Success Story: ಡೆಲಾಯ್ಟ್ ಕಂಪನಿಯ ಕೆಲಸ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದ ಯುವತಿಗೆ 6 ತಿಂಗಳಲ್ಲೇ ಸಿಕ್ತು ಸಿನಿಮಾಗಳಲ್ಲಿ ಅವಕಾಶ
ಕಾರ್ಪೊರೇಟ್ ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಉತ್ತಮ ಸಂಬಳ, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಕನಸಿರುತ್ತೆ. ಆದರೆ, ಕೈಯಲ್ಲಿರುವ ಒಳ್ಳೆಯ ಕೆಲಸವನ್ನ ಬಿಟ್ಟು ತಮಗೆ ಇಷ್ಟವಾದ, ಆದರೆ ಯಾವುದೇ ಸೆಕ್ಯೂರ್ ಇಲ್ಲದ ಹಾದಿಯನ್ನ ಆಯ್ಕೆ ಮಾಡಿಕೊಳ್ಳುವುದು ನಿಜಕ್ಕೂ ದೊಡ್ಡ ಸಾಹಸ.
ಇಂತಹದ್ದೇ ಒಂದು ದಿಟ್ಟ ಹೆಜ್ಜೆ ಇಟ್ಟು ಇಂದು ಯಶಸ್ಸಿನ ಉತ್ತುಂಗಕ್ಕೇರುತ್ತಿರುವ ಯುವತಿ ಐಶ್ವರ್ಯಾ ಜಿ.ಪಿ. ಡೆಲಾಯ್ಟ್ ನಂತಹ ಪ್ರತಿಷ್ಠಿತ ಕಂಪನಿಯ ಕೆಲಸವನ್ನು ಬಿಟ್ಟು, ಕಂಟೆಂಟ್ ಕ್ರಿಯೇಟರ್ ಆಗಿ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿರುವ ಇವರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಎಸ್.ಎಸ್.ಎಂ ಲಕ್ಷ್ಮಿ ಅಮ್ಮಾಳ್ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಐಶ್ವರ್ಯಾ, ಪ್ರತಿಷ್ಠಿತ ಪಿಎಸ್.ಜಿ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದರು. ಆ ಬಳಿಕ ವಿಶ್ವದ ಟಾಪ್ ಕಂಪನಿಗಳಲ್ಲಿ ಒಂದಾದ ಡೆಲಾಯ್ಟ್‌ನಲ್ಲಿ ಬರೋಬ್ಬರಿ ಮೂರು ವರ್ಷಗಳ ಕಾಲ ಕೆಲಸ ಮಾಡಿದರು. ಇದು ಹಲವರ ಪಾಲಿಗೆ ನಿಜಕ್ಕೂ ಕನಸಿನ ಉದ್ಯೋಗ. ಆದರೆ ಐಶ್ವರ್ಯಾ ತಮ್ಮ ಈ ಡ್ರೀಮ್ ಜಾಬ್ ಅನ್ನ ರಿಸೈನ್ ಮಾಡಿ, ಟೌನ್ ಸ್ಕಾಲರ್ ಎಂಬ ಬ್ರ್ಯಾಂಡ್ ಸ್ಟೋರಿಟೆಲ್ಲಿಂಗ್ ಕಂಪನಿಯಲ್ಲಿ ಕಂಟೆಂಟ್ ಮತ್ತು ಗ್ರೋತ್ ಸ್ಟ್ರಾಟೆಜಿಸ್ಟ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು.
ಜೊತೆಗೆ ತಮಗೆ ಇಷ್ಟವಾದ ವಿಷಯಗಳ ಬಗ್ಗೆ ವಿಡಿಯೋಗಳನ್ನ ಮಾಡುತ್ತಾ ಕಂಟೆಂಟ್ ಕ್ರಿಯೇಟರ್ ಐಶ್ವರ್ಯಾ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡರು.
5 ವರ್ಷದ ಯೋಜನೆ ಬದಲು 6 ತಿಂಗಳ ಗುರಿಯೇ ಯಶಸ್ಸಿನ ಮಂತ್ರ
ಚೆನ್ನೈ ಮೂಲದ ಸ್ಟಾರ್ಟ್ಅಪ್ ಫೌಂಡರ್ ಜಯ ಶಕ್ತಿ ಕಣ್ಣನ್ ಅವರು ಐಶ್ವರ್ಯಾ ಅವರ ಈ ಪಯಣದ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. "ಡೆಲಾಯ್ಟ್ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆದ ಐಶ್ವರ್ಯಾ ಅವರನ್ನು ಮುಂದಿನ 5 ವರ್ಷಗಳ ಪ್ಲಾನ್ ಏನು ಎಂದು ನಾನು ಕೇಳಿದ್ದೆ. ಅದಕ್ಕೆ ಅವರು 'ನನಗೆ ಯಾವುದೇ ಐಡಿಯಾ ಇಲ್ಲ' ಎಂದು ಉತ್ತರಿಸಿದ್ದು ನನಗೆ ಅಚ್ಚರಿ ಮೂಡಿಸಿತ್ತು" ಎಂದು ಕಣ್ಣನ್ ಹೇಳಿದ್ದಾರೆ.
"ಒಂದು ವರ್ಷದ ಹಿಂದೆ ನಾನು ಕಂಟೆಂಟ್ ಕ್ರಿಯೇಟರ್ ಆಗುತ್ತೇನೆ ಎಂದೇ ಊಹಿಸಿರಲಿಲ್ಲ. ಹಾಗಾಗಿ ಮುಂದಿನ ಐದು ವರ್ಷಗಳಲ್ಲಿ ನಾನು ಎಲ್ಲಿರುತ್ತೇನೆ ಎಂದು ಈಗಲೇ ಹೇಗೆ ಹೇಳಲಿ? ಬದಲಿಗೆ ನಾನು ಮುಂದಿನ 6 ತಿಂಗಳ ಗುರಿಯತ್ತ ಮಾತ್ರ ಗಮನ ಹರಿಸುತ್ತಿದ್ದೇನೆ. ಹೊಸ ವಿಷಯಗಳನ್ನ ಕಲಿಯುವುದು, ಎಕ್ಸ್‌ಪ್ಲೋರ್ ಮಾಡುವುದು ಹಾಗೂ ಬರುವ ಅವಕಾಶಗಳನ್ನ ಚನ್ನಾಗಿ ಬಳಸಿಕೊಳ್ಳುವುದು ಮಾತ್ರ ನನ್ನ ಮುಂದಿನ ಗುರಿ" ಎಂದು ಐಶ್ವರ್ಯಾ ಹೇಳಿದ್ದಾಗಿ ಕಣ್ಣನ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಾರ್ಪೊರೇಟ್ ಕೆಲಸ ಬಿಟ್ಟ ಬಳಿಕ ಬಂದ ಹೊಸ ಅವಕಾಶಗಳು
ಐಶ್ವರ್ಯಾ ಅವರ ಈ ಶಾರ್ಟ್-ಟರ್ಮ್ ಮಂತ್ರ ಅವರಿಗೆ ಒಳ್ಳೆಯ ಯಶಸ್ಸು ತಂದುಕೊಟ್ಟಿದೆ. ಇಂದು ಅವರು ಕೇವಲ ಕಂಟೆಂಟ್ ಕ್ರಿಯೇಟರ್ ಮಾತ್ರವಲ್ಲ, ಅವರಿಗೆ ಸಿನಿಮಾಗಳು, ಟಿವಿ ಶೋಗಳ ನಿರೂಪಣೆ ಹಾಗೂ ವೆಬ್ ಸೀರೀಸ್‌ಗಳಲ್ಲಿ ನಟಿಸುವ ಅವಕಾಶಗಳು ತಾನಾಗಿಯೇ ಒಲಿದು ಬರುತ್ತಿವೆ.
"ನಾವು ಯಾವಾಗಲೂ 5 ಅಥವಾ 10 ವರ್ಷಗಳ ಪ್ಲಾನ್ ಮಾಡಿಕೊಂಡು ಕುದುರೆ ಮುಖಕ್ಕೆ ಪಟ್ಟಿ ಕಟ್ಟಿದಂತೆ ಒಂದೇ ದಾರಿಯಲ್ಲಿ ಸಾಗುತ್ತೇವೆ. ಆದರೆ ಜಾಕ್ ಮಾ, ಅರ್ನಾಲ್ಡ್ ಶ್ವಾರ್ಜಿನೆಗ್ಗರ್, ನಟ ವಿಜಯ್ ಹಾಗೂ ರೀಡ್ ಹೇಸ್ಟಿಂಗ್ಸ್ ಅವರಂತಹ ದಿಗ್ಗಜರು ಒಂದು ಕೆಲಸದಿಂದ ಆರಂಭಿಸಿ, ಕಾಲಕ್ಕೆ ತಕ್ಕಂತೆ ಬದಲಾಗಿ ಇಂದು ಯಾರೂ ಊಹಿಸದ ಮಟ್ಟಕ್ಕೆ ಬೆಳೆದಿದ್ದಾರೆ. ಹಾಗಾಗಿ ನಾವು ಅತಿಯಾಗಿ ಭವಿಷ್ಯದ ಬಗ್ಗೆ ಯೋಚಿಸುವ ಅಗತ್ಯವಿಲ್ಲ" ಎಂದು ಕಣ್ಣನ್ ವಿಶ್ಲೇಷಿಸಿದ್ದಾರೆ.
ಐಶ್ವರ್ಯಾ ನಿರ್ಧಾರಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಐಶ್ವರ್ಯಾ ಅವರ ಈ ನಿರ್ಧಾರ ಹಾಗೂ ಜಯ ಶಕ್ತಿ ಕಣ್ಣನ್ ಅವರ ಬರಹಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಪೊರೇಟ್ ಜಗತ್ತಿನ ಕಟ್ಟುಪಾಡುಗಳಿಂದ ಹೊರಬಂದು, ಸ್ವಂತವಾಗಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಇರುವ ಯುವಜನತೆಗೆ ಈ ಕಥೆ ಸ್ಪೂರ್ತಿಯಾಗಿದೆ. ಸುದೀರ್ಘವಾದ ಯೋಜನೆಗಳಿಗಿಂತ, ಮುಂದಿನ ಕೇವಲ ಆರು ತಿಂಗಳಿಗಷ್ಟೇ ಸಣ್ಣ ಸಣ್ಣ ಗುರಿಗಳನ್ನ ಇಟ್ಟುಕೊಂಡು ಹೆಜ್ಜೆ ಇಟ್ಟರೆ, ಎದುರಾಗುವ ಒತ್ತಡವನ್ನ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನ ನೆಟ್ಟಿಗರು ಕೊಂಡಾಡಿದ್ದಾರೆ.
"ನಮ್ಮ ಇಡೀ ಭವಿಷ್ಯದ ಹಾದಿಯನ್ನು ಮೊದಲೇ ಮ್ಯಾಪ್ ಮಾಡಿಕೊಳ್ಳುವ ಅಗತ್ಯವಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಮುಂದಿನ 6 ತಿಂಗಳ ಮೇಲೆ ಗಮನಹರಿಸಿದರೆ ಸಾಕು, ಹೊಸ ಅವಕಾಶಗಳು ತಾನಾಗಿಯೇ ಒಲಿದು ಬರುತ್ತವೆ" ಎಂದು ಕಮೆಂಟ್ ಮಾಡಿದ್ದಾರೆ.


Click it and Unblock the Notifications
