ನರಬಲಿ ಘಟನೆ ಕುರಿತು ವರದಿ ನೀಡಿ: ಕೇರಳ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ
ನವದೆಹಲಿ, ಅಕ್ಟೋಬರ್ 15 : ಕೇರಳದಲ್ಲಿ ಬೆಳಕಿಗೆ ಬಂದ ನರಬಲಿ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡಬೇಕೆಂದು ಕೇರಳ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ನೋಟಿಸ್ ನೀಡಿದೆ.
ದಿಢೀರನೇ ಶ್ರೀಮಂತರಾಗುವ ಬಯಕೆ ಹೊಂದಿದ್ದ ದಂಪತಿ(ಭಗವಲ್ ಸಿಂಗ್ ಮತ್ತು ಲೈಲಾ) ನಡೆಸಿದ ನರಬಲಿ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಹತರಾಗಿದ್ದಾರೆ. ಈ ಇಬ್ಬರು ಮಹಿಳೆಯರನ್ನು ದಂಪತಿ ಮನೆಗೆ ಕರೆತಂದಿದ್ದ ಪ್ರಮುಖ ಆರೋಪಿ ಶಫಿ ವಿಕೃತ ಕಾಮಿ ಎಂದು ತಿಳಿದುಬಂದಿದೆ. ಆತ ಈ ಇಬ್ಬರು ಮಹಿಳೆಯರಿಗೆ ಹಣದ ಆಮಿಷ ಒಡ್ಡಿ ದಂಪತಿ ಮನೆಗೆ ಕರೆತಂದಿದ್ದಾನೆ. ಅಲ್ಲಿ ಅವರಿಗೆ ದೈಹಿಕ ಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕೊಲೆಗಳಿಗೆ ಕಾರಣ, ದಂಪತಿಯ ಮೂಢನಂಬಿಕೆ ಎಂದು ಗೊತ್ತಾಗಿದೆ. ಅವರು ಆದಷ್ಟು ಬೇಗನೆ ಶ್ರೀಮಂತರಾಗುವ ಉದ್ದೇಶ ಹೊಂದಿದ್ದರು. ಆ ಹಿನ್ನೆಲೆಯಲ್ಲಿ ನರಬಲಿ ಮಾಡಲು ಬಯಸಿದ್ದರು. ಪ್ರಮುಖ ಆರೋಪಿ ಶಫಿ ಈ ದಂಪತಿಗಳನ್ನು ಫೇಸ್‌ಬುಕ್‌ನಲ್ಲಿ ಪರಿಚಯಸಿಕೊಂಡಿದ್ದನು.

ಈ ಅಮಾನುಷ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಾನವ ಹಕ್ಕುಗಳ ಆಯೋಗ ಕೇರಳ ಸರ್ಕಾರಕ್ಕೆ ನೋಟಿಸ್ ನೀಡಿದೆ. ಪ್ರಕರಣದ ತನಿಖೆ ಎತ್ತ ಸಾಗುತ್ತಿದೆ. ತೆಗೆದುಕೊಂಡ ಕ್ರಮಗಳೇನು ಎಂಬುದರ ಬಗ್ಗೆ ಕೇರಳ ಸರ್ಕಾರ ವರದಿ ನೀಡಬೇಕೆಂದು ಆಯೋಗ ತಾಕೀತು ಮಾಡಿದೆ.
ಯಾವುದೇ ಕಾನೂನಿನ ಭಯವಿಲ್ಲದೆ ಆಚರಣೆಯ ಹೆಸರಿನಲ್ಲಿ ಮಹಿಳೆಯರನ್ನು ಹತ್ಯೆಮಾಡಲಾಗಿದೆ. ನಾಗರಿಕ ಸಮಾಜದಲ್ಲಿ ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿರುವುದು ವಿಲಕ್ಷಣ ಸಂಗತಿ. ಇಲ್ಲಿ ಸಂತ್ರಸ್ತರ ಬದುಕುವ ಹಕ್ಕನ್ನೇ ಗಾಳಿಗೆ ತೂರಲಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
'ರಾಜ್ಯ ಸರ್ಕಾರ ಜನರ ರಕ್ಷಣೆಗೆ ಇದೆ. ಅವರ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿದೆ. ಇಂತಹ ಹೀನ ಕೃತ್ಯಗಳಿಂದ ಜನರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಸರ್ಕಾರ ಪ್ರದರ್ಶಿಸಬೇಕಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಆಯೋಗ ಹೇಳಿದೆ.
ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದು, ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಆದೇಶಿಸಿದೆ.
ಸಂತ್ರಸ್ತರ ಕುಟುಂಬಗಳಿಗೆ ಪಾವತಿಸಿದ ಪರಿಹಾರ ಹಾಗೂ ತನಿಖೆ ಕುರಿತು ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ.
12 ಮಹಿಳೆಯರ ನಾಪತ್ತೆ ಪ್ರಕರಣಗಳ ಮರುತನಿಖೆ
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ನರಬಲಿ ಪ್ರಕರಣ ಪೊಲೀಸರನ್ನು ಚಿಂತೆಗೀಡುಮಾಡಿದೆ. ಇದೇ ಜಿಲ್ಲೆಯಲ್ಲಿ 2017ರಿಂದ ಈ ವರೆಗೆ 12 ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಆರೋಪಿ ಶಫಿ ಇದೇ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದ್ದಾನೆ. ಈತ ವಿಕೃತಿ ಕಾಮಿಯಾಗಿದ್ದು, ಹಲವು ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಇವೆಲ್ಲ ಘಟನೆಗಳು ಹಲವು ಸಂಶಯಗಳನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಮುಚ್ಚಿಹೋಗಿದ್ದ ನಾಪತ್ತೆ ಪ್ರಕರಣಗಳನ್ನು ಮತ್ತೆ ತೆರೆಯಲಾಗಿದೆ. ಮಹಿಳೆಯರ ನಾಪತ್ತೆಗೂ, ಶಫಿಯ ಅಪರಾಧಗಳಿಗೂ ಸಂಬಂಧವಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ಕೇರಳದಲ್ಲಿ ನಡೆದಿರುವ ನರಬಲಿಯಂತಹ ಹೇಯ ಕೃತ್ಯ ನಾಗರಿಕ ಸಮುದಾಯವನ್ನು ಬೆಚ್ಚಿಬೀಳಿಸಿರುವುದಂತೂ ಸತ್ಯ.












Click it and Unblock the Notifications