೀಸ್ ಕಮಿಷನರ್ ಕೆ ಸೇತು ರಾಮನ್ ಈ ಬಗ್ಗೆ ಮಾಹಿತಿ ನೀಡಿದ್ದು, ಬೆದರಿಕೆ ಪತ್ರವನ್ನು ಕಳುಹಿಸಿದ್ದಾರೆಂದು ಆರೋಪಿಸಿ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆದರಿಕೆ ಪತ್ರದ ಹಿಂದಿನ ನಿಜವಾದ ಉದ್ದೇಶವು ಆರೋಪಿಗೆ ತನ್ನ ನೆರೆಹೊರೆಯವರೊಂದಿಗಿನ ವೈಯಕ್ತಿಕ ದ್ವೇಷ ಎಂದು ಹೇಳಿದ್ದಾರೆ.

"ಪ್ರಧಾನಿ ವಿರುದ್ಧ ಬೆದರಿಕೆ ಪತ್ರ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ ಕ್ಸೇವಿಯರ್ ಅವರನ್ನು ನಿನ್ನೆ ಬಂಧಿಸಲಾಗಿತ್ತು. ಪತ್ರ ಬರೆಯಲು ಕಾರಣ ವೈಯಕ್ತಿಕ ದ್ವೇಷ. ತನ್ನ ನೆರೆಯವರ ವಿರುದ್ಧ ಷಡ್ಯಂತ್ರ ಮಾಡಲು ಪತ್ರ ಬರೆದಿದ್ದಾನೆ. ವಿಧಿವಿಜ್ಞಾನ ಇಲಾಖೆ ಸಹಾಯದಿಂದ ನಾವು ಆತೋಪಿಯನ್ನು ಪತ್ತೆ ಮಾಡಿದ್ದೇವೆ" ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಒಟ್ಟು 2,060 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. "ಪ್ರಧಾನಿಯವರ ಕೊಚ್ಚಿ ಭೇಟಿಗಾಗಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. 2060 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಅಂಗವಾಗಿ ಮಧ್ಯಾಹ್ನ 2 ಗಂಟೆಯಿಂದ ಸಂಚಾರ ನಿರ್ಬಂಧವನ್ನು ಸಹ ಹೇರಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

"ಪ್ರಧಾನ ಮಂತ್ರಿಗಳ ರೋಡ್‌ಶೋನಲ್ಲಿ 15,000 ಮತ್ತು ಯುವಂ-23 ಕಾರ್ಯಕ್ರಮಕ್ಕೆ 20,000 ಜನರನ್ನು ನಿರೀಕ್ಷಿಸಲಾಗಿದೆ. ಯುವಂ-23 ನಲ್ಲಿ ಭಾಗವಹಿಸುವವರು ಮೊಬೈಲ್ ಫೋನ್‌ಗಳನ್ನು ಮಾತ್ರ ತರಬಹುದು" ಎಂದು ಕೊಚ್ಚಿ ಪೊಲೀಸ್ ಕಮಿಷನರ್ ಕೆ ಸೇತು ರಾಮನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಉದ್ಘಾಟಿಸಲು ಮೋದಿ ಏಪ್ರಿಲ್ 24 ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ನಗರದಲ್ಲಿ ಪ್ರಧಾನಿಯವರು ರೋಡ್‌ಶೋ ನಡೆಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಈ ಹಿಂದೆ ಹೇಳಿದ್ದರು.
ಇನ್ನು, ಏಪ್ರಿಲ್ 25ರ ಮಂಗಳವಾರ ಕೇರಳದ ಬಂದರು ನಗರ ಕೊಚ್ಚಿಯ ಸುತ್ತಲಿನ ಹತ್ತು ಸಣ್ಣ ದ್ವೀಪಗಳನ್ನು ಸಂಪರ್ಕಿಸುವ ದೇಶದ ಮೊದಲ ಜಲ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ವಾಟರ್ ಮೆಟ್ರೋ ಯೋಜನೆಗೆ ಒಟ್ಟು 1,137 ಕೋಟಿ ರೂಪಾಯಿ ವೆಚ್ಚವಾಗಿದೆ. ಇದಕ್ಕೆ ಜರ್ಮನ್ ಧನಸಹಾಯ ಸಂಸ್ಥೆ ಕೆಎಫ್ ಡಬ್ಲ್ಯೂ ಮತ್ತು ರಾಜ್ಯ ಸರ್ಕಾರವು ಹಣ ಹೂಡಿದೆ.
ಈ ವಾಟರ್ ಮೆಟ್ರೋ ಯೋಜನೆಯು ಕೊಚ್ಚಿಯ ಸುಂದರವಾದ ಹಿನ್ನೀರಿನ ಮೂಲಕ ಅಗ್ಗದ ಪ್ರಯಾಣವನ್ನು ಒದಗಿಸುತ್ತದೆ. ಜಲ ಮೆಟ್ರೋ ರಾಜ್ಯದ ಜಲ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ತರಲಿದೆ ಮತ್ತು ಇದು ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ನೀಡಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇಂಧನ-ಸಮರ್ಥ ಮತ್ತು ಪರಿಸರ ಸ್ನೇಹಿ ಜಲ ಮೆಟ್ರೋ ಸೇವೆಯು ನಗರ ಪ್ರಯಾಣದ ಪರಿಕಲ್ಪನೆಯನ್ನು ಬದಲಾಯಿಸುತ್ತದೆ. ವಾಟರ್ ಮೆಟ್ರೋ ಯೋಜನೆ ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹೊಸ ಉತ್ತೇಜನವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications