Jammu & Kashmir Election: ಅಂತಿಮ ಹಂತದಲ್ಲಿ 65.58% ಮತದಾನ; ಅಕ್ಟೋಬರ್ 8ರಂದು ಫಲಿತಾಂಶ
ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಮಂಗಳವಾರ 40 ಕ್ಷೇತ್ರಗಳಲ್ಲಿ ಮೂರನೇ ಮತ್ತು ಕೊನೆಯ ಹಂತದ ಮತದಾನ ನಡೆದಿದೆ. ಮೂರು ಹಂತಗಳಲ್ಲಿ ಶಾಮತಿಯುತವಾಗಿ ಮತದಾನ ನಡೆದಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ. ಮಂಗಳವಾರ ನಡೆದ ಕೊನೆಯ ಹಂತದ ಚುನಾವಣೆಯಲ್ಲಿ 65.58 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಮಂಗಳವಾರ ಒಟ್ಟು 40 ಕ್ಷೇತ್ರಗಳಲ್ಲಿ ಮತದಾನ ನಡೆಯುತು, ಅಖ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಶೇ.76.28ರಷ್ಟು ಮತದಾನ ನಡೆದಿದ್ದು ಹೆಚ್ಚು ಮತದಾನ ನಡೆದ ಕ್ಷೇತ್ರವಾಗಿದೆ, ಸೋಪೋರ್ ಕ್ಷೇತ್ರದಲ್ಲಿ ಶೇ.41.44ರಷ್ಟು ಮತದಾನವಾಗಿದ್ದು ಕಡಿಮೆ ಪ್ರಮಾಣದ ಮತದಾನ ದಾಖಲಾಗಿದೆ.

ಏಳು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ತಾರಾ ಚಂದ್ ಮತ್ತು ಮುಜಾಫರ್ ಬೇಗ್ ಮತ್ತು ಹಲವಾರು ಮಾಜಿ ಮಂತ್ರಿಗಳು ಸೇರಿದಂತೆ ಒಟ್ಟು 415 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಎಲ್ಲರ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಹಲವು ಮತಗಟ್ಟೆಗಳಲ್ಲಿ ಜನ ಭಾರಿ ಉತ್ಸಾಹದಿಂದ ಆಗಮಿಸಿ ಮತದಾನ ಮಾಡಿದರು.
ಮೂರನೇ ಹಂತದಲ್ಲಿ ಒಟ್ಟು 39.18 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದರು. ಇದರಲ್ಲಿ 65.58% ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆಗಸ್ಟ್ 2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಮೊದಲ ಬಾರಿ ಮತದಾನ
ಪಶ್ಚಿಮ ಪಾಕಿಸ್ತಾನ ನಿರಾಶ್ರಿತರು, ವಾಲ್ಮೀಕಿ ಸಮಾಜ ಮತ್ತು ಗೂರ್ಖಾ ಸಮುದಾಯದವರು 370 ನೇ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ವಿಧಾನಸಭಾ ಚುನವಾಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. 2020 ರಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಮತ್ತು 2019 ರಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್‌ನಲ್ಲಿ ಮತದಾನ ಮಾಡಿದ್ದರು.
ಮೂರನೇ ಹಂತದ ಚುನಾವಣೆಯಲ್ಲಿ 5 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 20,000 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಶಾಂತಿಯುತವಾಗಿ ಮತದಾನ ನಡೆಯುವಂತೆ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಶಸ್ತ್ರ ಪೊಲೀಸ್ ಸಿಬ್ಬಂದಿ, ಅರೆಸೇನಾಪಡೆ, ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.
ಸೆಪ್ಟೆಂಬರ್ 18 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 61.38 ರಷ್ಟು ಮತದಾನವಾಗಿದ್ದು, ಸೆಪ್ಟೆಂಬರ್ 25 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ. 57.31 ರಷ್ಟು ಮತದಾನವಾಗಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications