ಭಾರತೀಯ ಸೇನಾ ವಾಹನ ಭೀಕರ ಅಪಘಾತ, 10 ಸೈನಿಕರು ಹುತಾತ್ಮ & 11 ಸೈನಿಕರ ಸ್ಥಿತಿ ಗಂಭೀರ
ಜಮ್ಮು: ಭಾರತದ ಕಿರೀಟ ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗೆ ಭಾರತೀಯ ವೀರ ಯೋಧರು ಜೀವವನ್ನೇ ಪಣವಾಗಿಟ್ಟು ಪ್ರತಿಕ್ಷಣ ಹೋರಾಡುತ್ತಿದ್ದಾರೆ. ಆದರೆ ಒಂದು ಕಡೆ ಉಗ್ರರ ದಾಳಿ ವೇಳೆ ಹೋರಾಡಿ, ಭಾರತೀಯ ಯೋಧರು ಹುತಾತ್ಮರಾಗುತ್ತಿರುವ ಸಮಯದಲ್ಲೇ ಭೀಕರ ಅಪಘಾತದಲ್ಲಿ 10 ಸೈನಿಕರು ಜೀವ ಕಳೆದುಕೊಂಡ ಸುದ್ದಿಯು ಆಘಾತ ನೀಡಿದೆ. ಗುರುವಾರ ಜಮ್ಮು & ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನ ರಸ್ತೆಯಿಂದ ಜಾರಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಈವರೆಗೂ 10 ಸೈನಿಕರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 11 ಸೈನಿಕರು ಗಾಯಗೊಂಡಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರ ಮಧ್ಯಾಹ್ನ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸುಮಾರು 9000 ಅಡಿ ಎತ್ತರದಲ್ಲಿ ಇರುವ ಭದೇರ್ವಾ-ಚಂಬಾ ಅಂತಾರಾಜ್ಯ ರಸ್ತೆಯಲ್ಲಿ ಸಂಚಾರ ಮಾಡುವಾಗ ಸೇನಾ ವಾಹನ ಆಳದ ಕಂದಕಕ್ಕೆ ಬಿದ್ದುಬಿಟ್ಟಿದೆ. ಗುಂಡು ನಿರೋಧಕ ಸೇನಾ ವಾಹನವು ಚಾಲಕನ ನಿಯಂತ್ರಣ ತಪ್ಪಿ ಸುಮಾರು 200 ಅಡಿ ಆಳದ ಕಂದಕಕ್ಕೆ ಉರುಳಿದೆ. ಸುದ್ದಿ ತಿಳಿದ ತಕ್ಷಣವೇ ಸೇನೆ ಹಾಗೂ ಪೊಲೀಸರು ಜಂಟಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ನಾಲ್ವರು ಸೈನಿಕರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ, ಹಾಗೇ ಇನ್ನುಳಿದ ಸೈನಿಕರಲ್ಲಿ ಕೆಲವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಜೀವ ಕಳೆದುಕೊಂಡಿದ್ದಾರೆ. ಈ ನೋವು ಕಾಡುವಾಗಲೇ ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆ ಫಲಕಾರಿಯಾಗದ ಕಾರಣದಿಂದ ಸೈನಿಕರ ಜೀವ ಹೋಗಿದೆ ಎನ್ನಲಾಗಿದೆ. ಈಗ ಗಾಯಗೊಂಡಿರುವ 11 ಸೈನಿಕರಿಗೆ ಚಿಕಿತ್ಸೆ ಮುಂದುವರಿದಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಉಧಮ್‌ಪುರ ಕಮಾಂಡ್ ಆಸ್ಪತ್ರೆಗೆ ಏರ್‌ಲಿಫ್ಟ್
ಭೀಕರ ಅಪಘಾತದಲ್ಲಿ ಗಾಯಗೊಂಡ ಸೈನಿಕರ ಸ್ಥಿತಿ ಅವಲೋಕನ ಮಾಡಿ, ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ ಅಧಿಕಾರಿಗಳು. ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರ ಪೈಕಿ ಒಬ್ಬರ ಪರಿಸ್ಥಿತಿ ಈಗಲೂ ಗಂಭೀರ ಎನ್ನಲಾಗಿದ್ದು, ಅವರನ್ನು ಭದೇರ್ವಾ ಉಪ-ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಹಾಗೇ ಮತ್ತೊಂದು ಕಡೆ 10 ಸೈನಿಕರನ್ನು ವಿಶೇಷ ಚಿಕಿತ್ಸೆಗಾಗಿ ಉಧಮ್‌ಪುರ ಕಮಾಂಡ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ಈ ಬಗ್ಗೆ ಭದೇರ್ವಾ ಹೆಚ್ಚುವರಿ ಉಪ ಆಯುಕ್ತ ಸುಮಿತ್ ಕುಮಾರ್ ಭುತ್ಯಾಲ್ ಅವರು ಮಾಹಿತಿ ನೀಡಿದ್ದು, ಸೇನಾ ವಾಹನ ಅಪಘಾತದಲ್ಲಿ ನಾವು 10 ಸೈನಿಕರನ್ನ ಕಳೆದುಕೊಂಡಿದ್ದು ಹಾಗೂ 11 ಸೈನಿಕರು ಈ ದುರಂತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಸಿಎಂ & ಗವರ್ನರ್ ಸಂತಾಪ
ಸೇನಾ ವಾಹನ ಅಪಘಾತ ವಿಚಾರ ತಿಳಿಯುತ್ತಿದ್ದಂತೆ ಇಡೀ ದೇಶ ಯೋಧರ ಬಗ್ಗೆ ಕಂಬನಿ ಮಿಡಿದಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ & ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಉಗ್ರರ ದಾಳಿಗಳ ನಡುವೆ ಅಪಘಾತ ಕೂಡ ಭಾರತೀಯ ವೀರ ಯೋಧರ ಜೀವ ಬಲಿಪಡೆದಿರುವುದು ಬೇಸರಕ್ಕೆ ಕಾರಣವಾಗಿದೆ. ಘಟನೆಯ ಹಿನ್ನೆಲೆ ಗಾಯಗೊಂಡಿರುವ ಸೈನಿಕರಿಗೆ ಅತ್ಯುತ್ತಮ ಚಿಕಿತ್ಸೆ ಕೊಡಲು ಆದೇಶ ನೀಡಲಾಗಿದೆ. ಅಲ್ಲದೆ ಅಗತ್ಯ ಇರುವ ಗಾಯಾಳುಗಳನ್ನು ಬೇರೆ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.












Click it and Unblock the Notifications