ಪತ್ರಕರ್ತೆ ಪ್ರಶ್ನೆಗೆ ಸ್ಫೋಟಗೊಂಡ ಅಣ್ಣಾಮಲೈರನ್ನು ದೆಹಲಿಗೆ ಬಾ ಎಂದ ಬಿಜೆಪಿ ಹೈಕಮಾಂಡ್- ಕುತೂಹಲ ಕೆರಳಿಸಿದ ಬೆಳವಣಿಗೆ
ಕೊಯಮತ್ತೂರು, ಅಕ್ಟೋಬರ್ 2: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಭಾನುವಾರ ಕೊಯಮತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಸಿಡಿಮಿಡಿಗೊಂಡು ಕಿರಿಕ್ ಮಾಡಿದ್ದಾರೆ. ಇದು ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದರೆ ಪಕ್ಷದಲ್ಲಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಯನ್ನು ಅಣ್ಣಾಮಲೈ ಅವರಿಗೆ ಮಹಿಳಾ ವರದಿಗಾರ್ತಿ ಕೇಳಿದ್ದಾರೆ.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಮಹಿಳಾ ಪತ್ರಕರ್ತೆಗೆ ಕ್ಯಾಮೆರಾ ಮುಂದೆ ಬರಲು ಹೇಳಿದ್ದಾರೆ.
ಯಾರು ಇಂತಹ 'ಬುದ್ಧಿವಂತ' ಪ್ರಶ್ನೆ ಕೇಳುತ್ತಿದ್ದಾರೆಂದು ತಮಿಳುನಾಡಿನ ಜನರು ನೋಡಲಿ ಎಂದು ಬೆದರಿಕೆಯ ಧ್ವನಿಯಲ್ಲಿ ಅಣ್ಣಾಮಲೈ ಮಾತನಾಡಿದ್ದಾರೆ.
'ಇಲ್ಲಿ ಬಾ ಅಕ್ಕ, ಇಲ್ಲಿಗೆ ಬಂದು ಮಾತಾಡು. ಇಂತಹ ಅದ್ಭುತ ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆಂದು ತಮಿಳುನಾಡಿನ ಜನತೆ ನೋಡಲಿ' ಎಂದು ಹೇಳಿದ್ದಾರೆ.
'ಪ್ರಶ್ನೆ ಕೇಳುವುದಕ್ಕೆ ಒಂದು ರೂಢಿ ಇದೆ. ಒಬ್ಬ ವ್ಯಕ್ತಿಯು ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ಹೊಂದಿರುವಾಗ, ಅವರು ಲಕ್ಷ್ಮಣ ರೇಖೆಯನ್ನು ದಾಟಬಾರದು. ಇದಕ್ಕೆ ಮಿತಿ ಇದೆ. ಯಾರೇ ಆಗಲಿ ಆ ರೂಢಿಯನ್ನು ದಾಟಬಾರದು. ಅಂತಹ ಜನರನ್ನು ನಾನು ಸುಮ್ಮನೇ ಬಿಡುವುದಿಲ್ಲ' ಎಂದು ಬೆದರಿಕೆ ಒಡ್ಡಿದ್ದಾರೆ.

ಬಿಜೆಪಿ ಜೊತೆಗಿನ ದೀರ್ಘ ಕಾಲದ ಸಂಬಂಧವನ್ನು ಎಐಎಡಿಎಂಕೆ ಕಡಿದುಕೊಂಡಿದೆ. ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳದ ಬಿಜೆಪಿಗೆ ಇದು ಆಘಾತಕಾರಿಯೆಂದೇ ಹೇಳಬಹುದು.
ಅಣ್ಣಾಮಲೈ ವಿರುದ್ಧ ಎಐಎಡಿಎಂಕೆ ಆರೋಪ
ಬಿಜೆಪಿ ಜೊತೆಗಿನ ಸಂಬಂಧ ಮುರಿದುಕೊಳ್ಳಲು ಅಣ್ಣಾಮಲೈ ಕಾರಣವೆಂದು ಎಐಎಡಿಎಂ ನಾಯಕರು ಆರೋಪಿಸಿದ್ದಾರೆ. ಅಣ್ಣಾಮಲೈ ಅವರು ತಮ್ಮ ಪಕ್ಷದ ಮಹಾನಾಯಕರನ್ನು ನಿಂದಿಸುತ್ತಿದ್ದಾರೆ. ಇದನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲವೆಂದು ಎಐಎಡಿಎಂಕೆ ನಾಯಕರು ಹೇಳಿದ್ದಾರೆ.
ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಬಿಜೆಪಿ ಹೈಕಮಾಂಡ್‌ಗೆ ಎಐಎಡಿಎಂಕೆ ಒತ್ತಾಯಿಸಿದೆ. ಈ ಕುರಿತ ಪ್ರಶ್ನೆಯನ್ನು ಪತ್ರಕರ್ತೆ ಕೇಳಿದ್ದಕ್ಕೆ ಅಣ್ಣಾಮಲೈ ಕೆರಳಿದ್ದಾರೆ.

ಅಣ್ಣಾಮಲೈಗೆ ಹೈಕಮಾಂಡ್ ಬುಲಾವ್
ಈ ಬೆಳವಣಿಗೆಗಳ ನಡುವೆಯೇ ಅಣ್ಣಾಮಲೈ ಅವರನ್ನು ದೆಹಲಿ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಇದು ಭಾರೀ ಮಹತ್ವ ಪಡೆದುಕೊಂಡಿದೆ. ಅಣ್ಣಾಮಲೈ ಅವರು ಸೋಮವಾರ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.
ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರವನ್ನು ಎಐಎಡಿಎಂಕೆ ಕಳೆದ ವಾರ ಘೋಷಿಸಿದೆ. 2024 ರ ಲೋಕಸಭೆ ಚುನಾವಣೆಗೆ ತನ್ನದೇ ಆದ ಮೈತ್ರಿಯನ್ನು ರಚಿಸುವುದಾಗಿಯೂ ಅದು ತಿಳಿಸಿದೆ. ಈ ಮೈತ್ರಿ ಮುರಿದುಬಿದ್ದಿದ್ದಕ್ಕೆ ಕಾರಣ ಅಣ್ಣಾಮಲೈ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ಪ್ರಶ್ನಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಅಣ್ಣಾಮಲೈ ಅವರು ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭಾಗವಹಿಸುವ ಸಾಧ್ಯತೆ ಇದೆ. ಅವರಿಬ್ಬರೂ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಣ್ಣಾಮಲೈ ಜೊತೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಅಣ್ಣಾಮಲೈ ಅವರು ದೆಹಲಿ ಭೇಟಿ ಮುಗಿದ ಬಳಿಕ ಮುಂದಿನ ವಾರ ಹೊಸ ಮೈತ್ರಿಕೂಟ ರಚಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಮಿಳುನಾಡು ಬಿಜೆಪಿ ಹೇಳಿದೆ. ಎಐಎಡಿಎಂಕೆ ಹೊರತುಪಡಿಸಿದ ಮೈತ್ರಿಕೂಟ ಇದಾಗಲಿದೆ ಎಂದು ಬಿಜೆಪಿ ತಿಳಿಸಿದೆ.
ತಮಿಳುನಾಡಿನಲ್ಲಿ ಭವಿಷ್ಯದ ಕಾರ್ಯತಂತ್ರಗಳು ಹಾಗೂ ಸಂಭಾವ್ಯ ಮೈತ್ರಿಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಬಳಿ ಚರ್ಚಿಸಲಿದೆ ಎಂದು ತಮಿಳುನಾಡು ಬಿಜೆಪಿ ನಾಯಕರು ನಿರೀಕ್ಷಿಸಿದ್ದಾರೆ.












Click it and Unblock the Notifications