ಜನತಾ ಕರ್ಫ್ಯೂ ಮುಗೀತು, ಚಪ್ಪಾಳೆ ಹೊಡೆದದ್ದೂ ಆಯಿತು: ಮುಂದಾ?
ಜನರಿಗಾಗಿ, ಜನರಿಗೋಸ್ಕರ, ಜನರೇ ನಡೆಸುವ ಹದಿನಾಲ್ಕು ಗಂಟೆಗಳ ಜನತಾ ಕರ್ಫ್ಯೂ ಮುಗಿದಿದೆ. ಸರಿಯಾಗಿ ಸಂಜೆ ಐದು ಗಂಟೆಗೆ ಜನರು ಚಪ್ಪಾಳೆ ಹೊಡೆದದ್ದೂ ಆಗಿದೆ. ಆ ಮೂಲಕ, ವಿಶಿಷ್ಟ ರೀತಿಯ ಅನುಭವಕ್ಕೆ ದೇಶ ಸಾಕ್ಷಿಯಾಗಿದೆ.
Recommended Video
ವೈದ್ಯಕೀಯ ಸೇವೆಯಿಂದ ಹಿಡಿದು ನಮ್ಮನ್ನು ರಕ್ಷಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ಮೋದಿ ಮಾಡಿದ ಮನವಿಗೆ ನಭೂತೋ ನಭವಿಷ್ಯತಿಃ ಎನ್ನುವ ಹಾಗೆ ಸಾರ್ವಜನಿಕರು ಸ್ಪಂದಿಸಿದ್ದಾರೆ. ಈ ಹಿಂದೆ, 1965ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ, ಇಂಡೋ-ಪಾಕ್ ಯುದ್ದದ ಸಂದರ್ಭದಲ್ಲಿ ಒಂದು ರಾತ್ರಿಯ ಊಟವನ್ನು ದೇಶಕ್ಕಾಗಿ ತ್ಯಜಿಸುವಂತೆ ಕರೆನೀಡಿದ್ದರು. ಅದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಂತೆ.
ಜನತಾ ಕರ್ಫ್ಯೂ ನಡೆಯಿತು, ಚಪ್ಪಾಳೆ ಹೊಡೆದದ್ದೂ ಆಯಿತು. ಇದನ್ನು ಶಿರಸಾ ಪಾಲಿಸಿದ ಕೂಡಲೇ ನಾವು ಮಾರಣಾಂತಿಕ ವೈರಸ್ ಮೆಟ್ಟಿನಿಂತ ಹಾಗಾಗುವುದೇ ಎಂದರೆ ಇದು ಕೊಂಕಲ್ಲ. ಅಸಲಿಗೆ ಇನ್ನು ಮುಂದೆ ಇರುವುದೇ ಕೇಂದ್ರ ಮತ್ತು ರಾಜ್ಯ ಸರಕಾರದ ಗುರುತರ ಜವಾಬ್ದಾರಿ ನಿರ್ವಹಿಸುವ ಸಮಯ ಆರಂಭವಾಗುವುದು.
ಪ್ರಕೃತಿಯ ಮುಂದೆ ಯಾವ ಆಟವೂ ನಡೆಯುವುದಿಲ್ಲ ಎನ್ನುವುದು ಒಪ್ಪಿಕೊಳ್ಳುವ ವಿಚಾರವಾದರೂ, ಯಾವರೀತಿ ಸರಕಾರ ಪ್ರವಾಹೋಪಾದಿಯಲ್ಲಿ ಇಂತಹ ಮೆಡಿಕಲ್ ಎಮರ್ಜೆನ್ಸಿಯ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತದೆ ಎನ್ನುವುದರ ಮೇಲೆ, ಈ ವೈರಸಿನ ಭವಿಷ್ಯ ನಿಂತಿದೆ.

ಕೊರೊನಾ ಟೆಸ್ಟ್ ಲ್ಯಾಬ್ ತೆರೆಯಲು ಕೇಂದ್ರದ ಅನುಮತಿ ಕೋರಲಾಗಿದೆ
ಯಡಿಯೂರಪ್ಪನವರು ಶನಿವಾರದಂದು ಒಂದು ಟ್ವೀಟ್ ಅನ್ನು ಮಾಡಿದ್ದರು. "ಮಂಗಳೂರು, ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ತೆರೆಯಲು ಕೇಂದ್ರದ ಅನುಮತಿ ಕೋರಲಾಗಿದೆ" ಎಂದು. ಲ್ಯಾಬ್ ತೆರೆಯಲೂ ಕೇಂದ್ರವನ್ನು ಅವಲಂಬಿಸುವ ಒಕ್ಕೂಟ ವ್ಯವಸ್ಥೆಯಲ್ಲಿ ನಾವಿರುವಾಗ ಕೇಂದ್ರದ ಸಹಕಾರ ಬಹುಮುಖ್ಯ.

ಪ್ರಧಾನಿಯವರ ದೇಶವನ್ನು ಉದ್ದೇಶಿಸಿ ಭಾಷಣ
ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದಾಗ, ಕೇಂದ್ರ ಸರಕಾರ ಕೊರೊನಾ ಮಟ್ಟಹಾಕಲು ತೆಗೆದುಕೊಂಡಿರುವ ಕ್ರಮಗಳೇನು? ರಾಜ್ಯ ಸರಕಾರಕ್ಕೆ ನೀಡಿದ ಸೂಚನೆ ಏನು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡದೇ, ಎಲ್ಲ ಭಾರವನ್ನು ಜನರ ಮೇಲೇ ಹೊರೆಸಿದರು ಎಂದರೆ ತಪ್ಪಾಗಲಾರದು.

ರಾಜ್ಯದ ಏಳು ಜಿಲ್ಲೆಗಳಲ್ಲಿ ಇನ್ನೂ ಹತ್ತು ದಿನ ಶಟ್ ಡೌನ್
ರಾಜ್ಯದ ಏಳು ಜಿಲ್ಲೆಗಳಲ್ಲಿ ಇನ್ನೂ ಹತ್ತು ದಿನ ಶಟ್ ಡೌನ್ ಮುಂದುವರಿಯಲಿದೆ. ತುರ್ತು ಸೇವೆ ಹೊರತು ಪಡಿಸಿ ಎಲ್ಲಾ ಬಂದ್ ಮಾಡಲು ಸರಕಾರ ಸೂಚಿಸಿದೆ. ವೈರಸ್ ಹರಡದಿರಲು ಸರಕಾರದ ಈ ನಿರ್ಧಾರ ಸ್ವಾಗತಾರ್ಹ. ಆದರೆ, ಈ ಶಟ್ ಡೌನ್ ನಿಂದ ಒಂದು ಹಂತದ ಜನರಿಗಾಗುವ ನಷ್ಟದ ಕತೆಯೇನು?

ಕೇರಳ ಸರಕಾರದ ವಿಶೇಷ ಪ್ಯಾಕೇಜ್ ಘೋಷಣೆ
ಇನ್ನು, ಬೀದಿಬದಿ ವ್ಯಾಪಾರಿಗಳ ಗೋಳು ಹೇಳತೀರದಂತಾಗಿದೆ. ಇನ್ನು ದುಡಿತಿನ್ನು ಎನ್ನುವ ವರ್ಗದವರು, ಹಣ್ಣು ತರಕಾರಿ ವ್ಯಾಪಾರಸ್ಥರು, ಸಣ್ಣಪುಟ್ಟ ಹೋಟೆಲ್ ಗಳು, ದಿನಗೂಲಿ ನೌಕರರು, ಕೂಲಿಗಳ ಅಳಲನನ್ನು ಒರೆಸುವವರಾರು? ಕೇರಳ ಸರಕಾರ ಘೋಷಿಸಿದಂತೆ ವಿಶೇಷ ಪ್ಯಾಕೇಜ್ ಅನ್ನು ಕರ್ನಾಟಕ ಸರಕಾರ ಪ್ರಕಟಿಸುತ್ತದಾ?

ಪೀಣ್ಯ, ಬೊಮ್ಮಸಂದ್ರ, ಜಿಗಣಿ ಮುಂತಾದ ಕೈಗಾರಿಕಾ ಪ್ರದೇಶ
ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಪೀಣ್ಯ, ಬೊಮ್ಮಸಂದ್ರ, ಜಿಗಣಿ ಮುಂತಾದ ಕೈಗಾರಿಕಾ ಪ್ರದೇಶದಲ್ಲಿ ಹಲವು ಫ್ಯಾಕ್ಟರಿಗಳನ್ನು ಮುಂದಿನ ಒಂದು ವಾರದ ವರೆಗೆ ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ. ಅದು ಹೇಗೆ ಅಂದರೆ, ವೇತನ ರಹಿತ ರಜೆ. ಒಂದು ದಿನದ ಸಂಬಳ ಕಟ್ಟಾದರೆನೇ, ತಿಂಗಳ ಬಜೆಟ್ ಏರುಪೇರಾಗುವಂತಹ ವರ್ಗದವರು. ಹೀಗಿರುವಾಗ, ಸರಕಾರ ಈ ವಿಚಾರದಲ್ಲಿ ಫ್ಯಾಕ್ಟರಿಗಳಿಗೆ ಮೂಗುದಾರ ಹಾಕುವುದೇ?

ರಾಜಕೀಯ ಸಂಧ್ಯಾಕಾಲದಲ್ಲಿರುವ, ಮುತ್ಸದ್ದಿ ರಾಜಕಾರಣಿ, ಯಡಿಯೂರಪ್ಪ
ಪರಿಸ್ಥಿತಿ ಹೀಗೇ ಮುಂದುವರಿದರೆ, ಇಡೀ ಜಗತ್ತು ಕಂಡು ಕೇಳರಿಯದ ಆರ್ಥಿಕ ದುಸ್ಥಿತಿಗೆ ತಲುಪಲಿದೆ. ರಾಜಕೀಯ ಸಂಧ್ಯಾಕಾಲದಲ್ಲಿರುವ, ಮುತ್ಸದ್ದಿ ರಾಜಕಾರಣಿ, ಯಡಿಯೂರಪ್ಪನವರು ಡೈನಾಮಿಕ್ ನಿರ್ಧಾರ ತೆಗೆದುಕೊಳ್ಳುವ ಸಮಯವಿದು. ರಾಜ್ಯದ ಪಾಲಿನ ತೆರಿಗೆ ಹಣವನ್ನು ಕೇಂದ್ರದ ಟೇಬಲ್ ಕುಟ್ಟಿ ಕೇಳುವ ಸಮಯವಿದು.

ಓವರ್ ಟು ಮೋದಿ ಎಂಡ್ ಬಿಎಸ್ವೈ
ಪ್ರಧಾನಿ ಕೋರಿಕೆಗೆ ಓಗೊಟ್ಟು, ಸಾರ್ವಜನಿಕರು ಜನತಾ ಕರ್ಫ್ಯೂ ನಡೆಸಿದರು, ಚಪ್ಪಾಳೆಯನ್ನೂ ಹೊಡೆದರು. ಇನ್ನಿರುವುದೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕೊರೊನಾದಿಂದ ತೊಂದರೆ ಅನುಭವಿಸುತ್ತಿರುವವರಿಗೆ ಸಮಾರೋಪಾದಿಯಲ್ಲಿ ಮೋದಿ ಸರಕಾರ ಸ್ಪಂದಿಸಬೇಕಾಗಿರುವುದು. ಆತ್ಮಸಾಕ್ಷಿಯಾಗಿ ಜನರಿಂದ ಚಪ್ಪಾಳೆಗಿಟ್ಟಿಸಿಕೊಳ್ಳುವ ಕೆಲಸ ಇವರಿಂದ ಆಗಬೇಕಿದೆ. ಓವರ್ ಟು ಮೋದಿ ಎಂಡ್ ಬಿಎಸ್ವೈ. ಯುವರ್ ಟೈಂ ಸ್ಟಾರ್ಟ್ ನೌ...












Click it and Unblock the Notifications