Kerala Bus Viral Video: 'ದೀಪಕ್ ಕಾಮಿ ಆಗಿರಲ್ಲಿಲ್ಲ, ಆತ ಕರುಣಾಮಯಿ', ಕಣ್ಣೀರಿಟ್ಟು ವ್ಯಕ್ತಿತ್ವ ಹೊಗಳಿದ ಯುವತಿ
ಕೋಳಿಕ್ಕೋಡ್: ಇತ್ತೀಚೆಗೆ ಜನರಲ್ಲಿ ವೈರಲ್ ಗೀಳು ಹೆಚ್ಚಾಗುತ್ತಿದೆ. ಸರಿ-ತಪ್ಪು ನೋಡದೇ ವಿಡಿಯೋ ಮಾಡಿ ಹರಿಬಿಡುವ ಚಾಳಿ ಚಾಲ್ತಿಯಲ್ಲಿದೆ. ಇಂಥದ್ದೆ ವೈರಲ್ ವಿಡಿಯೋ ದೀಪಕ್ ಅವರ ಜೀವವನ್ನೇ ಬಲಿ ಪಡೆದ ಕೇರಳದ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅವರ ಸಾವಿನ ಕುರಿತು ಇನ್ನೋರ್ವ ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆತ್ಮಹತ್ಯೆಗೀಡಾದ ವ್ಯಕ್ತಿ 'ಆತ ಕಾಮಿ ಆಗಿರಲಿಲ್ಲ. ಬದಲಿಗೆ ಒಬ್ಬ ಕರುಣಾಮಯಿ ಅಣ್ಣನಾಗಿದ್ದ' ಎಂದು ಕಣ್ಣೀರಿಟ್ಟು ಯುವತಿ ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಹಿಳೆಯೊಬ್ಬರು ವೈರಲ್ ಗೀಳಿಗೆ ಬಸ್ ನಲ್ಲಿ ಸೆರೆ ಹಿಡಿದಿದ್ದ ವಿಡಿಯೋವೊಂದು ಮನೆಗೆ ಆಧಾರವಾಗಿದ್ದ ವ್ಯಕ್ತಿ ದೀಪಕ್ ಸಾವಿಗೆ ಕಾರಣವಾಯಿತಲ್ಲ ಎಂದು ಸಾರ್ವಜನಿಕರು ವಿಷಾಧಿಸುತ್ತಿದ್ದಾರೆ. ವಿಡಿಯೋ ಮಾಡಿದ ಇನ್‌ಫ್ಲುಯೆನ್ಸರ್ ಮಹಿಳೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಸ್‌ನಲ್ಲಿ ತನಗೆ ಈ ವ್ಯಕ್ತಿ (ದೀಪಕ್) ಲೈಂಗಿಕ ಕಿರುಕುಳ ನೀಡಿದ ಎಂದು ಯುವತಿ ವಿಡಿಯೋ ಮಾಡಿ ಹರಿಬಿಟ್ಟಿದ್ದ ಬಳಿಕ ವ್ಯಕ್ತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೀಪಕ್ ಅವರ ಸರಳ ವ್ಯಕ್ತಿತ್ವ, ಗುಣ, ಒಳ್ಳೆಯತನ ಬಗ್ಗೆ ಸಹ ಪ್ರಯಾಣಿಕ ಯುವತಿಯೊಬ್ಬರು ಮಾತನಾಡಿದ್ದಾರೆ. ಇದು ವೈರಲ್ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಯಾರನ್ನು ಸೋಷಿಯಲ್ ಮೀಡಿಯಾ 'ಲೈಂಗಿಕ ಅಪರಾಧಿ' ಎಂದು ಹಣೆಪಟ್ಟಿ ಕಟ್ಟಿ ಸಾವಿಗೆ ದೂಡಿತೋ, ಆ ದೀಪಕ್ ಅವರ ಅಸಲಿ ವ್ಯಕ್ತಿತ್ವ ಎಂತದ್ದು ಎಂದು ತಿಳಿಯಲು ಈ ಸಹ ಪ್ರಯಾಣಿಕ ಯುವತಿ ಹೇಳಿದ್ದನ್ನು ಒಮ್ಮೆ ಓದಿ.
'ದೀಪಕ್ ಒಬ್ಬ ಕರುಣಾಮಯಿ ಅಣ್ಣನಾಗಿದ್ದ': ಯವತಿ
ದೀಪಕ್ 'ಆತ ಕಾಮಿ ಆಗಿರಲಿಲ್ಲ. ಬದಲಿಗೆ ಒಬ್ಬ ಕರುಣಾಮಯಿ ಅಣ್ಣನಾಗಿದ್ದ'! ಎಂದು ಒಂದು ವರ್ಷದ ಹಿಂದೆ ಇದೇ ದೀಪಕ್ ಜೊತೆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಮಹಿಳೆಯೊಬ್ಬರು ಅವರ ಮಾನವೀಯತೆ ನೆನಪಿಸಿಕೊಂಡಿದ್ದಾರೆ. ಇಂದು ಅವರ ಸಾವನ್ನು ಕಂಡು ನನ್ನ ಹೃದಯ ಮಿಡಿದಿದೆ. ಅಂದು ಋತುಸ್ರಾವದ ತೀವ್ರ ಹೊಟ್ಟೆ ನೋವಿನಿಂದ ನಾನು ಬಳಲುತ್ತಿದ್ದಾಗ, ಅಪರಿಚಿತರಾಗಿದ್ದರೂ ದೀಪಕ್ ಅವರು ಒಬ್ಬ ತಂದೆ ಅಥವಾ ಅಣ್ಣನಂತೆ ವಿಚಾರಿಸಿದ್ದರು.
ಆಕೆಗೆ ಪ್ಯಾರಸಿಟಮಾಲ್ ಮಾತ್ರೆ ನೀಡಿ, "ಯಾಕೆ ಭಯ ಪಡ್ತೀಯಾ ಮಗಳೇ?" ಎಂದು ಸಮಾಧಾನಪಡಿಸಿ ಅಭಯ ಹಸ್ತ ನೀಡಿದ್ದರು. ಆಕೆಯ ಗಮನವನ್ನು ನೋವಿನಿಂದ ಬೇರೆಡೆಗೆ ಸೆಳೆಯಲು ಓದಿನ ಬಗ್ಗೆ ಮಾತನಾಡಿ ಧೈರ್ಯ ತುಂಬಿದ್ದರು. "ನಾನು ಈ ವಯಸ್ಸಿನಲ್ಲೂ ಜೀವನಕ್ಕಾಗಿ ಹೋರಾಡುತ್ತಿದ್ದೇನೆ, ನೀವೇಕೆ ಪರೀಕ್ಷೆಗೆ ಹೆದರುತ್ತೀರಿ?" ಎಂದು ಜೀವನಪಾಠ ಹೇಳಿದ್ದ ಆ ಮನುಷ್ಯನಲ್ಲಿ ಸ್ತ್ರೀ ವಿರೋಧಿ ಗುಣ ಇರಲಿಲ್ಲ' ಎಂದು ಆ ಯುವತಿ ತಿಳಿಸಿದ್ದಾರೆ.
ಒಬ್ಬ ಹೆಣ್ಣಿನ ನೋವಿಗೆ ಮರುಗುತ್ತಿದ್ದ ಅದೇ ಜೀವ, ಇಂದು ಮತ್ತೊಬ್ಬಳು ಹೆಣ್ಣು ಮಾಡಿದ 'ರೀಲ್ಸ್' ಹುಚ್ಚಾಟಕ್ಕೆ ಬಲಿಯಾಗಿದೆ. ದೀಪಕ್ ತೀರಿ ಹೋಗದಿದ್ದರೆ ಈ ಸತ್ಯ ಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲವೇನೋ!. ಲೈಕ್ಸ್ ಮತ್ತು ವ್ಯೂವ್ಸ್‌ಗಾಗಿ ಒಬ್ಬ 'ದೇವಮನುಷ್ಯ'ನನ್ನು ಕೊಂದ ಸಮಾಜ ನಮ್ದು!' ಎಂದು ಆ ಯುವತಿ ಕಣ್ಣೀರಿಟ್ಟಿದ್ದಾಳೆ.
ಆಗಿದ್ದೇನು? ಘಟನೆಯ ಸಂಕ್ಷಿಪ್ತ ವಿವರ
ಕೇರಳದ ಕೋಳಿಕ್ಕೋಡ್ ವ್ಯಾಪ್ತಿಯಲ್ಲಿ ಬಸ್‌ನಲ್ಲಿ ಮಹಿಳೆ (ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್) ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅವರ ಪಕ್ಕದಲ್ಲಿ ದೀಪಕ್ ನಿಂತಿದ್ದರು. ಪಕ್ಕದಲ್ಲಿದ್ದ ವ್ಯಕ್ತಿ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ಆಕೆ ಅದನ್ನು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಳು. ಈ ವಿಡಿಯೋ ನೋಡು ನೋಡುತ್ತಿದ್ದಂತೆ ಮಿಲಿಯನ್ ಗಟ್ಟಲೇ ವಿವ್ಸ್ ಪಡೆಯಿತು.
ಆಗ ಮೃತ ದೀಪಕ್ ಅವರ ಸ್ನೇಹಿತರು, ಸಂಬಂಧಿಕರು ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಪದೇ ಪದೆ ಆ ವಿಡಿಯೋ ದೀಪಕ್ ಬರುತ್ತಿದೆ. ಇದರಿಂದ ಗೌರವ, ಮರಿಯಾದೆ ಹಾಳಾಯಿತೆಂದು ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ಆಧಾರವಾಗಿದ್ದ ಮಗನ ಸಾವು ಕಂಡು ಇಡೀ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಇನ್‌ಫ್ಲುಯೆನ್ಸರ್ ಮಹಿಳೆ ಕೊನೆಗೂ ಅರೆಸ್ಟ್
ಅಮಾಯಕ ಜೀವ ಬಲಿ ಪಡೆಯಲು ಕಾರಣವಾಗಿದ್ದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಮಾಡಿದ್ದ ವಿಡಿಯೋ ಪರಿಶೀಲಿಸಿದ ಬಳಿಕ ಅದರಲ್ಲಿ ಮೃತ ದೀಪಕ್ ಅವರದ್ದು ಯಾವುದೇ ತಪ್ಪಿಲ್ಲ. ಸಹಜ ಪ್ರಯಾಣಿಕರಂತೆ ಅವರ ಪ್ರಯಾಣ ಮಾಡಿದ್ದು ಗೊತ್ತಾಗಿದೆ. ವಿನಾಃ ಕಾರಣ ಆರೋಪಿಸಿ ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಇನ್‌ಫ್ಲುಯೆನ್ಸರ್ ಬಂಧನವಾಗಿದೆ. ಆಕೆಯನ್ನು ಆನ್‌ಲೈನ್‌ನಲ್ಲಿ ಹಿಗ್ಗಾ ಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಕೇರಳದಲ್ಲಿ ಪುರುಷರ ಪಾಡು ಹೇಳತೀರದು. ಬಸ್‌ನಲ್ಲಿ ಓಡಾಡುವ ಗಂಡು ಮಕ್ಕಳ ಹುಷಾರ್ ಎಂದೆಲ್ಲ ಟ್ರೋಲ್, ಮಿಮ್ಸ್‌ಗಳು ಹರಿದಾಡುತ್ತಿವೆ.












Click it and Unblock the Notifications