Jammu And Kashmir: ಸರ್ಕಾರ ರಚನೆಯಲ್ಲಿ 5 ಶಾಸಕರ ಮಹತ್ವದ ಪಾತ್ರ!
ನವದೆಹಲಿ, ಅಕ್ಟೋಬರ್ 05: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. 2014ರ ಬಳಿಕ ಮೊದಲ ಬಾರಿಗೆ ರಾಜ್ಯದಲ್ಲಿ ಚುನಾವಣೆ ನಡೆದಿದ್ದು, ಶೇ 63.88ರಷ್ಟು ಮತದಾನವಾಗಿದೆ. ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 90. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಅಕ್ಟೋಬರ್ 8ರ ಮಂಗಳವಾರ ಮತ ಎಣಿಕೆ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆದಿದೆ. ಮಂಗಳವಾರ ಮತ ಎಣಿಕೆ ನಡೆದು, ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ಆದರೆ ಫಲಿತಾಂಶಕ್ಕೂ ಮೊದಲು ರಾಜ್ಯಕ್ಕೆ ಐವರು ನಾಮ ನಿರ್ದೇಶಿತ ಶಾಸಕರು ಆಯ್ಕೆಯಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಐವರು ನಾಮ ನಿರ್ದೇಶಿತ ಶಾಸಕರನ್ನು ಆಯ್ಕೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಲೆಫ್ಟಿನೆಂಟ್ ಗವರ್ನರ್ ತಮ್ಮ ತೀರ್ಮಾನವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಐವರು ನಾಮ ನಿರ್ದೇಶಿತ ಶಾಸಕರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ವಿಧಾನಸಭೆಯಲ್ಲಿ ಈ ಶಾಸಕರು ಯಾವ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಆಕ್ಷೇಪ: ಜಮ್ಮು ಮತ್ತು ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರವೀಂದ್ರ ಶರ್ಮಾ ಮಾತನಾಡಿ, "ಲೆಫ್ಟಿನೆಂಟ್ ಗವರ್ನರ್ ಮೂಲಕ ಐವರು ಶಾಸಕರನ್ನು ನಾಮ ನಿರ್ದೇಶನ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಸರ್ಕಾರ ರಚನೆಗೂ ಮೊದಲೇ ನಾಮ ನಿರ್ದೇಶನ ಅಗತ್ಯವಿಲ್ಲ. ಇಂತಹ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಅಲ್ಲದೇ ಜನರ ತೀರ್ಪನ್ನು ಅಗೌರವಿಸುವ ನಡೆ" ಎಂದು ಹೇಳಿದ್ದಾರೆ.
ಅಲ್ಲದೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದ ಬಳಿಕವೇ ಐವರು ನಾಮ ನಿರ್ದೇಶಿತ ಶಾಸಕರು ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದು ಕರೆ ನೀಡಿದೆ. ಜನರ ತೀರ್ಪಿಗೆ ತಲೆಬಾಗಿ, ಮೊದಲು ಜನರು ನೀಡಿದ ತೀರ್ಪಿನ ಅನ್ವಯ ಸರ್ಕಾರ ರಚನೆಯಾಗಲಿ ಬಳಿಕ ನೀವು, ಶಾಸಕರಾಗಿ ವಿಧಾನಸಭೆಗೆ ಬನ್ನಿ ಎಂದು ಕಾಂಗ್ರೆಸ್ ಸಲಹೆ ನೀಡಿದೆ.
ಐವರು ಶಾಸಕರ ನಾಮ ನಿರ್ದೇಶದ ಕುರಿತು ಕೇಂದ್ರ ಗೃಹ ಸಚಿವಾಲಯ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅನುಮೋದನೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪುನರ್‌ಸಂಘಟನೆ ಕಾಯ್ದೆ, 2019ರ ತಿದ್ದುಪಡಿ ಭಾಗವಾಗಿ ಈ ನಾಮ ನಿರ್ದೇಶನಗಳನ್ನು ಮಾಡಲಾಗಿದೆ.
ಕಾನೂನಿನ ಅನ್ವಯ ಐವರನ್ನು ಲೆಫ್ಟಿನೆಂಟ್ ಗವರ್ನರ್ ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಕಾಶ್ಮೀರಿ ಪಂಡಿತರು, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಭಾಗದ ವ್ಯಕ್ತಿಗಳು ಇರಬೇಕೆಂಬ ನಿಯಮವಿದೆ. ಆದರೆ ಕಾಂಗ್ರೆಸ್ ಸರ್ಕಾರ ರಚನೆ ಬಳಿಕ ಲೆಫ್ಟಿನೆಂಟ್ ಗವರ್ನರ್ ಈ ನಾಮ ನಿರ್ದೇಶನ ಮಾಡಬೇಕಿತ್ತು ಎಂಬು ಆಕ್ಷೇಪವನ್ನು ಎತ್ತಿದೆ.












Click it and Unblock the Notifications