ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಮಾನಹಾನಿ ಪ್ರಕರಣ
ಅಹಮದಾಬಾದ್, ಜೂನ್ 6: ಅಂಕಣಕಾರ್ತಿ ಶೆಫಾಲಿ ವೈದ್ಯ ಅವರ ವಿರೂಪಗೊಳಿಸಿದ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ.
ಶೆಫಾಲಿ ವೈದ್ಯ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರವಿಶಂಕರ್ ಗುರೂಜಿ ಅವರ ಜತೆ ಇರುವಂತೆ ಫೋಟೊಶಾಪ್‌ನಲ್ಲಿ ಸೃಷ್ಟಿಸಲಾದ ಚಿತ್ರವನ್ನು ಮೇ 29ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದರು. ಅದರ ಜತೆಯಲ್ಲಿ ಪರೇಶ್ ರಾವಲ್ ಅಭಿನಯದ 'ಓ ಮೈ ಗಾಡ್' ಚಿತ್ರದ ಅದೇ ರೀತಿಯ ಫೋಟೊವನ್ನು ಸಹ ಅವರು ಪೋಸ್ಟ್ ಮಾಡಿದ್ದರು.
ಎರಡೂ ಫೋಟೊಗಳ ನಡುವಣ ಸಾಮ್ಯತೆಯ ಬಗ್ಗೆ ಹೇಳಿದ್ದ ಜಿಗ್ನೇಶ್, 'ಈ ಫೋಟೊವನ್ನು ನೋಡಿದಾಗ ನಾನು ನಿಜಕ್ಕೂ ಓ ಮೈ ಗಾಡ್ ಎಂದು ಹೇಳಲು ಬಯಸುತ್ತೇನೆ! ಇದು ತುಂಬಾ ಸಿನಿಮೀಯವಾಗಿದೆ. ಕಲೆ ನೈಜ ಜೀವನವನ್ನು ಊಹಿಸುತ್ತದೆಯೇ? ಸಿನಿಮಾದಂತೆಯೇ, ಈ ಮೂವರೂ ಕೂಡ ಬಹು ದೊಡ್ಡ ನಟರು' ಎಂದು ವ್ಯಂಗ್ಯವಾಡಿದ್ದರು.

ಅದೇ ಟ್ವೀಟ್‌ನಲ್ಲಿ ಜಿಗ್ನೇಶ್, ಆ ಮೂವರನ್ನು ಅತಿ ನಾಟಕೀಯ ವ್ಯಕ್ತಿಗಳು ಎಂದು ಟೀಕಿಸಿದ್ದರು.
ಈ ಸಂಬಂಧ ಶೆಫಾಲಿ ವೈದ್ಯ ಅವರು ಪುಣೆಯ ಪಾವುದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಮ್ಮ ಚಿತ್ರವನ್ನು ಫೇಸ್‌ಬುಕ್ ಖಾತೆಯಿಂದ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ. ಬಳಿಕ ಅದನ್ನು ಕತ್ತರಿಸಿ ಆದಿತ್ಯನಾಥ್ ಮತ್ತು ರವಿಶಂಕರ್ ಅವರು ಇರುವ ಚಿತ್ರಗಳ ಜತೆ ಅಂಟಿಸಲಾಗಿದೆ.
ಜಿಗ್ನೇಶ್ ಅವರು ಮಾಡಿರುವ ಟ್ವೀಟ್‌ನಲ್ಲಿರುವ ಕಾಮೆಂಟ್‌ಗಳು ಮಾನಹಾನಿ ಉಂಟು ಮಾಡುವಂತಿದ್ದು, ಅವು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಶಿಕ್ಷಾರ್ಹವಾಗಿವೆ ಎಂದು ಶೆಫಾಲಿ ದೂರಿನಲ್ಲಿ ತಿಳಿಸಿದ್ದರು.
ಐಪಿಸಿ ಸೆಕ್ಷನ್ 500 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ 'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ಶೆಫಾಲಿ ವೈದ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್‌ನೊಂದಿಗೆ ನಂಟು ಹೊಂದಿರುವ ಚುನಾಯಿತ ಶಾಸಕ. ಅವರು ಸಾಮಾನ್ಯ ವ್ಯಕ್ತಿಯಲ್ಲ. ನಾನೊಬ್ಬಳು ಮಹಿಳೆಯಾದ ಕಾರಣಕ್ಕೆ ಮತ್ತು ನನ್ನ ದೃಷ್ಟಿಕೋನಗಳನ್ನು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕೆ ಅವರು ತಮ್ಮ ಸ್ಥಾನ ಮತ್ತು ಅಧಿಕಾರವನ್ನು ಖಾಸಗಿ ವ್ಯಕ್ತಿಯೊಬ್ಬರನ್ನು ನಿಂದಿಸಲು, ಅವಮಾನಿಸಲು ಮತ್ತು ಬೆದರಿಸಲು ಬಳಸುವಂತಿಲ್ಲ.
ಅವರು ಟ್ವೀಟ್ ಮಾಡಿರುವ ವಿರೂಪದ ಚಿತ್ರ ಸೆಕ್ಸಿಸ್ಟ್ ಮತ್ತು ಮಾನಹಾನಿಕರವಾಗಿದೆ. ಇದು ನನ್ನ ಮಕ್ಕಳಿಗೆ ತೀವ್ರ ಆಘಾತ ಉಂಟುಮಾಡಿದೆ. ಅನಿವಾರ್ಯವಾಗಿ ನಾನು ಪೊಲೀಸರಿಗೆ ದೂರು ನೀಡಬೇಕಾಯಿತು. ಈ ನೆಲದ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.
ಮೇವಾನಿ ಅವರು ಮಾಡಿದ ಟ್ವೀಟ್ ಸುಮಾರು 900 ಬಾರಿ ಟ್ವೀಟ್ ಆಗಿದೆ. ಅಲ್ಲದೆ 3,000ಕ್ಕೂ ಅಧಿಕ ಮಂದಿ ಅದನ್ನು ಲೈಕ್ ಮಾಡಿದ್ದಾರೆ.
ಅದರಲ್ಲಿ ಬಳಿಸಿರುವ ಚಿತ್ರ ನಕಲಿ ಎಂದು ತಿಳಿದ ಬಳಿಕ ಟ್ವೀಟ್ ಅನ್ನು ಅಳಿಸಿ ಹಾಕಿರುವುದಾಗಿ ಮೇವಾನಿ ತಿಳಿಸಿದ್ದಾರೆ.
'ಅದು ಫೋಟೊಶಾಪ್‌ನಲ್ಲಿ ಮಾಡಲಾದ ಚಿತ್ರ ಎಂಬುದು ತಿಳಿಯಿತು. ಅದನ್ನು ಪರಿಶೀಲಿಸದೆ ಪೋಸ್ಟ್ ಮಾಡಿದ್ದಕ್ಕೆ ಕ್ಷಮೆ ಕೋರುತ್ತೇನೆ. ನನ್ನ ಹಿಂದಿನ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇನೆ ಮತ್ತು ಭವಿಷ್ಯದಲ್ಲಿ ಎಚ್ಚರಿಕೆ ವಹಿಸುತ್ತೇನೆ.
ನಾವೆಲ್ಲರೂ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅದು ನಕಲಿ ಎಂದು ತಿಳಿದಾಗ ಅದನ್ನು ಅಳಿಸಿ ಹಾಕಬೇಕು ಎಂದು ಮೇವಾನಿ ಹೇಳಿದ್ದಾರೆ.












Click it and Unblock the Notifications