ಕೆಸಿಆರ್ ಪ್ಯಾನ್ ಇಂಡಿಯಾ ಕನಸಿಗೆ ಜೊತೆಯಾದ ನಾಯಕರು ಯಾರು? ಏನಿದು ಹೊಸ ರಂಗ?
ಹೈದರಾಬಾದ್, ಜನವರಿ 18: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳ ಒಕ್ಕೂಟವನ್ನು ಕಟ್ಟುವ ಮೊದಲ ಹೆಜ್ಜೆಯನ್ನು ಇಂದು ಇಟ್ಟಿದ್ದಾರೆ. ತಮ್ಮ ಪಕ್ಷ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆಯನ್ನು ಆಯೋಜಿಸಿದ್ದಾರೆ. ಈ ಚೊಚ್ಚಲ ಸಭೆಯೊಂದಿಗೆ ರಾಷ್ಟ್ರೀಯವಾಗಿ ತೆರೆದುಕೊಳ್ಳುವ ಪ್ರಯತ್ನವನ್ನು ಕೆ ಚಂದ್ರಶೇಖರ್ ರಾವ್ ಮಾಡಿದ್ದಾರೆ.
ಹೈದರಾಬಾದ್‌ನ ಖಮ್ಮಂ ಪಟ್ಟಣದಲ್ಲಿ ಭಾರತ್ ರಾಷ್ಟ್ರ ಸಮಿತಿಯ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಕೇರಳ ಮುಖ್ಯಮಂತ್ರಿ, ಸಿಪಿಎಂನ ಪಿಣರಾಯಿ ವಿಜಯನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಸಿಪಿಐನ ಡಿ ರಾಜಾ ಭಾಗವಹಿಸಿದ್ದಾರೆ.
ಕೆಸಿಆರ್ ಅವರ ರಾಷ್ಟ್ರೀಯ ರಾಜಕೀಯವನ್ನು ಬೆಂಬಲಿಸುತ್ತಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ (ರಾಜ್ಯಾದ್ಯಂತ ಪ್ರವಾಸ) ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.

ನಾಲ್ವರು ಮುಖ್ಯಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, 'ನಿನ್ನೆ ಬಿಜೆಪಿಯ (ರಾಷ್ಟ್ರೀಯ ಕಾರ್ಯಕಾರಿಣಿ) ಸಭೆ ಮುಕ್ತಾಯಗೊಂಡಿದೆ. ಈ ಸರ್ಕಾರವು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಇದು 400 ದಿನಗಳ ನಂತರ ಉಳಿಯುವುದಿಲ್ಲ' ಎಂದು ಹೇಳಿದ್ದಾರೆ.
ಬಿಆರ್‌ಎಸ್ ಸಭೆಯು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಕೊನೆಯಾಗುವುದಕ್ಕೆ ಕೆಲವು ದಿನಗಳ ಮುಂಚಿತವಾಗಿ ನಡೆದಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಕ್ಷ ಮತ್ತು ಸಿಪಿಎಂ ಸೇರಿದಂತೆ 21 ವಿರೋಧ ಪಕ್ಷಗಳನ್ನು ಆಹ್ವಾನಿಸಿದೆ. ಕೇಜ್ರಿವಾಲ್ ಅವರ ಎಎಪಿ, ಆಹ್ವಾನಿತರ ಪಟ್ಟಿಯಿಂದ ಕಾಣೆಯಾಗಿದೆ.
ಇಂದು ನಡೆದ ಕೆಸಿಆರ್ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಕ್ಷಗಳು ಕಾಂಗ್ರೆಸ್ ಯಾತ್ರೆಗೆ ಹಾಜರಾಗಿಲ್ಲ. ಅಖಿಲೇಶ್ ಯಾದವ್ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ವಿರುದ್ಧ ತಮ್ಮ ವಿರೋಧವನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಸಿಪಿಎಂ ತ್ರಿಪುರಾದಲ್ಲಿ ಈ ವರ್ಷ ನಡೆಯಲಿರುವ ಚುನಾವಣೆಗೆ ಸೀಟು ಹಂಚಿಕೆಯ ಬಗ್ಗೆ ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ.

2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಕೇರಳ ಸಿಎಂ ವಿಜಯನ್ ಅವರು ಕಾಂಗ್ರೆಸ್ಸೇತರ, ಬಿಜೆಪಿಯೇತರ ಮೈತ್ರಿಯ ಕನಸನ್ನು ಸಾರ್ವಜನಿಕಗೊಳಿಸಿದ್ದರು. ಆದರೆ ಹೆಚ್ಚಿನ ಪ್ರಾದೇಶಿಕ ನಾಯಕರು ನೈತಿಕ ಬೆಂಬಲವನ್ನು ನೀಡಲಿಲ್ಲ. ಅದು ಟೇಕ್ ಆಫ್ ಆಗಲು ವಿಫಲವಾಯಿತು. ಚಂದ್ರಶೇಖರ್ ರಾವ್ ಅವರ ಕನಸು ಈ ಬಾರಿ ಆದರೂ ಸಾಕಾರಗೊಳ್ಳುವುದೇ ಎಂಬ ಪ್ರಶ್ನೆಗಳು ಎದ್ದಿವೆ.
ಚಂದ್ರಶೇಖರ ರಾವ್ ಅವರಲ್ಲದೆ, ವಿರೋಧ ಪಕ್ಷಗಳ ಮೈತ್ರಿಕೂಟದ ನಾಯಕರಾಗಲು ಅನೇಕ ಸ್ಪರ್ಧಿಗಳು ಇದ್ದಾರೆ. ಅರವಿಂದ್ ಕೇಜ್ರಿವಾಲ್ ತಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ತಮ್ಮ ಆಕಾಂಕ್ಷೆಗಳನ್ನು ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತೃತೀಯ ರಂಗ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 'ತೃತೀಯ ರಂಗದ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಒಳಗೊಂಡಿರುವ ಒಂದು ಮೈತ್ರಿಕೂಟ ಇರಬೇಕು. ಈ ಮೂಲಕ ನಾವು 2024 ರಲ್ಲಿ ಬಿಜೆಪಿಯನ್ನು ಸೋಲಿಸಬಹುದು' ಎಂದು ನಿತೀಶ್ ಕುಮಾರ್ ಅವರು ಹೇಳಿದ್ದರು.
ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲವಿಲ್ಲದೆ ಇದುವರೆಗೆ ಯಾವುದೇ ತೃತೀಯ ರಂಗ ಯಶಸ್ವಿಯಾಗಿಲ್ಲ. ಮಾಜಿ ಪ್ರಧಾನಿ ವಿ ಪಿ ಸಿಂಗ್ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಬೆಂಬಲವಿತ್ತು. ಅವರ ಉತ್ತರಾಧಿಕಾರಿಗಳಾದ ಚಂದ್ರಶೇಖರ್, ದೇವೇಗೌಡ ಮತ್ತು ಐ ಕೆ ಗುಜ್ರಾಲ್ ನೇತೃತ್ವದ ಸರ್ಕಾರಗಳು ಕಾಂಗ್ರೆಸ್ ಬೆಂಬಲವನ್ನು ಹೊಂದಿದ್ದವು.











Click it and Unblock the Notifications