UT Khadar: ವ್ಯಾಟಿಕನ್ ಸಿಟಿಯ 'ಅಂತಾರಾಷ್ಟ್ರೀಯ ಸಮ್ಮೇಳನ'ಕ್ಕೆ ಯು.ಟಿ.ಖಾದರ್ ಮುಖ್ಯ ಅತಿಥಿ
ಬೆಂಗಳೂರು, ನವೆಂಬರ್ 29: ಅತೀ ಹೆಚ್ಚು ವಿದೇಶ ಪ್ರವಾಸಗಳನ್ನು ಮಾಡಬೇಕು ಎಂಬ ಆಸೆ ಹೊಂದಿರುವ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು 'ಅಂತಾರಾಷ್ಟ್ರೀಯ ಸಮ್ಮೇಳನ'ದಲ್ಲಿ ಭಾಗವಹಿಸಲು ಇಟಲಿ ದೇಶಕ್ಕೆ ತೆರಳಲಿದ್ದಾರೆ. ಭಾರತದಿಂದ ಆಯ್ಕೆ ಕೆಲವು ಮಂದಿಗಳ ಪೈಕಿ ಇಟಲಿಯ ವ್ಯಾಟಿಕನ್‌ಗೆ ಹೋಗುವ ಅವಕಾಶ ಯುಟಿ ಖಾದರ್ ಅವರಿಗೆ ಸಿಕ್ಕಿದೆ.
ಇಟಲಿಯ ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಯಲ್ಲಿ ಇದೇ ನವೆಂಬರ್ 30ರಂದು ಶನಿವಾರ ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಇದರಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಶ್ರೀ ನಾರಾಯಣ ಗುರು ಆಯೋಜಿಸಿದ್ದ ಪ್ರಥಮ ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನಕ್ಕೆ ಶತಮಾನೋತ್ಸವ ತುಂಬಿದೆ. ಇದರ ಸ್ಮರಣಾರ್ಥ ಈ ಸಮ್ಮೇಳನವನ್ನು ವ್ಯಾಟಿಕನ್ ಸಿಟಿಯ ಆಗಸ್ತಿನೈನಮ್ ನಲ್ಲಿ ಆಯೋಜನೆ ಮಾಡಲಾಗಿದೆ. ಈ ಸಮ್ಮೇಳನದಲ್ಲಿ 'ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು' ಎಂಬ ವಿಷಯದಲ್ಲಿ ನಡೆಯುವ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಭಾಷಣ ಮಾಡಲಿದ್ದಾರೆ.
ಈ ಸಮ್ಮೇಳನಕ್ಕೆ ಪ್ರಪಂಚದಾದ್ಯಂತ ವಿವಿಧ ಧರ್ಮಗಳ ಗಣ್ಯರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಈ ಸಮ್ಮೇಳನಕ್ಕೂ ಮೊದಲು ವಿಶ್ವ ಕೆಥೊಲಿಕ್ ಸಮುದಾಯದ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಯುಟಿ ಖಾದರ್ ಅವರು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಹೆಚ್ಚು ವಿದೇಶ ಸುತ್ತುವ ಆಸೆ ಇದೆ: ಯುಟಿ ಖಾದರ್
ವರ್ಷದಲ್ಲಿ ಐದಾರು ಸಮ್ಮೇಳನಗಳು ಇರುತ್ತವೆ. ಸರ್ಕಾರಿ ವೆಚ್ಚದಲ್ಲಿ ಹೋಗುತ್ತೇವೆ. ಬೇರೆ ಬೇರೆ ರಾಷ್ಟ್ರಗಳಿಂದ ಆಹ್ವಾನ ಬರುವಾಗ ಸ್ಪೀಕರ್‌ಗೆ ಮೊದಲ ಆದ್ಯತೆ ನೀಡುತ್ತಾರೆ. ಇದೀಗ ನಾನು ಇಟಲಿಯ ವ್ಯಾಟಿಕನ್ ಸಿಟಿಯಲ್ಲಿನ ಸಮ್ಮೇಳನ್ನಕ್ಕೆ ಪಾಲ್ಗೊಳ್ಳುತ್ತಿದ್ದೇನೆ. ಆದಷ್ಟು ಹೆಚ್ಚು ದೇಶಗಳನ್ನು ಸುತ್ತಬೇಕು ಎಂಬ ಆಸೆ ಇದೆ ಎಂದು ಅವರು ಇಟಲಿಗೆ ಪ್ರಯಾಣ ಬೆಳೆಸುವ ಮೊದಲು ಗುರುವಾರ ಸುದ್ದಿಗಾರರ ಕೆಲ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಪ್ರಧಾನಿ ನರೇಂದ್ರ ಮೋದಿ ನಂತರ ಹೆಚ್ಚಾಗಿ ವಿದೇಶ ಸುತ್ತಿದ ನಾಯಕರು ನೀವೆ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ನಾನು ಸಹ ಹೆಚ್ಚು ವಿದೇಶಗಳನ್ನು ಸುತ್ತಬೇಕು ಎಂದುಕೊಂಡಿದ್ದೇವೆ ಎಂಬ ಆಸೆಯನ್ನು ಅವರು ಹೊರ ಹಾಕಿದರು.












Click it and Unblock the Notifications