New Railway Line: ಕೇರಳ ಚುನಾವಣೆ ಹೊತ್ತಲ್ಲಿ ನೀಲಂಬೂರು-ನಂಜನಗೂಡು ರೈಲು ಯೋಜನೆ ಮುನ್ನೆಲೆಗೆ
ನವದೆಹಲಿ: ಕೇಂದ್ರ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ದೇಶದಾದ್ಯಂತ ಹೊಸ ರೈಲು ಯೋಜನೆಗಳು, ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಗೊಳ್ಳುತ್ತಿವೆ. ಇದೀಗ ಕರ್ನಾಟಕ ಹಾಗೂ ನೆರೆಯ ಕೇರಳ ರಾಜ್ಯ ಸಂಪರ್ಕಿಸುವ ಉದ್ದೇಶಿತ ರೈಲು ಯೋಜನೆಗೆ ವೇಗ ಸಿಗುವ ಮುನ್ಸೂಚನೆ ಸಿಕ್ಕಿದೆ. ಈ ಸಂಬಂಧ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕೇರಳ ವಿಧಾನಸಭಾ ಚುನಾವಣೆ 2026ರ ಸಂದರ್ಭದಲ್ಲಿ ಈ ಮಹತ್ವದ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಾಮುಖ್ಯತೆ ಪಡೆಯಲಿದೆ.
ಮೆಟ್ರೋ ರೈಲು ನಿಗಮದ ದೆಹಲಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಇ. ಶ್ರೀಧರನ್ ಅವರು ಕೇರಳ-ಕರ್ನಾಟಕ ರೈಲು ಸಂಪರ್ಕ ಅಭಿವೃದ್ಧಿ, ಹೊಸ ರೈಲು ಮಾರ್ಗ ಯೋಜನೆ ಕುರಿತು ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಶುಕ್ರವಾರ ಭೇಟಿ ಮಾಡಿದರು. ಸುದೀರ್ಘ ಮಾತುಕತೆ ನಡೆಸಿದರು. ರೈಲು ಸಂಪರ್ಕ ಸುಧಾರಣೆ ಬಗ್ಗೆ ಶ್ರೀಧರನ್ ಅನೇಕ ವಿಚಾರಗಳನ್ನು ಸೂಚಿಸಿದರು ಎಂದು ಸಚಿವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕರ್ನಾಟಕದ ಮೈಸೂರು ಜಿಲ್ಲೆಗೆ ಸಂಪರ್ಕ, ಪ್ರಯೋಜನ
ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ಮತ್ತು ಕರ್ನಾಟಕದ ಮೈಸೂರು ಜಿಲ್ಲೆಯ ನಂಜನಗೂಡು ನಡುವಿನ ಹೊಸ ರೈಲು ಮಾರ್ಗದ ಪ್ರಸ್ತಾವಿತ ಯೋಜನೆ ಇದಾಗಿದೆ. ಇದೇ ವಿಚಾರವಾಗಿ ಶ್ರೀಧರನ್ ಅವರು ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಯೋಜನೆ ಕಾರ್ಯಗತಗೊಂಡರೆ ಏನೆಲ್ಲ ಪ್ರಯೋಜನಗಳಿವೆ, ಎರಡು ರಾಜ್ಯಗಳ ಮಧ್ಯದ ರೈಲು ಸಾರಿಗೆ ವ್ಯವಸ್ಥೆ ಸುಧಾರಣೆ ಆಗಲಿದೆ. ಪ್ರವಾಸೋಧ್ಯಮ ಸೇರಿದಂತೆ ಸಾಕಷ್ಟು ವಲಯಗಳಿಗೆ, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದನ್ನು ವಿವರವಾಗಿ ಚರ್ಚಿಸಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಯೋಜನೆಯಿಂದ ಕೇರಳದಲ್ಲಿ ರೈಲು ಮೂಲಸೌಕರ್ಯ ಮತ್ತು ಸಂಪರ್ಕ ಸುಧಾರಿಸಲಿದೆ. ಐದು ವರ್ಷಗಳ ಹಿಂದೆ, ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಾಗ, ನೀಲಂಬೂರು-ನಂಜನಗೂಡು ರೈಲು ಮಾರ್ಗವು ಕರ್ನಾಟಕ ಮತ್ತು ಕೇರಳ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ ಮತ್ತು ಕರ್ನಾಟಕಕ್ಕೆ ಕೊಚ್ಚಿ ಬಂದರಿಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ಶ್ರೀಧರನ್ ಮಾಹಿತಿ ನೀಡಿದ್ದರು. ಏಪ್ರಿಲ್‌ನಲ್ಲಿ ಕೇರಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಕಾರಣ ಈ ವಿಷಯ ಮತ್ತೆ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ನಾಯಕ ಮತ್ತು ಸಂಸದರಾದ ರಾಹುಲ್ ಗಾಂಧಿ ಅವರು ಸಹ ವಯನಾಡಿನ ಮೂಲಕ ಹಾದುಹೋಗುವ ನಿಲಂಬೂರ್-ನಂಜನಗೂಡು ರೈಲ್ವೆ ಯೋಜನೆಯನ್ನು ಪುನರುಜ್ಜೀವನಗೊಳಿಸುವಂತೆ ಈ ಹಿಂದೆ ಮನವಿ ಮಾಡಿಕೊಂಡಿದ್ದಾರು. ಆಗ ಅವರು 2024 ರಲ್ಲಿ ವಯನಾಡಿನಿಂದ ಮರು ಆಯ್ಕೆ ಬಯಸಿದ್ದರು. ಅಂದಿನ ಸಂದರ್ಭದಲ್ಲಿ ರೈಲು ಸಾರಿಗೆ ಅಭಿವೃದ್ಧಿ ಯೋಜನೆ ಬಗ್ಗೆ ಮಾತನಾಡಿದ್ದರು.
ತಡೆರಹಿತ ರೈಲು ಸಂಪರ್ಕ
ಕೆಲವು ಭಾಗದ ರೈಲು ಬಳಕೆದಾರರು ಸಹ ನಿಲಂಬೂರಿನಿಂದ ಹೊಸ ಮಾರ್ಗವನ್ನು ನಿರ್ಮಿಸಬೇಕು. ಕರ್ನಾಟಕಕ್ಕೆ ಸಂಪರ್ಕ ಸಿಗಬೇಕೆಂದು ಆಗ್ರಹಿಸಿದ್ದಾರೆ. ಪಾಲಕ್ಕಾಡ್ ವಿಭಾಗದ ನಿಲಂಬೂರಿನಿಂದ ಶೋರ್ನೂರ್ ಜಂಕ್ಷನ್‌ಗೆ ಈಗಾಗಲೇ ಒಂದೇ ಒಂದು ರೈಲು ಮಾರ್ಗವಿದೆ. ಹೊಸ ಮಾರ್ಗವು ನಿರ್ಮಾಣಗೊಂಡರೆ ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಶೋರ್ನೂರ್ ಜಂಕ್ಷನ್ ನಡುವೆ ತಡೆರಹಿತ ರೈಲು ಸಂಪರ್ಕ ಸಿಗುತ್ತದೆ. ಕೇರಳ ಹಾಗೂ ಮೈಸೂರು ಮಾರ್ಗದ ಹಲವು ಜಿಲ್ಲೆಗಳಿಗೆ ಸಂಪರ್ಕ ಸಾಧ್ಯವಾಗುತ್ತದೆ. ಮೈಸೂರು-ನಂಜನಗೂಡಿನಿಂದ ಬೆಂಗಳೂರಿಗೆ ಈಗಾಗಲೇ ರೈಲು ಸಂಪರ್ಕ ವಿದೆ.
Dr. E. Sreedharan visited today. Discussions were held on strengthening rail connectivity. The Nilambur-Nanjangud new line project was discussed in detail.
— Ashwini Vaishnaw (@AshwiniVaishnaw) January 16, 2026
Dr. E. Sreedharan suggested many ideas to improve rail infrastructure and connectivity in Kerala. pic.twitter.com/2qlTF3wOm7
ಕೇರಳ-ನಂಜನಗೂಡು ರೈಲು ಯೋಜನೆ ಅನುಷ್ಠಾನ, ಅನುಮೋದನೆ ಕುರಿತು ಕೇಂದ್ರ ಸರ್ಕಾರ, ರೈಲ್ವೆ ಸಚಿವರು ಇನ್ನೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಒಂದು ವೇಳೆ ಕೇರಳ ಚುನಾವಣೆ ದೃಷ್ಟಿಯಿಂದ ಈ ಬಾರಿ ಈ ವಿಚಾರ ಅನುಮೋದನೆ ಹಂತಕ್ಕೆ ಹೋದರೂ ಅಚ್ಚರಿಯಿಲ್ಲ. ಮತ್ತೊಂದೆಡೆ ಈ ರೈಲು ಯೋಜನೆ ಬಂಡೀಪುರ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಕಾರಣಕ್ಕೆ ಒಂದಷ್ಟು ಪರಿಸರ ಪ್ರೇಮಿಗಳು ಯೋಜನೆಗೆ ಜಾರಿಗೊಳಿಸದಂತೆ ಒತ್ತಾಯಿಸಿದ್ದಾರೆ.












Click it and Unblock the Notifications