ISRO Mission: ಬಾನಂಗಳದಲ್ಲಿ ಇಸ್ರೋ ಸೆಂಚ್ಯುರಿ, 100ನೇ ರಾಕೆಟ್ ಯಶಸ್ವಿ ಉಡಾವಣೆ!
ಶ್ರೀಹರಿಕೋಟಾ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುವ 'ಇಸ್ರೋ' ಈಗ 100ನೇ ರಾಕೆಟ್ ಯಶಸ್ವಿ ಉಡಾವಣೆ ಮಾಡಿದೆ. ಈ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ.
ಹೌದು, ಅದು 1963ರ ನವೆಂಬರ್ 21, ಭಾರತ ತನ್ನ ಮೊಟ್ಟ ಮೊದಲ ಉಪಗ್ರಹ ಉಡಾವಣೆ ಮಾಡಿತ್ತು. ಆದರೆ ಅಮೆರಿಕದ ರಾಕೆಟ್ ಬಳಸಿ ಮೊದಲ ಬಾರಿ ಉಪಗ್ರಹ ಉಡಾವಣೆ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, 2025 ರಲ್ಲಿ ಅಮೆರಿಕದ 'ನಾಸಾ' ಸಂಸ್ಥೆಯನ್ನೂ ಮೀರಿಸುವತ್ತ ಮುನ್ನುಗ್ಗುತ್ತಿದೆ. ಬುಧವಾರ ಅಂದ್ರೆ ಇಂದು ಇಸ್ರೋ ಸಂಸ್ಥೆ ತನ್ನ 100ನೇ ರಾಕೆಟ್ ಯಾತ್ರೆ ಯಶಸ್ವಿಯಾಗಿ ಮುಗಿಸಿ, ಇಡೀ ಜಗತ್ತಿಗೇ ಮಾದರಿಯಾಗಿದೆ.

100ನೇ ರಾಕೆಟ್ ಯಾತ್ರೆ ಸಕ್ಸಸ್!
ಇಂದು ಬೆಳಗ್ಗೆ 6.23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಇಸ್ರೋ ತನ್ನ 100ನೇ ರಾಕೆಟ್ ಯಾತ್ರೆಯನ್ನ ಯಶಸ್ವಿಯಾಗಿ ಪೂರೈಸಿತು. ಎನ್‌ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್‌ವಿ ಬೆಂಕಿಯ ಚಂಡಿನಂತೆ ಮುಂದೆ ನುಗ್ಗಿ, ಬಾಹ್ಯಾಕಾಶದ ಗಡಿಯನ್ನೂ ಛಿದ್ರಮಾಡಿ ತನ್ನ ಗುರಿ ತಲುಪಿದೆ. ಈ ಮೂಲಕ, ಬಾನಂಗಳದಲ್ಲಿ ಇಸ್ರೋ ಸೆಂಚ್ಯುರಿ ಬಾರಿಸಿ ಭಾರತೀಯರಿಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ.
ಇತ್ತೀಚೆಗಷ್ಟೇ ಇಸ್ರೋ ಸಂಸ್ಥೆಗೆ ಹೊಸ ಅಧ್ಯಕ್ಷರ ಆಗಮನವಾಗಿದ್ದು, ವಿ.ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಇದೀಗ 'ಇಸ್ರೋ' ಯಶಸ್ವಿಯಾಗಿ ಮುನ್ನಡೆಯುತ್ತಿದೆ. ರಾಕೆಟ್ ಉಡಾವಣೆ ಯಶಸ್ವಿಯಾದ ಬಗ್ಗೆ ಮಾತನಾಡಿರುವ ನಾರಾಯಣ್ ಅವರು, ಈ ಸಾಧನೆ ಕೇವಲ ಒಬ್ಬರಿಂದ ಆಗಿಲ್ಲ ಆದರೆ ಇದು ನಮ್ಮ ತಂಡದ ಒಟ್ಟಾರೆ ಪರಿಶ್ರಮ ಎಂದಿದ್ದಾರೆ. ಈ ವರ್ಷ ಇಸ್ರೋಗೆ ಬಿಡುವಿಲ್ಲದ ವರ್ಷವಾಗಿದ್ದು, ಸಾಲು ಸಾಲು ಯೋಜನೆಗಳು ಜಾರಿಗೆ ಬರಲಿವೆ ಎಂದಿದ್ದಾರೆ.
ಚಂದ್ರಯಾನ-4 ಮತ್ತು ಚಂದ್ರಯಾನ-5!
ಇಸ್ರೋ ಸಂಸ್ಥೆ 2025 ರಲ್ಲಿ ಚಂದ್ರಯಾನ-4 ಮತ್ತು ಚಂದ್ರಯಾನ-5 ಯೋಜನೆಗಳ ಜೊತೆಗೆ ಶ್ರೀಹರಿಕೋಟಾದಲ್ಲಿ ತನ್ನ 3ನೇ ಲಾಂಚಿಂಗ್ ಪ್ಯಾಡ್ ಸ್ಥಾಪನೆ ಮಾಡುತ್ತಿದೆ. ಹಾಗೇ ಇದರ ಜತೆಗೆ ಕುಲಶೇಖರಪಟ್ಟಣಂ ಭಾಗದಲ್ಲಿ ಪ್ರಮುಖ ಕೆಲಸಗಳು ಸಾಗಿವೆ. ಒಟ್ನಲ್ಲಿ ಇಸ್ರೋ ಈ ರೀತಿಯಾಗಿ ಬೆಳವಣಿಗೆ ಕಾಣುತ್ತಿರುವ ವಿಚಾರ ಭಾರತೀಯರಿಗೆ ಹೆಮ್ಮೆ ತರುವ ಜೊತೆಯಲ್ಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ಬಲಿಷ್ಠವಾಗುತ್ತಿದೆ. ಹಾಗೇ ಇಸ್ರೋ ಸಂಸ್ಥೆ ಬೆಳೆಯುತ್ತಿರುವ ರೀತಿ ಜಗತ್ತಿನ ಬೇರೆ ಬೇರೆ ದೇಶಗಳಿಗೂ ಮಾದರಿಯಾಗಿದೆ.












Click it and Unblock the Notifications