Jammu and Kashmir: ಜಮ್ಮು ಮತ್ತು ಕಾಶ್ಮೀರ ಚುನಾವಣಾ ರಾಜಕೀಯಕ್ಕೆ ಹೊಸ ತಿರುವು
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಚುನಾವಣಾ ಭಾಷಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಚುನಾವಣಾ ರಾಜಕೀಯಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಅವಾಮಿ ಇತ್ತೆಹಾದ್ ಪಕ್ಷ (ಎಐಪಿ) ಮತ್ತು ನಿಷೇಧಿತ ಜಮಾತ್-ಎ-ಇಸ್ಲಾಮಿ (ಜೆಐ) ಮಾಜಿ ಸದಸ್ಯರು ಮೈತ್ರಿ ಮಾಡಿಕೊಂಡಿದ್ದು, ಪರಸ್ಪರ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧಾರ ಮಾಡಿದ್ದಾರೆ.
ಇತ್ತೆಹಾದ್ ಪಕ್ಷ ನೀಡಿದ ಆಹ್ವಾನವನ್ನು ಜಮಾತ್-ಎ-ಇಸ್ಲಾಮಿ ಒಪ್ಪಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಏಕಾಂಗಿಯಾಗಿ ಸ್ಪರ್ಧೆ ಮಾಡಿದರೆ, ಮತಗಳು ವಿಭಜನೆಯಾಗುತ್ತವೆ ಎಂದು ಎರಡೂ ಪಕ್ಷಗಳಿಗೂ ತಿಳಿದಿತ್ತು, ಈಗ ಒಟ್ಟಿಗೆ ಹೋರಾಟ ಮಾಡುವ ದಕ್ಷಿಣ ಮತ್ತು ಉತ್ತರ ಕಾಶ್ಮೀರದಲ್ಲಿ ಮೂಲಕ ಮತಗಳನ್ನು ಕ್ರೋಢೀಕರಿಸಲಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ ಈ ಸಂಬಂಧ ಸಭೆ ನಡೆದಿದ್ದು, ಅವಾಮಿ ಇತ್ತೆಹಾದ್ ಪಕ್ಷದ ನಿಯೋಗಕ್ಕೆ ಪಕ್ಷದ ಮುಖ್ಯಸ್ಥ ಮತ್ತು ಸಂಸದ ಎಂಜಿನಿಯರ್ ರಶೀದ್ ಮತ್ತು ವಕ್ತಾರ ಇನಾಮ್ ಉನ್ ನಬಿ ನೇತೃತ್ವ ವಹಿಸಿದ್ದು, ಜೆಐ ನಿಯೋಗಕ್ಕೆ ಗುಲಾಮ್ ಖಾದಿರ್ ವಾನಿ ನೇತೃತ್ವ ವಹಿಸಿದ್ದರು, ಜೆಐ ಪಕ್ಷದ ಪ್ರಮುಖ ಸದಸ್ಯರೂ ಚರ್ಚೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಯಿತು. ಜನರ ಹಿತಾಸಕ್ತಿಗಾಗಿ ಒಟ್ಟಾಗಿ ಕೆಲಸ ಮಾಡುವ ಅಗತ್ಯತೆ ಬಗ್ಗೆ ಎರಡೂ ಕಡೆಯವರು ಪ್ರಸ್ತಾಪ ಮಾಡಿದ್ದಾರೆ. ಸುದೀರ್ಘ ಚರ್ಚೆಯ ಬಳಿಕ ಕುಲ್ಗಾಮ್ ಮತ್ತು ಪುಲ್ವಾಮಾದಲ್ಲಿ ಜೆಐ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಎಐಪಿ ಒಪ್ಪಿಕೊಂಡಿತು. ಕಾಶ್ಮೀರದಾದ್ಯಂತ ಎಐಪಿ ಅಭ್ಯರ್ಥಿಗಳಿಗೆ ಜೆಐ ಬೆಂಬಲ ನೀಡಲಿದೆ.
ಎಐಪಿ ಮತ್ತು ಜೆಇಐ ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಮೈತ್ರಿಕೂಟವು "ಸೌಹಾರ್ದ ಸ್ಪರ್ಧೆ"ಗೆ ಸಮ್ಮತಿಸಿದೆ. ಜಮಾತ್ ಮತ್ತು ಎಐಪಿ ಒಗ್ಗೂಡಿಸುವುದರೊಂದಿಗೆ, ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ದಕ್ಷಿಣ ಕಾಶ್ಮೀರದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಎರಡೂ ಪಕ್ಷಗಳ ಗುರಿ ಒಂದೇ ಆಗಿರುವ ಕಾರಣ ಈ ಮೈತ್ರಿಯನ್ನು ಪ್ರಮುಖ ರಾಜಕೀಯ ನಡೆ ಎಂದು ಬಿಂಬಿಸಲಾಗುತ್ತಿದೆ.
ಎರಡೂ ಪಕ್ಷಗಳು ತಮ್ಮ ಒಪ್ಪಂದದಲ್ಲಿ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಮತ್ತು ಪ್ರದೇಶದಲ್ಲಿ ಶಾಶ್ವತ ಮತ್ತು ಗೌರವಾನ್ವಿತ ಶಾಂತಿಯನ್ನು ಉತ್ತೇಜಿಸಲು ಆದ್ಯತೆ ನೀಡಿವೆ. ಎರಡೂ ಪಕ್ಷಗಳು ಮೈತ್ರಿಗೆ ಒಪ್ಪಿದ ಬಳಿಕ ಎರಡೂ ಪಕ್ಷಗಳ ನಾಯಕರು ಒಪ್ಪಂದಕ್ಕೆ ಅನುಗುಣವಾಗಿ ಪರಸ್ಪರರ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.












Click it and Unblock the Notifications