ಸಮುದ್ರದ ಮೇಲೊಂದು 60 ಕಿ.ಮೀ. ಉದ್ದದ ಬೃಹತ್ ಅಣೆಕಟ್ಟು: ಭಾರತದ ಕಲ್ಪಸರ್ ಇಂಜಿನಿಯರಿಂಗ್ ವಿಸ್ಮಯಕ್ಕೆ ವಿಶ್ವವೇ ಬೆರಗು
ಭಾರತ ಒಂದು ಮುಂದುವರೆಯುತ್ತಿರುವ ದೇಶ. ಇಲ್ಲಿ ದಿನದಿಂದ ದಿನಕ್ಕೆ ಮೂಲಸೌಕರ್ಯಗಳ ಅಭಿವೃದ್ಧಿ ಒಂದು ಹೊಸ ಹೊಸ ಮೈಲಿಗಲ್ಲಗಳನ್ನಾ ಸಾಧಿಸುತ್ತಿದೆ. ಈಗ ನದಿಗಳಿಗೆ ಅಣೆಕಟ್ಟು ಕಟ್ಟುವ ಹಂತವನ್ನು ದಾಟಿ, ಸಮುದ್ರದ ಮೇಲೆಯೇ ಬೃಹತ್ ಅಣೆಕಟ್ಟುಗಳನ್ನ ನಿರ್ಮಿಸುವ ಅತ್ಯುನ್ನತ ತಂತ್ರಜ್ಞಾನ ಭಾರತದಲ್ಲಿದೆ. ವಿಶ್ವದ ಇತಿಹಾಸದಲ್ಲೇ ಅತ್ಯಂತ ವಿಸ್ಮಯಕಾರಿ ಇಂಜಿನಿಯರಿಂಗ್ ಸಾಧನೆಯಾಗಿ ಹೊರಹೊಮ್ಮುತ್ತಿರುವ ಗುಜರಾತ್‌ನ 'ಕಲ್ಪಸರ್ ಯೋಜನೆ'ಇದೀಗ ಅಮೆರಿಕ ಮತ್ತು ಚೀನಾದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಭಾರತದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.
ಹಿಂದೂ ಪುರಾಣದಲ್ಲಿರುವ ಕಲ್ಪವೃಕ್ಷದ ಹೆಸರಿನಿಂದ ಸ್ಪೂರ್ತಿ ಪಡೆದು ಈ ಮಹಾತ್ವಾಕಾಂಕ್ಷಿ ಯೋಜನೆಗೆ ಕಲ್ಪಸರ್ ಎಂದು ನಾಮಕರಣ ಮಾಡಲಾಗಿದ್ದು, ಅಂದಾಜು 1.2 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ.

ಕಲ್ಪಸರ್ ಯೋಜನೆ ಗುಜರಾತ್: ಸಮುದ್ರದ ಮಧ್ಯೆ ಸಿಹಿನೀರಿನ ಜಲಾಶಯ
ಗುಜರಾತ್‌ನ ಖಂಭಾತ್ ಕೊಲ್ಲಿಯಲ್ಲಿ ಭಾವನಗರ ಮತ್ತು ಭರೂಚ್ ನಡುವೆ ಸಮುದ್ರದ ಮೇಲೆ ಸುಮಾರು 60 ಕಿಲೋಮೀಟರ್ ಉದ್ದದ ಬೃಹತ್ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಸಾಮಾನ್ಯವಾಗಿ ನದಿಗಳ ನೀರು ವ್ಯರ್ಥವಾಗಿ ಸಮುದ್ರವನ್ನು ಸೇರುತ್ತದೆ.
ಆದರೆ ಈ ಯೋಜನೆಯ ಮೂಲಕ ಸಬರಮತಿ, ಮಹಿ, ಧಾದರ್ ಮತ್ತು ನರ್ಮದಾ ನದಿಗಳ ನೀರನ್ನ ಸಮುದ್ರಕ್ಕೆ ಸೇರದಂತೆ ತಡೆದು, ಸಮುದ್ರದ ಮಧ್ಯಭಾಗದಲ್ಲೇ 1,800 ಚದರ ಕಿಲೋಮೀಟರ್ ವಿಸ್ತೀರ್ಣದ ವಿಶ್ವದ ಅತಿದೊಡ್ಡ ಸಿಹಿನೀರಿನ ಜಲಾಶಯವನ್ನ ನಿರ್ಮಿಸಲಾಗುತ್ತಿದೆ. ಈ ಅತ್ಯಾಧುನಿಕ, ಜೊತೆಗೆ ಸವಾಲಿನ ಇಂಜಿನಿಯರಿಂಗ್ ಕೆಲಸಕ್ಕಾಗಿ ನೆದರ್ಲ್ಯಾಂಡ್ಸ್ ದೇಶದ ಜಲ ತಜ್ಞರ ಸಲಹೆಗಳನ್ನ ಸಹ ಭಾರತೀಯ ಇಂಜಿನಿಯರ್‌ಗಳು ಪಡೆದುಕೊಳ್ಳುತ್ತಿದ್ದಾರೆ.
16 ಪಥಗಳ ಹೆದ್ದಾರಿ ಹಾಗೂ 4 ಪಥಗಳ ರೈಲ್ವೆ ಕಾರಿಡಾರ್ ನಿರ್ಮಾಣ
ಈ ಬೃಹತ್ ಅಣೆಕಟ್ಟಿನ ಮೇಲ್ಭಾಗದಲ್ಲಿ 10 ರಿಂದ 16 ಪಥಗಳ ವಿಶಾಲವಾದ ಹೆದ್ದಾರಿ ಹಾಗೂ 4 ಪಥಗಳ ರೈಲ್ವೆ ಕಾರಿಡಾರ್ ನಿರ್ಮಾಣವಾಗಲಿದೆ. ಇದರಿಂದ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನಡುವಿನ ಪ್ರಯಾಣದ ದೂರವು ಏಕಾಏಕಿ 136 ಕಿಲೋಮೀಟರ್‌ಗಳಷ್ಟು ಕಡಿಮೆಯಾಗಲಿದೆ. ಪ್ರಸ್ತುತ ಈ ಎರಡು ಭಾಗಗಳ ನಡುವೆ ಪ್ರಯಾಣಿಸಲು 8 ಗಂಟೆಗಳ ಸಮಯ ಬೇಕಾಗುತ್ತಿದ್ದು, ಅಣೆಕಟ್ಟಿನ ಮೇಲಿನ ಹೆದ್ದಾರಿ ಪೂರ್ಣಗೊಂಡ ನಂತರ ಕೇವಲ 1 ಗಂಟೆಯಲ್ಲಿ ಪ್ರಯಾಣ ಮಾಡಬಹುದು. ಇದು ಸರಕು ಸಾಗಣೆ ಹಾಗೂ ಸಾರಿಗೆ ಕ್ಷೇತ್ರದಲ್ಲಿ ಭಾರಿ ಕ್ರಾಂತಿ ಸೃಷ್ಟಿಸಿದೆ.
ರೈತರಿಗೆ ನೀರಾವರಿ ಹಾಗೂ 5,000 ಮೆಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದನೆ
ಕಲ್ಪಸರ್ ಯೋಜನೆ ಪೂರ್ಣಗೊಂಡರೆ ಸೌರಾಷ್ಟ್ರ ಮತ್ತು ಉತ್ತರ ಗುಜರಾತ್ ಭಾಗದ ಸುಮಾರು 10.5 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಸಮೃದ್ಧ ನೀರಾವರಿ ಸೌಲಭ್ಯ ಸಿಗಲಿದೆ. ಜೊತೆಗೆ 1 ಕೋಟಿಗೂ ಹೆಚ್ಚು ಜನರಿಗೆ ಶಾಶ್ವತವಾಗಿ ಕುಡಿಯುವ ನೀರು ಸಿಗುತ್ತದೆ. ಮಹತ್ವಾಕಾಂಕ್ಷಿ ಧೋಲೇರಾ ಸ್ಮಾರ್ಟ್ ಸಿಟಿಗೆ ಅಗತ್ಯವಿರುವ ನೀರಿನ ಕೊರತೆ ಸಹ ನೀಗಲಿದೆ.
ಇದಲ್ಲದೆ, ಸಮುದ್ರದ ಅಲೆಗಳು ಹಾಗೂ ಸೌರಶಕ್ತಿಯನ್ನ ಬಳಸಿಕೊಂಡು ಸುಮಾರು 5,000 ಮೆಗಾವ್ಯಾಟ್ ಸ್ವಚ್ಛ ಹಸಿರು ವಿದ್ಯುತ್ ಉತ್ಪಾದಿಸುವ ಗುರಿಯನ್ನ ಹೊಂದಲಾಗಿದೆ. ಈ ಯೋಜನೆಗೆ ಪೂರಕವಾಗಿ ನರ್ಮದಾ ನದಿಯ ಮುಖದ್ವಾರದ ಬಳಿ 4,000 ಕೋಟಿ ರೂ. ವೆಚ್ಚದಲ್ಲಿ 'ಭಾದ್‌ಭೂತ್ ಬ್ಯಾರೇಜ್' ನಿರ್ಮಾಣವೂ ಆರಂಭವಾಗಿದ್ದು, ಇದು ಸಮುದ್ರದ ಉಪ್ಪುನೀರು ನದಿಗೆ ನುಗ್ಗದಂತೆ ತಡೆದು ಕಲ್ಪಸರ್ ಜಲಾಶಯಕ್ಕೆ ನಿರಂತರವಾಗಿ ಸಿಹಿನೀರನ್ನ ಒದಗಿಸುತ್ತದೆ.
ವಿಶ್ವದ ಅತಿದೊಡ್ಡ ಸಮುದ್ರ ಅಣೆಕಟ್ಟುಗಳ ದಾಖಲೆ ಮುರಿಯಲಿರುವ ಭಾರತ
ಈ ಬೃಹತ್ ನಿರ್ಮಾಣ ಕೆಲಸವೂ ಸಂಪೂರ್ಣವಾಗಿ ಸಮುದ್ರದ ಒಳಭಾಗದಲ್ಲಿ ನಡೆಯುತ್ತಿರುವುದರಿಂದ ಯಾವುದೇ ಗ್ರಾಮವನ್ನು ಖಾಲಿ ಮಾಡಿಸುವ ಅಥವಾ ಭೂಸ್ವಾಧೀನದ ಸಮಸ್ಯೆ ಎದುರಾಗಿಲ್ಲ. ಗುಜರಾತ್ ಭೂಕಂಪನ ಪೀಡಿತ ಪ್ರದೇಶವಾಗಿರುವುದರಿಂದ ಸಮುದ್ರದಲ್ಲಿ ಅಣೆಕಟ್ಟು ನಿರ್ಮಿಸುವುದು, ನದಿಗಳು ತರುವ ಹೂಳನ್ನ ನಿಯಂತ್ರಿಸುವುದು ಮತ್ತು ಸ್ಥಳೀಯ ಮೀನುಗಾರರ ಜೀವನೋಪಾಯವನ್ನ ರಕ್ಷಿಸುವುದು ದೊಡ್ಡ ಸವಾಲಾಗಿದೆ.
ಹಂತ-ಹಂತವಾಗಿ ಮುಂದುವರಿಯುತ್ತಿರುವ ಈ ಯೋಜನೆ ಪೂರ್ಣಗೊಂಡರೆ, ಪ್ರಸ್ತುತ ವಿಶ್ವದ ಅತಿದೊಡ್ಡ ಸಮುದ್ರ ಅಣೆಕಟ್ಟುಗಳೆಂಬ ಖ್ಯಾತಿ ಹೊಂದಿರುವ ದಕ್ಷಿಣ ಕೊರಿಯಾದ 'ಸೈಮಂಗಮ್ ಸೀವಾಲ್' ಮತ್ತು ನೆದರ್ಲ್ಯಾಂಡ್ಸ್‌ನ 'ಅಫ್ಸ್ಲೂಯಿಟ್‌ಡೈಕ್' ದಾಖಲೆಗಳನ್ನ ಭಾರತ ಮುರಿಯಲಿದೆ.


Click it and Unblock the Notifications
