Kannada: ಕನ್ನಡ - ತಮಿಳು ಭಾಷಿಕರ ಹಕ್ಕು ರಕ್ಷಿಸಲಿದ್ದೇವೆ: ಸಿ.ಎಂ ಪಿಣರಾಯಿ ವಿಜಯನ್
ಮಲಯಾಳಂ ಭಾಷೆ ಮಸೂದೆ ವಿವಾದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಕೇರಳ ಸರ್ಕಾರವು ಮಲಯಾಳಂ ಭಾಷೆ ಮಸೂದೆ ಮಂಡನೆ ಮಾಡುವುದಕ್ಕೆ ಮುಂದಾಗಿದೆ. ಈ ಹೊಸ ಮಸೂದೆಯ ಪ್ರಕಾರ ಕೇರಳದಲ್ಲಿ ಸರ್ಕಾರಿ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯಾಗಿ ಎಲ್ಲರೂ ಕಡ್ಡಾಯವಾಗಿ ಕಲಿಯಬೇಕು ಎಂದು ಹೇಳಲಾಗಿದೆ. ಇದು ಭಾಷಾ ವಿವಾದ ಸ್ವರೂಪವನ್ನು ಪಡೆದುಕೊಂಡಿತ್ತು.
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಮಲಯಾಳಂ ಭಾಷಾ ಮಸೂದೆ, 2025 ರ ಬಗ್ಗೆ ಎದ್ದಿರುವ ಆತಂಕಗಳು ಸತ್ಯಕ್ಕೆ ದೂರವಾಗಿದೆ. ಕೇರಳ ವಿಧಾನಸಭೆಯು ಅಂಗೀಕರಿಸಿದ ಮಸೂದೆಯಲ್ಲಿ ಯಾವುದೇ ಭಾಷಾ ಹೇರಿಕೆ ಆಗಿಲ್ಲ.

ಕೇರಳದ ಪ್ರಗತಿ ಯಾವಾಗಲೂ ಸಮಾನತೆ ಮತ್ತು ಸಹೋದರತ್ವದಲ್ಲಿ ನೆಲೆಗೊಂಡಿರುವ ಸಮಗ್ರ ಅಭಿವೃದ್ಧಿಯಲ್ಲಿ ಬೇರೂರಿದೆ. ಜಾತ್ಯತೀತತೆ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಸರ್ಕಾರ ದೃಢವಾಗಿದೆ ಎಂದು ಹೇಳಿದ್ದಾರೆ.
ಭಾಷಾ ಅಲ್ಪಸಂಖ್ಯಾತರ, ವಿಶೇಷವಾಗಿ ಕನ್ನಡ ಮತ್ತು ತಮಿಳು ಮಾತನಾಡುವ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಮಸೂದೆಯು ಸ್ಪಷ್ಟ ಮತ್ತು ಅನಿಯಂತ್ರಿತ ಷರತ್ತು (ಷರತ್ತು 7) ಅನ್ನು ಒಳಗೊಂಡಿದೆ. ಯಾವುದೇ ಭಾಷೆಯನ್ನು ಹೇರಲಾಗುವುದಿಲ್ಲ ಮತ್ತು ಭಾಷಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಪ್ರಮುಖ ನಿಬಂಧನೆಗಳು ಖಚಿತಪಡಿಸುತ್ತವೆ.
ಅಧಿಸೂಚಿತ ಪ್ರದೇಶಗಳಲ್ಲಿ ತಮಿಳು ಮತ್ತು ಕನ್ನಡ ಭಾಷಿಕರು ಸಚಿವಾಲಯ, ಇಲಾಖಾ ಮುಖ್ಯಸ್ಥರು ಮತ್ತು ಸ್ಥಳೀಯ ಕಚೇರಿಗಳೊಂದಿಗೆ ಅಧಿಕೃತ ಪತ್ರವ್ಯವಹಾರಕ್ಕಾಗಿ ತಮ್ಮ ಮಾತೃಭಾಷೆಯನ್ನು ಬಳಸುವುದನ್ನು ಮುಂದುವರಿಸಬಹುದು. ಉತ್ತರಗಳನ್ನು ಅದೇ ಭಾಷೆಗಳಲ್ಲಿ ನೀಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಮುಂದುವರಿದು ಮಲಯಾಳಂ ಅಲ್ಲದೇ ಮಾತೃಭಾಷೆ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ಶಾಲೆಗಳಲ್ಲಿ ಲಭ್ಯವಿರುವ ಭಾಷೆಗಳನ್ನು ಆಯ್ಕೆ ಮಾಡಲು ಸ್ವತಂತ್ರರು. ಇತರ ರಾಜ್ಯಗಳು ಅಥವಾ ವಿದೇಶಗಳ ವಿದ್ಯಾರ್ಥಿಗಳು 9 ಮತ್ತು 10ನೇ ತರಗತಿ ಅಥವಾ ಉನ್ನತ ಶಿಕ್ಷಣ ಹಂತಗಳಲ್ಲಿ ಮಲಯಾಳಂ ಪರೀಕ್ಷೆಗಳಿಗೆ ಹಾಜರಾಗಲು ಒತ್ತಾಯಿಸಲಾಗುವುದಿಲ್ಲ.
ಕೇರಳದ ಭಾಷಾ ನೀತಿಯು 1963 ರ ಅಧಿಕೃತ ಭಾಷಾ ಕಾಯ್ದೆ ಮತ್ತು ಭಾರತದ ಸಂವಿಧಾನದ 346 ಮತ್ತು 347 ನೇ ವಿಧಿಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ. ಭಾರತದ ವೈವಿಧ್ಯತೆಯನ್ನು ಆಚರಿಸಬೇಕು ಹಾಗೂ ಯಾವುದನ್ನೂ ಬಲವಂತಪಡಿಸಬಾರದು.
ಮುಂದುವರಿದು ನಮ್ಮ ಸರ್ಕಾರವು ಪಾರದರ್ಶಕ ಕೇರಳ ಮಾದರಿಯ ಮೇಲೆ ನಾವು ನಂಬಿಕೆ ಇರಿಸಿದ್ದೇವೆ ಎಂದೂ ಹೇಳಿದ್ದಾರೆ.
ತುಳು ಭಾಷಿಕರೂ ಕೇರಳದಲ್ಲಿದ್ದಾರೆ
ಇನ್ನು ಕರ್ನಾಟಕ ಸರ್ಕಾರವು ಕೇರಳದ ಮಲಯಾಳಂ ಭಾಷೆ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವಾಗ, ತುಳು ಭಾಷೆಯನ್ನು ಉಲ್ಲೇಖ ಮಾಡಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಕೇರಳ ರಾಜ್ಯದ ಮಸೂದೆಯು ತುಳು ಭಾಷಿಕರನ್ನು ರಕ್ಷಿಸುತ್ತದೆಯೇ, ಕೇರಳ ಸರ್ಕಾರವು ತುಳುವನ್ನು ಬದಿಗಿಟ್ಟು ರಾಜ್ಯದಲ್ಲಿ ಒಂದು ಭಾಷೆಯ ಪ್ರಾಬಲ್ಯಕ್ಕಾಗಿ ಒತ್ತಾಯಿಸುತ್ತಿರುವುದು ಏಕೆ, ತುಳುನಾಡು ಪ್ರದೇಶದ ಭಾಗವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಾತನಾಡುವ ಪ್ರಾಚೀನ ಭಾಷೆಗಳಲ್ಲಿ ತುಳು ಕೂಡ ಒಂದು. ಕೇರಳವು ಬಹುಕಾಲದ ಬೇಡಿಕೆಯಾಗಿರುವ ತುಳು ಭಾಷೆಯನ್ನು ಅಧಿಕೃತಗೊಳಿಸಬೇಕು ಮತ್ತು ತುಳುವಿನಲ್ಲಿ ಶಿಕ್ಷಣವನ್ನು ನೀಡಬೇಕು ಎನ್ನುವ ಆಗ್ರಹವೂ ವ್ಯಕ್ತವಾಗುತ್ತಿದೆ.












Click it and Unblock the Notifications