ಮಧ್ಯಪ್ರದೇಶ ಚುನಾವಣೆ 2023; ಫಲಿತಾಂಶ ಅತಂತ್ರ, ಯಾರಿಗೂ ಇಲ್ಲ ಬಹುಮತ!
ಭೋಪಾಲ್, ನವೆಂಬರ್ 30: ಮಧ್ಯಪ್ರದೇಶ ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ದಾಖಲೆಯ 76.22ರಷ್ಟು ಮತದಾನವಾಗಿತ್ತು. ಡಿಸೆಂಬರ್ 3ರ ಭಾನುವಾರ ಮತ ಎಣಿಕೆ ನಡೆಯಲಿದೆ.
ಗುರುವಾರ 5 ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ವಿವಿಧ ರಾಷ್ಟ್ರೀಯ ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಮಧ್ಯಪ್ರದೇಶ ರಾಜ್ಯದ ಚುನಾವಣೆ ಕುರಿತು Jan Ki Baat ನಡೆಸಿದ ಸಮೀಕ್ಷೆ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಅಧಿಕಾರ ಸಿಗುವುದಿಲ್ಲ ಎಂದು ಅಂದಾಜಿಸಿದೆ.

2018ರ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಎಸ್ಪಿ, ಬಿಎಸ್‌ಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿತ್ತು. ಆದರೆ 2020ರಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡು ಮುಖ್ಯಮಂತ್ರಿ ಕಮಲ್ ನಾಥ್ ರಾಜೀನಾಮೆ ನೀಡಿದ್ದರು.
ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಶಿವರಾಜ್ ಸಿಂಗ್ ಚೌವ್ಹಾಣ್ ಮುಖ್ಯಮಂತ್ರಿಯಾಗಿದ್ದರು. 2024ರ ಲೋಕಸಭೆ ಚುನಾವಣೆಗೂ ಮೊದಲು 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಮಧ್ಯಪ್ರದೇಶವೂ ಒಂದು. ಆದ್ದರಿಂದ ಈ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶ ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 230. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116.
Jan Ki Baat ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 112, ಬಿಜೆಪಿ 113, ಇತರರು 5 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಸಮೀಕ್ಷೆಯ ವರದಿ ಪ್ರಕಾರ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ. ಮೈತ್ರಿ ಸರ್ಕಾರ ರಚನೆಯಾಗುವುದು ಖಚಿತವಾಗಿದೆ.












Click it and Unblock the Notifications