ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಗುಂಡಿನ ದಾಳಿ: ಕಾಶ್ಮೀರಿ ಪಂಡಿತನ ಹತ್ಯೆ
ಗೃಹ ವ್ಯವಹಾರಗಳ ಸಚಿವಾಲಯದ ಮಾಹಿತಿಯ ಪ್ರಕಾರ, 2020 ರಲ್ಲಿ ಒಬ್ಬರು, 2021 ಮತ್ತು 2022 ರಲ್ಲಿ ತಲಾ ನಾಲ್ಕು ಮಂದಿಯಂತೆ ಒಟ್ಟು ಒಂಬತ್ತು ಕಾಶ್ಮೀರಿ ಪಂಡಿತರು ಹತ್ಯೆಯಾಗಿದ್ದಾರೆ.
ಶ್ರೀನಗರ, ಫೆಬ್ರವರಿ. 26: ಕಾಶ್ಮೀರ ಕಣಿವೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಮತ್ತೊಂದು ದಳಿ ನಡೆದಿದ್ದು, ಭಾನುವಾರ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕಾಶ್ಮೀರಿ ಪಂಡಿತರನ್ನು ಶಂಕಿತ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.
ಶುಕ್ರವಾರ ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ಮಸೀದಿಯೊಂದರ ಹೊರಗೆ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರ ಮಗನನ್ನು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಪುಲ್ವಾಮಾದ ಅಚಾನ್ ನಿವಾಸಿ ಸಂಜಯ್ ಶರ್ಮಾ ಅವರು ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದಾಗ ಶಂಕಿತ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

"ಭಯೋತ್ಪಾದಕರು ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದಾಗ ಅಲ್ಪಸಂಖ್ಯಾತ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಎಂಬ ನಾಗರಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ತೀವ್ರವಾಗಿ ಗಾಯಗೊಂಡಿದ್ದರಿಂದ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಹಳ್ಳಿಯಲ್ಲಿ ಸಶಸ್ತ್ರ ಕಾವಲುಗಾರರಾಗಿದ್ದರು. ಭದ್ರತಾ ಪಡೆ ಪ್ರದೇಶವನ್ನು ಸುತ್ತುವರಿದಿದೆ" ಎಂದು ಕಾಶ್ಮೀರ ವಲಯ ಪೊಲೀಸರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ದಕ್ಷಿಣ ಕಾಶ್ಮೀರದ ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ರಯೀಸ್ ಮೊಹಮ್ಮದ್ ಭಟ್, "ನಾವು ಶೀಘ್ರದಲ್ಲೇ ಭಾಗಿಯಾಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚುತ್ತೇವೆ. ಅವರನ್ನು ಬಂಧಿಸುತ್ತೇವೆ. ದಕ್ಷಿಣ ಕಾಶ್ಮೀರದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ಕಠಿಣ ತನಿಖೆ ನಡೆಯುತ್ತಿದೆ, ಶೀಘ್ರದಲ್ಲೇ ಭಯೋತ್ಪಾದಕರನ್ನು ಪತ್ತೆ ಹಚ್ಚಲಾಗುವುದು. ಅವರ ಕೆಟ್ಟ ಯೋಜನೆಗಳನ್ನು ವಿಫಲಗೊಳಿಸುತ್ತೇವೆ" ಎಂದು ಭರವಸೆ ನೀಡಿದ್ದಾರೆ.
ಪಂಡಿತರ ಸಂಘಟನೆಯಾದ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ ಹತ್ಯೆಯನ್ನು ಖಂಡಿಸಿದೆ. "ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ನಾಚಿಕೆಯಾಗಬೇಕು. ಇಂದು ಮತ್ತೊಬ್ಬ ವಲಸಿಗರಲ್ಲದ ಕಾಶ್ಮೀರಿ ಪಂಡಿತ ಕೊಲ್ಲಲ್ಪಟ್ಟಿದ್ದಾನೆ. ಅಚಾನ್ ಪುಲ್ವಾಮಾದಲ್ಲಿನ ಅವರ ನಿವಾಸದ ಬಳಿ ಎಟಿಎಂನಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಮೃತರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ " ಎಂದು ಕೆಪಿಎಸ್ಎಸ್ ಟ್ವೀಟ್‌ನಲ್ಲಿ ತಿಳಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕೇಂದ್ರಗೃಹ ಸಚಿವ ಅಮಿತ್ ಶಾ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. " ಸರ್ಕಾರ 75 ಲಕ್ಷ ಕಾಶ್ಮೀರಿ ಜನಸಂಖ್ಯೆಯನ್ನು ನಿಭಾಯಿಸಲು ಸಾಧ್ಯವಿಲ್ಲ ಮತ್ತು ಪಿಓಕೆ ಮತ್ತು ಬಲೂಚಿಸ್ತಾನವನ್ನು ನಿಯಂತ್ರಿಸಲು ಬಯಸುತ್ತದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ನಾಯಿಗಳಂತೆ ಕೊಲ್ಲಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ಯೆಯನ್ನು ಖಂಡಿಸಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, "ಹತ್ಯೆಗಳ ಕೆಟ್ಟ ಘಟನೆಗಳು ಕೊನೆಗೊಳ್ಳುವಂತೆ ತೋರುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸಲು ಭಾರತ ಸರ್ಕಾರ ವಿಫಲವಾಗಿದೆ" ಎಂದು ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ದಾಳಿಯನ್ನು ಖಂಡಿಸಿದ್ದಾರೆ.
"ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅಚಾನ್‌ನ ಸಂಜಯ್ ಪಂಡಿತ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಸಂಜಯ್ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಇಂದು ಮುಂಜಾನೆ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದರು. ನಾನು ಈ ದಾಳಿಯನ್ನು ಖಂಡಿಸುತ್ತೇನೆ ಮತ್ತು ಅವರ ಪ್ರೀತಿಪಾತ್ರರಿಗೆ ನನ್ನ ಸಂತಾಪ" ಎಂದು ಹೇ ಕಳುಹಿಸುತ್ತೇನೆ ಎಂದು ಉಮರ್ ಅಬ್ದುಲ್ಲಾ ಹೇಳಿದ್ದಾರೆ.
ಕಳೆದ ವರ್ಷ ಮಧ್ಯ ಕಾಶ್ಮೀರದ ಬುದ್ಗಾಮ್‌ನಲ್ಲಿ ಮೇ 12 ರಂದು ಕ್ಲರ್ಕ್ ಆಗಿದ್ದ ಮತ್ತು ಶೇಖ್‌ಪುರದ ವಲಸಿಗರ ಕಾಲೋನಿಯಲ್ಲಿ ವಾಸಿಸುತ್ತಿದ್ದ 45 ವರ್ಷದ ರಾಹುಲ್ ಭಟ್ ಎಂಬ ವಲಸೆ ಪಂಡಿತನನ್ನು ಕೊಲ್ಲಲಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿಗೆ ಗೃಹ ವ್ಯವಹಾರಗಳ ಸಚಿವಾಲಯ (MHA) ಒದಗಿಸಿದ ಮಾಹಿತಿಯ ಪ್ರಕಾರ, 2020 ರಲ್ಲಿ ಒಬ್ಬರು, 2021 ಮತ್ತು 2022 ರಲ್ಲಿ ತಲಾ ನಾಲ್ಕು ಮಂದಿಯಂತೆ ಒಟ್ಟು ಒಂಬತ್ತು ಕಾಶ್ಮೀರಿ ಪಂಡಿತರು ಹತ್ಯೆಯಾಗಿದ್ದಾರೆ.












Click it and Unblock the Notifications