ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ: ಮತ್ತೊಬ್ಬ ಕಾಶ್ಮೀರಿ ಪಂಡಿತ ಸಾವು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಕಾಶ್ಮೀರಿ ಪಂಡಿತರೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ಶನಿವಾರ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಗ್ರರ ಗುಂಡಿಗೆ ಬಲಿಯಾಗಿರುವ ಕಾಶ್ಮೀರಿ ಪಂಡಿತರನ್ನು ಪುರನ್ ಕ್ರಿಶನ್ ಭಟ್ ಎಂದು ಗುರುತಿಸಲಾಗಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದಲ್ಲಿರುವ ಭಟ್ ಅವರ ನಿವಾಸದ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಭಟ್ ಅವರನ್ನು ಶೋಪಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹತ್ಯೆಗೀಡಾಗಿರುವ ಭಟ್ ಅವರಿಗೆ ಪ್ರಾಥಮಿಕ ಶಾಲೆಗೆ ತೆರಳುವ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗಳು 7 ನೇ ತರಗತಿಯಲ್ಲಿ ಓದುತ್ತಿದ್ದರೆ, ಕಿರಿಯ ಮಗ 5 ನೇ ತರಗತಿಗೆ ತೆರಳುತ್ತಿದ್ದಾನೆ ಎಂದು ಸಂಬಂಧಿಯೊಬ್ಬರು 'ಎನ್‌ಡಿಟಿವಿ'ಗೆ ಹೇಳಿದ್ದಾರೆ. 'ಇಂತಹ ದಾಳಿ ಮೂಲಕ ಉಗ್ರರು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಮನೆ ಬಿಟ್ಟು ಹೊರಗೆ ತೆರಳಲು ನಮಗೆ ಭಯವಾಗುತ್ತಿದೆ' ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಿಂದ ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ದಾಳಿಯಲ್ಲಿ ಹೆಚ್ಚು ಬಲಿಯಾದವರು ವಲಸೆ ಕಾರ್ಮಿಕರು ಮತ್ತು ಕಾಶ್ಮೀರಿ ಪಂಡಿತರು.
ದಾಳಿ ನಡೆಸಿದ ಉಗ್ರರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಉಗ್ರರು ಅಡಗಿರಬಹುದಾದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಧಾರಿತ ಸ್ಫೋಟಕ ಸಾಧನ ಪತ್ತೆ
ಜಮ್ಮು-ಕಾಶ್ಮೀರದ ಬಂಡಿಪೋರಾ-ಸೊಪೋರ ರಸ್ತೆಯಲ್ಲಿ 16 ಕಿ.ಲೋಗಳಷ್ಟು ಸುಧಾರಿತ ಸ್ಫೋಟಕ ಸಾಧನಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಆ ಮೂಲಕ, ಕಾಶ್ಮೀರದಲ್ಲಿ ನಡೆಯಬಹುದಾಗಿದ್ದ ದೊಡ್ಡ ಭಯೋತ್ಪಾದಕ ದಾಳಿಯನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪತ್ತೆ ಮಾಡಲಾಗಿರುವ ಸ್ಪೋಟಕ ಸಾಧನಗಳನ್ನು ಬಾಂಬ್ ನಿಷ್ಕ್ರಿಯ ದಳವು ಹತ್ತಿರದ ಅರಣ್ಯ ಪ್ರದೇಶದಲ್ಲಿ ತಟಸ್ಥಗೊಳಿಸಿದೆ. ಕಾಶ್ಮೀರದಲ್ಲಿ ಐಇಡಿ ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವಾರ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಐಇಡಿಗಳು ಪತ್ತೆಯಾಗಿದ್ದವು. ಈ ಹೆದ್ದಾರಿಯ ಮೂಲಕ ಕಾಶ್ಮೀರದಿಂದ ಭಾರತದ ಇತರ ಪ್ರದೇಶಗಳನ್ನು ತಲುಪಬಹುದಾಗಿದೆ. ನಾಗರಿಕರ ಸಂಚಾರದ ಜೊತೆಗೆ, ಈ ಹೆದ್ದಾರಿಯನ್ನು ಭದ್ರತಾ ಪಡೆಗಳು ಹೆಚ್ಚು ಬಳಸುತ್ತವೆ.
ಜಮ್ಮು ಪ್ರದೇಶದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕನನ್ನು ಬಂಧಿಸಿದ ನಂತರ ಈ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸ್ಪೋಟಕಗಳನ್ನು ಡ್ರೋನ್‌ಗಳ ಮೂಲಕ ಪಾಕಿಸ್ತಾನ ರವಾನಿಸಿರಬಹುದು ಎಂಬ ಶಂಕೆಯನ್ನು ಭದ್ರತಾ ಪಡೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.












Click it and Unblock the Notifications