Jammu & Kashmir Election: 2ನೇ ಹಂತದ ಚುನಾವಣೆ; 20 ಕ್ಷೇತ್ರಗಳಲ್ಲಿ 2014ಕ್ಕಿಂತ ಕಡಿಮೆ ಮತದಾನ
ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ಬಳಿಕ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಬುಧವಾರ 26 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. ಮೊದಲ ಎರಡು ಹಂತಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಅಕ್ಟೋಬರ್ 1ರಂದು 3ನೇ ಹಂತದ ಮತದಾನ ನಡೆಯಲಿದೆ. ಬುಧವಾರ 26 ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ನಡೆದಿದ್ದು 2014ರ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ 20 ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ.
ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶಗಳ ಪ್ರಕಾರ 2ನೇ ಹಂತದಲ್ಲಿ 6 ಜಿಲ್ಲೆಗಳ 26 ಕ್ಷೇತ್ರಗಳಲ್ಲಿ 57% ಮತದಾನವಾಗಿದೆ. ಆದರೆ 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ 60% ಕ್ಕಿಂತ ಹೆಚ್ಚು ಮತದಾನವಾಗಿತ್ತು ಎಂದು ಪಿಟಿಐ ವರದಿಯಲ್ಲಿ ತಿಳಿಸಿದೆ. ಎರಡನೇ ಹಂತದ ಚುನಾವಣೆಯಲ್ಲಿ ಕಾಶ್ಮೀರದ 15 ಸ್ಥಾನಗಳು ಮತ್ತು ಜಮ್ಮು ವಿಭಾಗದಲ್ಲಿ 11 ಸ್ಥಾನಗಳಲ್ಲಿ ಮತದಾನ ನಡೆದಿತ್ತು.

ಜಮ್ಮು ಮತ್ತು ಕಾಶ್ಮೀರ ಮುಖ್ಯ ಚುನಾವಣಾಧಿಕಾರಿ ಪಿ.ಕೆ. ಪೋಲ್ ಅಂಕಿ ಅಂಶಗಳ ಮಾಹಿತಿ ನೀಡಿದ್ದು, ಆರು ಜಿಲ್ಲೆಗಳಲ್ಲಿ 56.05% ರಷ್ಟು ಮತದಾನವಾಗಿದೆ ಎಂದು ಹೇಳಿದ್ದಾರೆ. ಗುರುವಾರ ಬೆಳಿಗ್ಗೆ ಅಂಕಿ ಅಂಶಗಳನ್ನು ಪರಿಷ್ಕರಣೆ ಮಾಡಲಾಗಿದ್ದು, ಒಟ್ಟಾರೆ 57.03 ಪ್ರತಿಶತ ಮತದಾನ ನಡೆದಿರುವುದಾಗಿ ವರದಿಯಾಗಿದೆ.
ಕ್ಷೇತ್ರ ಮರುಹಂಚಿಕೆ
ಶ್ರೀನಗರ, ಗಂದರ್‌ಬಲ್, ಬುದ್ಗಾಮ್, ರಿಯಾಸಿ, ರಜೌರಿ ಮತ್ತು ಪೂಂಚ್ ಒಟ್ಟು ಆರು ಜಿಲ್ಲೆಗಳಲ್ಲಿ 2014ರಲ್ಲಿ 25 ವಿಧನಾಸಭಾ ಕ್ಷೇತ್ರಗಳಿದ್ದವು ಆದರೆ 2022ರಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿದ ಬಳಿಕ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
2014ರ ಅಂಕಿಅಂಶಗಳಿಗೆ ಹೋಲಿಕೆ ಮಾಡಿದರೆ ಶ್ರೀನಗರ ಜಿಲ್ಲೆ 5 ಕ್ಷೇತ್ರಗಳಲ್ಲಿ ಮಾತ್ರ ಮತದಾನ ಪ್ರಮಾಣದಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಿನ ಮತದಾನವಾಗಿದೆ. ಉಳಿದಂತೆ ಐದು ಜಿಲ್ಲೆಗಳಲ್ಲಿ 2014 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ.
ಬುದ್ಗಾಮ್ ಕ್ಷೇತ್ರದಲ್ಲಿ 2014ರಲ್ಲಿ 66.32% ಮತದಾನವಾಗಿದ್ದರೆ ಬುಧವಾರ 51.09% ರಷ್ಟು ಮಾತ್ರ ಮತದಾನವಾಗಿದೆ. ಚ್ರಾರ್-ಎ-ಶರೀಫ್ ಕ್ಷೇತ್ರದಲ್ಲಿ 2014ರ ವಿಧಾನಸಭೆ ಚುನಾವಣೆಯಲ್ಲಿ ಶೇ.82.44 ರಷ್ಟು ಮತದಾನವಾಗಿದ್ದರೆ ಈ ಬಾರಿ 70.26% ರಷ್ಟು ಮಾತ್ರ ಮತದಾನ ನಡೆದಿದೆ. ಬುಧಾಲ್ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 82.50 ಪ್ರತಿಶತ ಮತದಾನ ನಡೆದಿದ್ದು, ಈ ಬಾರಿ 70.14% ಕ್ಕೆ ಕುಸಿದಿದೆ. ಶ್ರೀಮಾತಾ ವೈಷ್ಣೋದೇವಿ ಕ್ಷೇತ್ರದಲ್ಲಿ ಈ ಬಾರಿ 80.74 ರಷ್ಟು ಮತದಾನ ನಡೆದಿದೆ. 2014ರಲ್ಲಿ ಗೂಲ್ ಅರ್ನಾಸ್ ಎಂದು ಕರೆಯುತ್ತಿದ್ದ ಈ ಕ್ಷೇತ್ರದಲ್ಲಿ 82.68ರಷ್ಟು ಮತದಾನವಾಗಿತ್ತು.
2019ರಲ್ಲಿ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಮೂರನೇ ಹಂತದ ಚುನಾವಣೆ ಅಕ್ಟೋಬರ್ 1ರಂದು ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications