ಚುನಾವಣೆ ಸೋತರೂ ಮೋದಿ ಸಂಪುಟ ಸೇರಲಿದ್ದಾರೆ ಕೆ. ಅಣ್ಣಾಮಲೈ?
ಚೆನ್ನೈ, ಜೂನ್ 09; ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಭಾನುವಾರ ಸಂಜೆ 7.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ 3.0 ಸರ್ಕಾರದಲ್ಲಿ ಯಾರಿಗೆ ಸಚಿವ ಸ್ಥಾನ? ಎಂಬ ಚರ್ಚೆ ಜೋರಾಗಿದೆ.
ಬಿಜೆಪಿ, ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳ ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದಲ್ಲಿ ಸಚಿವರಾಗುವುದು ಖಚಿತವಾಗಿದೆ. ತಮಿಳುನಾಡು ರಾಜ್ಯಕ್ಕೆ ಸಹ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಣ್ಣಾಮಲೈ ಲೋಕಸಭೆ ಚುನಾವಣೆ 2024ರಲ್ಲಿ ಕೊಯಮತ್ತೂರು ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಆದರೆ ಸಹ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ.
ಅಣ್ಣಾಮಲೈಗೆ ಸಚಿವ ಸ್ಥಾನ ಏಕೆ?: ಲೋಕಸಭೆ ಚುನಾವಣೆ 2024ರಲ್ಲಿ ತಮಿಳುನಾಡು ರಾಜ್ಯದಲ್ಲಿ ಬಿಜೆಪಿ ಯಾವ ಕ್ಷೇತ್ರದಲ್ಲಿಯೂ ಜಯಗಳಿಸಿಲ್ಲ. ಆದರೆ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕೆ. ಅಣ್ಣಾಮಲೈಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ.
ಕೆ. ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರದಲ್ಲಿ 4,50,132 ಮತಗಳನ್ನು ಪಡೆಯುವ ಮೂಲಕ ಡಿಎಂಕೆಯ ಗಣಪತಿ ರಾಜ್‌ಕುಮಾರ್ ಪಿ. (5,68,200 ಮತ) ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಆದರೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಶೇ 11.5ರಷ್ಟು ಮತಗಳನ್ನು ಗಳಿಸಿದೆ.
ಅಣ್ಣಾಮಲೈ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ ಬಳಿಕ ತಮಿಳುನಾಡಿನಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಾಗುತ್ತಿದೆ. ಆದ್ದರಿಂದ ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಣ್ಣಾಮಲೈ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಗುತ್ತದೆ ಎಂಬುದು ಲೆಕ್ಕಾಚಾರವಾಗಿದೆ.
ಈ ಹಿಂದೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಇಳಾ ಗಣೇಶನ್, ಸಿ. ಪಿ. ರಾಧಾಕೃಷ್ಣನ್, ತಮಿಳಿಸೈ ಸೌಂದರರಾಜನ್ ಅವರನ್ನು ರಾಜ್ಯಪಾಲರಾಗಿ ಮಾಡಲಾಗಿತ್ತು. ಅಲ್ಲದೇ ಅಣ್ಣಾಮಲೈಗಿಂತ ಮೊದಲು ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಲ್. ಮುರುಗನ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಗಿತ್ತು.
ತಮಿಳುನಾಡಿನಲ್ಲಿ ಬಿಜೆಪಿಯ ಪ್ರಾಬಲ್ಯ ಇನ್ನಷ್ಟು ಹೆಚ್ಚಾಗಬೇಕಾದರೆ ಅಣ್ಣಾಮಲೈ ಅವರನ್ನು ಕೇಂದ್ರ ಸಚಿವರಾಗಿ ಮಾಡಬೇಕು ಎಂಬುದು ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರ ಬೇಡಿಕೆಯಾಗಿದೆ. ಅಲ್ಲದೇ ನರೇಂದ್ರ ಮೋದಿ, ಅಮಿತ್ ಶಾ ಅಣ್ಣಾಮಲೈ ಬಗ್ಗೆ ಚೆನ್ನಾಗಿ ತಿಳಿದಿದ್ದು, ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ನರೇಂದ್ರ ಮೋದಿ ಸಂಪುಟದ ಒಟ್ಟು ಖಾತೆಗಳ ಸಂಖ್ಯೆ 89. ಎನ್‌ಡಿಎ ಮೈತ್ರಿಕೂಟಕ್ಕೆ ಹಂಚಿಕೆ ಮಾಡಿದ ಬಳಿಕ ಬಿಜೆಪಿಗೆ 66 ಸ್ಥಾನಗಳು ಉಳಿಯಲಿವೆ ಎಂಬುದು ಲೆಕ್ಕಾಚಾರವಾಗಿದೆ. ಆದ್ದರಿಂದ ಇವುಗಳಲ್ಲಿ ಯಾವ ರಾಜ್ಯಕ್ಕೆ?, ಎಷ್ಟು ಸಚಿವ ಸ್ಥಾನ ನೀಡಬೇಕು? ಎಂದು ನರೇಂದ್ರ ಮೋದಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಯಾರಿಗೆ ಸಚಿವ ಸ್ಥಾನ ನೀಡಬೇಕು?. ಯಾರಿಗೆ ರಾಜ್ಯ ಖಾತೆ ನೀಡಬೇಕು?. ಯಾರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಬೇಕು? ಎಂಬುದು ಪ್ರಧಾನಿಗಳ ವಿಚೇಚನೆಯ ವಿಷಯವಾಗಿದೆ. ಬಿಜೆಪಿಯ ಹಿರಿಯ ನಾಯಕರು ಮೋದಿ ಸಂಪುಟ ಸೇರುವುದು ಖಚಿತವಾಗಿದೆ. ಇಂದು ಸಂಜೆ ಮೋದಿ ಜೊತೆಗೆ ಒಟ್ಟು 30 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಮೋದಿ 2.0 ಸರ್ಕಾರದಲ್ಲಿ ಸಚಿವರಾಗಿದ್ದ ಕೆಲವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದಿಲ್ಲ ಎಂಭ ಮಾಹಿತಿಯೂ ಇದೆ.











Click it and Unblock the Notifications