ಮನೀಶ್ ಸಿಸೋಡಿಯಾ ಬಂಧನ ಖಂಡಿಸಿದ ಕೇರಳ ಸಿಎಂ
ಪಿಣರಾಯಿ ಅವರು ಬಿಜೆಪಿ ವಿರೋಧ ಪಕ್ಷಗಳನ್ನು ಬೆದರಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದು ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆದಿದ್ದಾರೆ.
ತಿರುವನಂತಪುರಂ, ಫೆಬ್ರವರಿ 28: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಫೆಬ್ರವರಿ 27 ರಂದು ಎಎಪಿ ನಾಯಕ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನದ ಖಂಡಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಿಣರಾಯಿ ಅವರು ಬಿಜೆಪಿ ವಿರೋಧ ಪಕ್ಷಗಳನ್ನು ಬೆದರಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದು ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆದಿದ್ದಾರೆ. ದೇಶದಲ್ಲಿ ಪ್ರತಿಪಕ್ಷಗಳ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದು ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಕ್ರಮ ಎಂದು ಪಿಣರಾಯಿ ಹೇಳಿದರು.

ಪ್ರತಿಪಕ್ಷಗಳನ್ನು ಬೆದರಿಸಲು ಬಿಜೆಪಿ ಕೇಂದ್ರ ಸರ್ಕಾರದ ಏಜೆನ್ಸಿಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬುದಕ್ಕೆ ಸಿಬಿಐನಿಂದ ಮನೀಶ್ ಸಿಸೋಡಿಯಾ ಬಂಧನವು ಮತ್ತೊಂದು ಉದಾಹರಣೆಯಾಗಿದೆ. ಇದು ಅಧಿಕಾರ ದುರುಪಯೋಗ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇಂತಹ ದಮನ ನಮ್ಮ ರಾಷ್ಟ್ರದ ತಳಹದಿಯನ್ನೇ ಹಾಳುಮಾಡುತ್ತದೆ ಮತ್ತು ಅದನ್ನು ವಿರೋಧಿಸಬೇಕು ಎಂದು ಪಿಣರಾಯಿ ಟ್ವೀಟ್ ಮಾಡಿದ್ದಾರೆ.
ರದ್ದಾದ ದೆಹಲಿ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಸಿಸೋಡಿಯಾ ಅವರನ್ನು ಬಂಧಿಸಿತ್ತು. ದೇಶದಲ್ಲಿ ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಈ ರೀತಿಯ ಬಂಧನಗಳ ಮೂಲಕ ಕೇಂದ್ರ ಸರ್ಕಾರವು ಅಂತಹ ಪ್ರಮುಖ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಗಳ ವಿರುದ್ಧ ಜನರು ತೀವ್ರ ಪ್ರತಿಭಟನೆಗಳನ್ನು ತೋರಿಸಬೇಕೆಂದು ಪಿಣರಾಯಿ ಒತ್ತಾಯಿಸಿದರು. ದೆಹಲಿ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರು ರಾಜ್ಯ ಸಂಪುಟದ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ವರದಿಗಳ ಪ್ರಕಾರ, ಆರೋಗ್ಯ ಸೇರಿದಂತೆ ಸಿಸೋಡಿಯಾ ಅವರ ಖಾತೆಗಳನ್ನು ದೆಹಲಿ ಕ್ಯಾಬಿನೆಟ್ ಸಚಿವರಾದ ಕೈಲಾಶ್ ಗಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಿಗೆ ನೀಡುವ ಸಾಧ್ಯತೆಯಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ತನ್ನ ಬಂಧನವನ್ನು ಪ್ರಶ್ನಿಸಿ ಸಿಸೋಡಿಯಾ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಗಂಟೆಗಳ ನಂತರ ಈ ಸುದ್ದಿ ಬಂದಿದೆ.
ಪರ್ಯಾಯ ಪರಿಹಾರಗಳನ್ನು ಪಡೆದುಕೊಳ್ಳುವಂತೆ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಕೇಳಿದೆ. ಭಾನುವಾರ ಸಂಜೆ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ದೆಹಲಿ ರೋಸ್ ಅವೆನ್ಯೂ ಕೋರ್ಟ್ ಅವರನ್ನು ಮಾರ್ಚ್ 4 ರವರೆಗೆ 5 ದಿನಗಳ ಸಿಬಿಐ ಕಸ್ಟಡಿಗೆ ಕಳುಹಿಸಿದೆ. ಆರೋಗ್ಯ ಸಚಿವಾಲಯವನ್ನು ಹೊಂದಿದ್ದ ಜೈನ್ ಅವರು ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ತಿಂಗಳಿನಿಂದ ಜೈಲಿನಲ್ಲಿದ್ದರು.












Click it and Unblock the Notifications