ಪುಲ್ವಾಮಾ ದಾಳಿ ಬಳಿಕ ಮತ್ತೊಂದು ಭೀಕರ ಘಟನೆ
ಶ್ರೀನಗರ: ಭಾರತೀಯರು ನೋವಿನಲ್ಲಿ ಮುಳುಗಿದ್ದಾರೆ, ಕಣಿವೆ ರಾಜ್ಯದಲ್ಲಿ ನಡೆದ ಘಟನೆ ಇಡೀ ಭಾರತವನ್ನೇ ಕಂಗೆಡಿಸಿದೆ. ಒಂದು ಕಡೆ ದೇಶದ ಭದ್ರತೆಗೆ ದಿನೇದಿನೆ ಉಗ್ರರು ಸವಾಲು ಎಸೆಯುತ್ತಿದ್ದರೆ, ಕಣಿವೆ ರಾಜ್ಯದಲ್ಲಿ ಸೇನೆ ಮೇಲೆ ನಡೆಯುತ್ತಿರುವ ದಾಳಿ ಹೆಚ್ಚಾಗುತ್ತಿದೆ. ಇದು ವಿಪಕ್ಷಗಳ ವಾಗ್ದಾಳಿಗೆ ವೇದಿಕೆ ಒದಗಿಸಿದ್ದರೆ, ಮತ್ತೊಂದು ಕಡೆ ಭೀತಿ ಹುಟ್ಟುಹಾಕಿದೆ.
ಅದು ಫೆಬ್ರವರಿ 14, 2019, ಅಲ್ಲಿಯವರೆಗೂ ಫೆಬ್ರವರಿ 14 ಪ್ರೇಮಿಗಳ ದಿನ ಎಂದು ಆಚರಿಸುತ್ತಿದ್ದ ಭಾರತೀಯರಿಗೆ ನೋವಿನ ಘಟನೆಯೊಂದು ಎದುರಾಗಿತ್ತು. ಭಾರತೀಯರು ಎಂದೂ ಮರೆಯಲು ಆಗದ ಘಟನೆಯೊಂದು ದೇಶದ ಗಡಿಯಲ್ಲಿ ನಡೆದು ಹೋಗಿತ್ತು. ಪುಲ್ವಾಮಾ ಪ್ರದೇಶದಲ್ಲಿ ತೆರಳುತ್ತಿದ್ದ ಭಾರತೀಯ ಸೈನಿಕರಿದ್ದ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆಸಿದ್ದರು ಪಾಪಿ ಉಗ್ರರು. ಈ ಘಟನೆಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾದರು. ಈ ಘಟನೆ ನಡೆದು 4 ವರ್ಷ ಕಳೆಯುವಷ್ಟರಲ್ಲಿ ಮತ್ತೆ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆದಿದೆ.

ಭದ್ರತಾ ವೈಫಲ್ಯದ ಆರೋಪ?
ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ, ಉಗ್ರರ ದಾಳಿಗಳು ಆಗಾಗ ಸಂಭವಿಸುತ್ತವೆ. ಆದರೆ ಸೇನಾ ವಾಹನದ ಮೇಲೆ ದಾಳಿ ನಡೆಸುವಷ್ಟು ಉಗ್ರರು ರಣಹೇಡಿ ಕೃತ್ಯಕ್ಕೆ ಮುಂದಾಗಿರುವುದು ಗಂಭೀರ ವಿಚಾರ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ 2019ರ ಪುಲ್ವಾಮಾ ದಾಳಿ ಹಿನ್ನೆಲೆ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಹರಿಹಾಯುತ್ತಿವೆ. ಪುಲ್ವಾಮಾ ದಾಳಿ ಭದ್ರತಾ ವೈಫಲ್ಯದ ಪರಿಣಾಮವಾಗಿ ನಡೆದಿತ್ತು ಎಂದು ವಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ.
ಉಗ್ರರಿಂದಲೇ ಭೀಕರ ದಾಳಿ?
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯ ಪರಿಣಾಮ ಸೇನಾ ವಾಹನದಲ್ಲಿ ಸ್ಪೋಟ ಸಂಭವಿಸಿದೆ. ಈ ಘಟನೆ ಬಳಿಕ ಬೆಂಕಿ ಹೊತ್ತುಕೊಂಡು ಐವರು ಯೋಧರು ಹುತಾತ್ಮರಾಗಿದ್ದಾರೆ. ಇನ್ನು ಈ ಭೀಕರ ಘಟನೆ ಕಣಿವೆ ರಾಜ್ಯದಲ್ಲಿ ಮತ್ತೆ ಸಂಚಲನ ಸೃಷ್ಟಿಮಾಡಿದೆ. ರಜೌರಿ ವಲಯದ ಭಿಂಬರ್ ಗಲ್ಲಿಯಿಂದ ಪೂಂಚ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಮತ್ತೊಂದು ಕಡೆ ಉಗ್ರರು ಗ್ರೆನೆಡ್ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಮೊದಲಿನಿಂದಲೂ ಸೂಕ್ಷ್ಮ ಪ್ರದೇಶವಾಗಿರುವ ಪೂಂಚ್ ಜಿಲ್ಲೆಯಲ್ಲಿ ಭಾರತ ಹಾಗೂ ಪಾಕ್ ಗಡಿ ಕೂಡುತ್ತದೆ. ರಜೌರಿ ಸೆಕ್ಟರ್ ಸದಾ ಆತಂಕದಲ್ಲೇ ಮುಳುಗಿರುತ್ತದೆ. ಇಂತಹದ್ದೇ ಜಾಗದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆದಿದೆ. ಉಗ್ರರು ನಡೆಸಿದ ದಾಳಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಬಿದ್ದು ಐವರು ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಉಗ್ರರ ಹೆಡೆಮುರಿ ಕಟ್ಟಲು ಭಾರತೀಯ ಸೇನೆ ತಂತ್ರಜ್ಞಾನದ ಮೊರೆ ಹೋಗಿದೆ. ಡ್ರೋನ್ ಬಳಸಿ ಉಗ್ರರು ಅಡಗಿರುವ ಪ್ರದೇಶದ ಹುಡುಕಾಟ ಮುಂದುವರಿದಿದೆ.

ಒಟ್ಟಾರೆ ಹೇಳುವುದಾದರೆ ರಜೌರಿ ಸೆಕ್ಟರ್‌ನಲ್ಲಿ ಇಂದು ಸೇನಾ ವಾಹನದ ಮೇಲೆ ನಡೆದಿರುವ ದಾಳಿ ಭಾರತೀಯರಿಗೆ ಆಘಾತ ನೀಡಿದೆ. ಈ ಸುದ್ದಿ ಕೇಳುತ್ತಿದ್ದಂತೆ ಯೋಧರ ಕುಟುಂಬಕ್ಕೆ ರಾಜಕೀಯ ಪಕ್ಷಗಳ ನಾಯಕರು ಸಾಂತ್ವನ ಹೇಳಿದ್ದಾರೆ. ಹಾಗೇ ಕೃತ್ಯ ಎಸಗಿದ ಉಗ್ರರ ರುಂಡ ಚೆಂಡಾಡುವಂತೆ ಆಕ್ರೋಶ ಕೂಡ ಮೊಳಗುತ್ತಿದೆ. ಜೊತೆಗೆ ಈ ಘಟನೆ ಕೂಡ ಭದ್ರತಾ ವೈಫಲ್ಯದ ಕಾರಣಕ್ಕೆ ನಡೆಯಿತಾ? ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications