ಸಿಎಂ ಆಯ್ಕೆ ಕಗ್ಗಂಟು: ಕೊನೆಯ ಸುತ್ತಿನ ಸಭೆ ಬಳಿಕ ಇಂದೇ ಸಿಎಂ ಆಯ್ಕೆ ಪ್ರಹಸನಕ್ಕೆ ತೆರ ಬೀಳುವ ಸಾಧ್ಯತೆ
ಬೆಂಗಳೂರು, ಮೇ. 17: ರಾಜ್ಯದಲ್ಲಿ ಸತತ ಮೂರು ದಿನಗಳಿಂದ ಜನರ ಕುತೂಹಲಕ್ಕೆ ಮತ್ತು ಗೊಂದಲಕ್ಕೆ ಕಾರಣವಾಗಿರುವ ಸಿಎಂ ಆಯ್ಕೆ ವಿಚಾರಕ್ಕೆ ಇಂದು ಫುಲ್ ಸ್ಟಾಪ್ ಬೀಳುವ ಸಂಭವವಿದೆ. ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಆಯ್ಕೆ ನಿರ್ಧಾರದ ಬಗ್ಗೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ಕುರಿತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಶೀಘ್ರದಲ್ಲೇ ನೂತನ ಸಿಎಂ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರು ಸಿಎಂ ಹುದ್ದೆಗೆ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಸೇರಿದಂತೆ ಕಾಂಗ್ರೆಸ್‌ನ ಇತರ ಸಿಎಂ ಆಕಾಂಕ್ಷಿಗಳು ಕೂಡ ಈ ಸಿಎಂ ರೇಸ್‌ನಲ್ಲಿದ್ದಾರೆ.

ಮಂಗಳವಾರ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ, ಕಾಂಗ್ರೆಸ್ ಕೇಂದ್ರ ವೀಕ್ಷಕರು, ಹೊಸದಾಗಿ ಆಯ್ಕೆಯಾದ ಶಾಸಕರು ಮತ್ತು ಇಬ್ಬರು ಪ್ರಮುಖ ಸ್ಪರ್ಧಿಗಳಾದ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಬುಧವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ಇಂದಿನ ಸಭೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಹಿಮಾಚಲ ಪ್ರದೇಶದಿಂದ ದೆಹಲಿಗೆ ಆಗಮಿಸುವ ನಿರೀಕ್ಷೆಯಿರುವ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಬುಧವರಾ ಬೆಳಗ್ಗೆ 11 ಗಂಟೆಗೆ ಕೇಂದ್ರ ವೀಕ್ಷಕರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಲಿದ್ದು, ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.

ಅನಾರೋಗ್ಯದ ಕಾರಣದಿಂದ ಸೋಮವಾರ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ ನಂತರ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಮಂಗಳವಾರ ದೆಹಲಿಗೆ ಆಗಮಿಸಿ ಕೇಂದ್ರ ನಾಯಕತ್ವವನ್ನು ಭೇಟಿ ಮಾಡಿದ್ದಾರೆ. ಅವರಿಂದ ಬಂಡಾಯ ಅಥವಾ ರಾಜೀನಾಮೆ ಸಾಧ್ಯತೆಯ ವರದಿಗಳ ವದಂತಿ ಬಗ್ಗೆ ಕಿಡಿ ಕಾರಿರುವ ಅವರು ವದಮತಿ ಹಬ್ಬಿಸುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೇ 10 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಗೆಲುವು ಪಡೆದಿದೆ. 135 ಸ್ಥಾನಗಳನ್ನು ಪಡೆದುಕೊಂಡು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಭಾರತೀಯ ಜನತಾ ಪಕ್ಷ 66 ಸ್ಥಾನಗಳನ್ನು ಗೆದ್ದರೆ, ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾ ದಳ 19 ಸ್ಥಾನಗಳನ್ನು ಪಡೆದಿದೆ.












Click it and Unblock the Notifications