ಜಮ್ಮು ಮತ್ತು ಕಾಶ್ಮೀರ ಚುನಾವಣೆ: ಅಸಮಾಧಾನ ಬಗೆಹರಿಸಲು ಬಿಜೆಪಿ ಹೊಸ ತಂತ್ರ!
ಶ್ರೀನಗರ, ಸೆಪ್ಟೆಂಬರ್ 10: ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಬಿಜೆಪಿ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಹೊಸ ಸೂತ್ರವನ್ನು ಜಾರಿಗೊಳಿಸಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಲವು ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪಿದೆ. ಇದರಿಂದ ಉಂಟಾಗುವ ಅಸಮಾಧಾನವನ್ನು ಪರಿಹರಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹೊಸ ತಂತ್ರವನ್ನು ಹಣೆದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜಮ್ಮು ಮತ್ತು ಕಾಶ್ಮೀರದ ಪಕ್ಷ ಸಂಘಟನೆಯಲ್ಲಿ ಹಲವು ಬದಲಾವಣೆ ಮಾಡಿದ್ದಾರೆ. ಮಾಜಿ ಸಚಿವ ಸತ್ ಶರ್ಮರನ್ನು ಜಮ್ಮು ಮತ್ತು ಕಾಶ್ಮೀರ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಟಿಕೆಟ್ ಕೈತಪ್ಪಿದ ಬಳಿಕ ಉಂಟಾಗಿರುವ ಅಸಮಾಧಾನ ಬಗೆಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೇ ಮಾಜಿ ಉಪಮುಖ್ಯಮಂತ್ರಿಗಳಾದ ನಿರ್ಮಲ್ ಸಿಂಗ್ ಮತ್ತು ಕವಿಂದರ್ ಗುಪ್ತ ಬಿಜೆಪಿ ಜಮ್ಮು ಮತ್ತು ಕಾಶ್ಮೀರ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಈ ಮೂರು ಹಿರಿಯ ನಾಯಕರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು.
ಹೊಸ ಅಭ್ಯರ್ಥಿಗಳಿಗೆ ಟಿಕೆಟ್: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಟಿಕೆಟ್ ಹಂಚಿಕೆ ಬಳಿಕ ಉಂಟಾಗಿರುವ ಅಸಮಾಧಾನ ಚುನಾವಣೆ ಮೇಲೆ ಪ್ರಭಾವ ಬೀರಬಾರದು ಎಂದು ಈ ಕ್ರಮವನ್ನು ಜೆ. ಪಿ. ನಡ್ಡಾ ಕೈಗೊಂಡಿದ್ದಾರೆ.
2014ರ ಚುನಾವಣೆಯಲ್ಲಿ ಸತ್ ಶರ್ಮ ಮತ್ತು ನಿರ್ಮಲ್ ಸಿಂಗ್ ಜಮ್ಮು ಪಶ್ಚಿಮ ಮತ್ತು ಬಿಲ್ಲಾವರ್ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಜಮ್ಮು ಪಶ್ಚಿಮ ಕ್ಷೇತ್ರದಲ್ಲಿ ಅರವಿಂದ್ ಗುಪ್ತಾ ಮತ್ತು ಬಿಲ್ಲಾವರ್‌ನಲ್ಲಿ ಸತೀಶ್ ಶರ್ಮಗೆ ಟಿಕೆಟ್ ನೀಡಿದೆ.
ಇಷ್ಟು ಮಾತ್ರವಲ್ಲದೇ ಚೌಧರಿ ಸುಖನಂದನ್‌ರನ್ನು ಜಮ್ಮು ಮತ್ತು ಕಾಶ್ಮೀರ ಚುನಾವಣಾ ಪ್ರಚಾರ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಾಜಿ ಸಚಿವ ಸುಖನಂದನ್ ಮಾರ್ಹ್ ಕ್ಷೇತ್ರದ ಶಾಸಕರಾಗಿದ್ದರು. ಆದರೆ ಕ್ಷೇತ್ರ ಮರುವಿಭಜನೆಯ ನಂತರ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಟಿಕೆಟ್ ಕೈತಪ್ಪಿದೆ. ಮಾರ್ಹ್ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಸುರಿಂದರ್ ಭಗತ್ ಬಿಜೆಪಿ ಅಭ್ಯರ್ಥಿ.
ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಚೌಧರಿ ಸುಖನಂದನ್ ಇದಕ್ಕೆ ಅಸಮಾಧಾನಗೊಂಡಿದ್ದಾರೆ. ಅವರು ಕ್ಷೇತ್ರದಿಂದ ತಾವು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಬಯಸಿದ್ದರು. ಮತ್ತೊಂದು ಕಡೆ ಜಮ್ಮು ಮತ್ತು ಕಾಶ್ಮೀರ ಪಕ್ಷದ ಪ್ರಧಾನ ಕಾರ್ಯದರ್ಶಿ ಪವನ್ ಖಜೂರಿಯಾ ಉದಂಪುರ ಪೂರ್ವದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಅವರು ಈ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಆದರೆ ಪಕ್ಷ ಆರ್. ಎಸ್. ಪಠಾನಿಯಾ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ 90 ಸದಸ್ಯ ಬಲದ ವಿಧಾನಸಭೆಗೆ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1ರ ತನಕ ಒಟ್ಟು ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ.












Click it and Unblock the Notifications