ಮೂರು ದಿನಗಳ ಬಳಿಕ ಬಿಬಿಸಿ ಕಚೇರಿಯಿಂದ ನಿರ್ಗಮಿಸಿದ ಐಟಿ ತಂಡ..!
ಬಿಬಿಸಿ ಇಂಡಿಯಾದ ದಾಖಲೆಗಳನ್ನು 59 ಗಂಟೆಗಳ ಕಾಲ ಶೋಧಿಸಿ ಆದಾಯ ತೆರಿಗೆ ಅಧಿಕಾರಿಗಳ ತಂಡ ಇಂದು ಕಚೇರಿಯಿಂದ ನಿರ್ಗಮಿಸಿದೆ.
ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿ ಕಚೇರಿಯಿಂದ ನಿರ್ಗಮಿಸಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಆದಾಯ ತೆರಿಗೆ ಇಲಾಖೆಯ ಸಮೀಕ್ಷೆಯು ದೆಹಲಿ-ಮುಂಬೈನ ಬಿಬಿಸಿ ಕಚೇರಿಗಳಲ್ಲಿ ಸುಮಾರು 59 ಗಂಟೆಗಳ ಕಾಲ ನಡೆಯಿತು. ಬಿಬಿಸಿ ಕಚೇರಿಯಲ್ಲಿ ಐಟಿ ಶೋಧ ಕಾರ್ಯ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿತ್ತು.
ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ 10 ಹಿರಿಯ ಸಿಬ್ಬಂದಿಗಳು 2 ದಿನಗಳಿಂದ ಮನೆಗೆ ತೆರಳಲು ಸಾಧ್ಯವಾಗದೇ ದೆಹಲಿಯ ಕಚೇರಿಯಲ್ಲೇ ಇದ್ದರು. ಐಟಿ ಅಧಿಕಾರಿಗಳ ಕಾರ್ಯಾಚರಣೆ ಇಂದೂ ಕೂಡ ಮುಂದುವರಿದಿದ್ದು, ಹಣಕಾಸಿನ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಬಿಬಿಸಿ ಸುದ್ದಿ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಲೆಕ್ಕಪತ್ರಗಳ ದಾಖಲೆ ಪ್ರತಿಗಳನ್ನು ಪಡೆದುಕೊಳ್ಳಲಾಗಿದೆ.

ದೆಹಲಿಯಲ್ಲಿರುವ ಬಿಬಿಸಿ ಸಿಬ್ಬಂದಿ ಮಾಹಿತಿ ಪ್ರಕಾರ, ಐಟಿ ಅಧಿಕಾರಿಗಳ ಕಾರ್ಯಾಚರಣೆ ನಡೆಯುತ್ತಿರುವಾಗಿನಿಂದಲೂ ಬಿಬಿಸಿ ಎಂದಿನಂತೆ ತನ್ನ ಸುದ್ದಿ ಪ್ರಸಾರ ಮಾಡುತ್ತಿದೆ ಹಾಗೂ ಸಂಸ್ಥೆಯ ಹಲವು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ. ದೆಹಲಿ ಹಾಗೂ ಮುಂಬೈ ಕಚೇರಿಗಳಲ್ಲಿ ಮಂಗಳವಾರದಂದು ಬೆಳಿಗ್ಗೆ 11:30 ಕ್ಕೆ ಐಟಿ ಸಮೀಕ್ಷೆ ಪ್ರಾರಂಭವಾಗಿತ್ತು. ಯಾವಾಗ ಸಮೀಕ್ಷೆ ಮುಕ್ತಾಯಗೊಳ್ಳುತ್ತದೆ ಎಂಬುದು ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿತ್ತು. ಅಂತಾರಾಷ್ಟ್ರೀಯ ತೆರಿಗೆ ಮತ್ತು ಬಹುರಾಷ್ಟ್ರೀಯ ನಿಗಮದ ವಿವಿಧ ವಿಭಾಗಗಳ ನಡುವೆ ಹಣವನ್ನು ವರ್ಗಾವಣೆ ಮಾಡಿರ್ಪುವ ವಿಧಾನದ ಕುರಿತು ಸಮೀಕ್ಷೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆಗಳ ಕುರಿತು ಎರಡು ಭಾಗಗಳ 'ಇಂಡಿಯಾ: ದಿ ಮೋದಿ ಕ್ವಶ್ಚನ್' ಎಂಬ ಸಾಕ್ಷ್ಯಚಿತ್ರವನ್ನು ಬಿಬಿಸಿ ಬ್ರಿಟನ್‌ನಲ್ಲಿ ಪ್ರಸಾರ ಮಾಡಿತ್ತು. ಇದಾಗಿ ಕೆಲವೇ ದಿನಗಳ ನಂತರ ಈ ಸಮೀಕ್ಷೆ ಹೆಸರಿನ ದಾಳಿ ನಡೆದಿದ್ದು, ಅಧಿಕಾರಿಗಳು ಸಿಬ್ಬಂದಿಗಳಿಂದ ಹಣಕಾಸಿನ ಡೇಟಾವನ್ನು ಸಂಗ್ರಹಿಸಿದ್ದಾರೆ. ಸುದ್ದಿ ಸಂಸ್ಥೆಯ ದಾಖಲೆಗಳ ಪ್ರತಿಗಳನ್ನೂ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications