Jharkhand Election 2024: ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಯಾವಾಗ?-ಹಿಮಂತ್ ಬಿಸ್ವಾ ಹೇಳಿದ್ದೇನು?
Jharkhand Election: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ ಈಗಾಗಲೇ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರವನ್ನು ಆರಂಭಿಸಿವೆ. ನಿನ್ನೆಯಷ್ಟೇ ಜಾರ್ಖಂಡ್ ಸರ್ಕಾರವು ರೈತರ ಕೃಷಿ ಸಾಲವನ್ನು ಮನ್ನಾ ಮಾಡಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದೆ. ಇದೀಗ ಬಿಜೆಪಿಯ ಪ್ರಣಾಳಿಕೆ ಬಗ್ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಮಾಹಿತಿ ನೀಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರ್ಖಂಡ್‌ಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆಯನ್ನು ಅಕ್ಟೋಬರ್ 3ರಂದು ಬಿಡುಗಡೆ ಮಾಡಲಿದೆ ಎಂದರು. ಇನ್ನು ರಾಜ್ಯದ 81 ವಿಧಾನಸಭಾ ಸ್ಥಾನಗಳಿಗೆ ಮುಂದಿನ ತಿಂಗಳು ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಈಗಾಗಲೇ ಬಿಜೆಪಿಯ ಪರಿವರ್ತನಾ ಯಾತ್ರೆ ಆರಂಭವಾಗಿದೆ. ಇನ್ನು ಅಕ್ಟೋಬರ್ 2ರಂದು ಅಂದರೆ ಗಾಂಧಿಜಯಂತಿಯಂದು ಹಜಾರಿಬಾಗ್‌ನಲ್ಲಿ ನಡೆಯಲಿರುವ ಬಿಜೆಪಿಯ ಪರಿವರ್ತನ ಯಾತ್ರೆ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಇನ್ನು ಅಕ್ಟೋಬರ್ 3ರಿಂದ ನಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 20ರಿಂದ ಬಿಜೆಪಿ ಪರಿವರ್ತನ ಯಾತ್ರೆಗೆ ಚಾಲನೆ ನೀಡಿದ್ದು, ಇದು ಅಕ್ಟೋಬರ್ 2ರಂದು ಮುಕ್ತಾಯಗೊಳ್ಳಲಿದೆ. ಈ ಸಮಯದೊಳಗೆ ರಾಜ್ಯದ 24 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳಲ್ಲಿ 5,400 ಕಿಲೋ ಮೀಟರ್ ಯಾತ್ರೆ ಸಾಗಲಿದೆ ಎಂದು ಹೇಳಿದರು.
ವಿಧಾನಭೆ ಸ್ಥಾನಗಳ ವಿವರ: 2019ರಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 20ರ ನಡುವೆ 5 ಹಂತಗಳಲ್ಲಿ 81 ವಿಧಾನಸಭಾ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸಲಾಗಿದ್ದು, ಡಿಸೆಂಬರ್ 23ರಂದು ಫಲಿತಾಂಶಗಳನ್ನು ಘೋಷಣೆ ಮಾಡಲಾಯಿತು. ಇನ್ನು ಈ ಬಾರಿ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2-3 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಜಾರ್ಖಂಡ್ ವಿಧಾನಸಭೆಯ ಚುನಾವಣೆಯು ಜನವರಿ 5, 2025ರಂದು ಕೊನೆಗೊಳ್ಳಲಿದೆ ಎಂದು ಹೇಳಾಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 2.59 ಕೋಟಿ ಮತದಾರರಿದ್ದಾರೆ. ಇವರಲ್ಲಿ 1.31 ಕೋಟಿ ಪುರುಷರು ಮತ್ತು 1.28 ಕೋಟಿ ಮಹಿಳೆಯರಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ 11.5 ಲಕ್ಷಕ್ಕೂ ಹೆಚ್ಚು ಮಂದಿ ಮತದಾನ ಮಾಡಲಿದ್ದಾರೆ. 1.5 ಲಕ್ಷ ಮತದಾರರು 85 ವರ್ಷ ಮೇಲ್ಪಟ್ಟವರಾಗಿದ್ದು, 3.64 ಲಕ್ಷ ಅಂಗವಿಕಲ ಮತದಾರರಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications