ಗಡಿ ವಿವಾದ: ಚೀನಾದಂತೆ ಕರ್ನಾಟಕಕ್ಕೆ ನುಗ್ಗುತ್ತೇವೆ ಎಂದ ಶಿವಸೇನೆ ನಾಯಕ ಸಂಜಯ್ ರಾವತ್
ಮುಂಬೈ, ಡಿ. 21: ಈಗಾಗಲೇ ಗಡಿ ವಿಚಾರವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದರ ಮಧ್ಯೆಯೇ, ಶಿವಸೇನೆ ಸಂಸದ ಸಂಜಯ್ ರಾವತ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
'ಚೀನಾ ದೇಶಕ್ಕೆ ನುಗ್ಗಿದಂತೆ ನಾವೂ ಕರ್ನಾಟಕವನ್ನೂ ನುಗ್ಗುತ್ತೇವೆ' ಎಂದು ಹೇಳುವ ಮೂಲಕ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವತ್ ಅವರು ಬುಧವಾರ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. ಜೊತೆಗೆ ಈ ವಿಚಾರದಲ್ಲಿ ತನಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.
"ಚೀನಾ ಪ್ರವೇಶಿಸಿದಂತೆ ನಾವೂ ಕರ್ನಾಟಕಕ್ಕೆ ಪ್ರವೇಶಿಸುತ್ತೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ, ಅದನ್ನು ಚರ್ಚೆಯ ಮೂಲಕ ಬಗೆಹರಿಸಲು ಬಯಸುತ್ತೇವೆ. ಆದರೆ ಕರ್ನಾಟಕದ ಸಿಎಂ ಬೆಂಕಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರವಿದ್ದು, ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ" ಎಂದು ಸಂಜಯ್ ರಾವುತ್ ಕಿಡಿಕಾರಿದ್ದಾರೆ.
|
ಗಡಿ ವಿಚಾರದಲ್ಲಿ ಟೀಕೆ ಎದುರಿಸುತ್ತಿರುವ ಏಕನಾಥ್ ಶಿಂಧೆ ಸರ್ಕಾರ
ದಶಕಗಳಷ್ಟು ಹಳೆಯದಾದ ಗಡಿ ವಿವಾದದ ಕುರಿತು ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ಶಿವಸೇನೆ ನಾಯಕ ಕೂಡ ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಗಡಿ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಏಕನಾಥ್ ಶಿಂಧೆ ಅವರ ಸರ್ಕಾರ ಈ ವಿಚಾರದಲ್ಲಿ ಟೀಕೆಗಳನ್ನು ಎದುರಿಸುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷವೂ ಈ ವಿಷಯವನ್ನು ಪ್ರಸ್ತಾಪಿಸಿದೆ.

ಮಹಾರಾಷ್ಟ್ರದವರಿಗೆ ಬೆಳಗಾವಿ ಪ್ರವೇಶವಿಲ್ಲವೇಕೆ..?
ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು ಈ ಹಿಂದೆ ವಿಧಾನಸಭೆಯಲ್ಲಿ ಗಡಿ ವಿವಾದದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. "ಮಹಾರಾಷ್ಟ್ರದ ಲೋಕಸಭಾ ಸದಸ್ಯರೊಬ್ಬರನ್ನು ಬೆಳಗಾವಿ ಪ್ರವೇಶಿಸದಂತೆ ತಡೆಹಿಡಿಯಲಾಗಿದೆ, ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಅಲ್ಲಿಗೆ ಹೋಗುವವರನ್ನು ಯಾರು ತಡೆಯಬಾರದು ಎಂದು ನಿರ್ಧರಿಸಲಾಗಿತ್ತು. ಆದರೂ ಅಲ್ಲಿನ ಕಲೆಕ್ಟರ್ ಇಂತಹ ನಿರ್ಧಾರ ಹೇಗೆ ತೆಗೆದುಕೊಂಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಅಜಿತ್ ಪವಾರ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶಿಂಧೆ, "ಮೊದಲ ಬಾರಿಗೆ ದೇಶದ ಗೃಹ ಸಚಿವರು ಗಡಿ ವಿವಾದವನ್ನು ಮಧ್ಯಸ್ಥಿಕೆ ವಹಿಸಿದ್ದಾರೆ. ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನಾವು ಗಡಿ ನಿವಾಸಿಗಳ ಪರವನ್ನು ಅವರಿಗೆ ತಿಳಿಸಿದ್ದೇವೆ. ಗಡಿ ವಿವಾದದಲ್ಲಿ ರಾಜಕೀಯ ಬೇಡ, ಗಡಿ ವಾಸಿಗಳೊಂದಿಗೆ ಒಟ್ಟಾಗಿ ನಿಲ್ಲಬೇಕು" ಎಂದಿದ್ದಾರೆ.

ಸಮಸದರು ಅಂತಹ ಹೇಳಿಕೆ ನೀಡಬಾರದು- ಆರಗ ಜ್ಞಾನೇಂದ್ರ
ಇನ್ನು ಸಂಜಯ್ ರಾವತ್ ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿ ಕಾರಿದ್ದಾರೆ. ಸಂಸದರು ಅಂತಹ ಹೇಳಿಕೆ ನೀಡಬಾರದು ಎಂದಿದ್ದಾರೆ.
"ಅಂತಹ ನಾಯಕರಿಂದ ಬಂದಿರುವ ಹೇಳಿಕೆ ಸ್ವೀಕಾರಾರ್ಹವಲ್ಲ. ಈ ವಿಷಯದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಾರದು. ಕೇಂದ್ರ ಸರ್ಕಾರವೂ ಶಾಂತಿ ಬಯಸುತ್ತದೆ. ಹೀಗಾಗಿ ಸಂಜಯ್ ರಾವುತ್ ಅವರು ಅಂತಹ ಹೇಳಿಕೆ ನೀಡಬಾರದು" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಅಧಿವೇಶನಕ್ಕೆ ಪರ್ಯಾಯವಾಗಿ ನಡೆಸಲಾಗುತ್ತಿದ್ದ ಮಹಾಮೇಳವಾ
ವಿಧಾನಸಭೆಯ ಚಳಿಗಾಲದ ಅಧಿವೇಶನದ ಮೊದಲ ದಿನದಂದು ಅಧಿವೇಶನಕ್ಕೆ ಪರ್ಯಾಯವಾಗಿ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಆಯೋಜಿಸಿದ್ದ ಎಂಇಎಸ್‌ನ ಮಹಾಮೇಳವಾ ನಡೆಸಲು ಬೆಳಗಾವಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸದಸ್ಯರು ಬೆಳಗಾವಿಗೆ ಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.












Click it and Unblock the Notifications