Get Updates
Get notified of breaking news, exclusive insights, and must-see stories!
Live

ಮಧ್ಯಂತರ ಬಜೆಟ್‌ 2024 LIVE: ಮೋದಿ ಸರ್ಕಾರದ ಲೆಕ್ಕಾಚಾರ- ಈ ಕ್ಷಣದ ಅಪ್ಡೇಟ್ಸ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದಾರೆ. ಇದು ಇವರು ಮಂಡಿಸಿದ 6ನೇ ಬಾರಿಯ ಬಜೆಟ್‌ ಆಗಿದೆ. ಈ ಬಾರಿ ಲೋಕಸಭೆ ಚುನಾವಣೆ ಇರುವುದರಿಂದ ಇದು ಮಧ್ಯಂತರ ಬಜೆಟ್ ಆಗಿದೆ. ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯಾದ ನಂತರ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು.

Interim Budget 2024 Live News Updates in Kannada

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಇನ್ನು ಈ ಬಜೆಟ್‌ನಲ್ಲಿ ಮತದಾರರನ್ನು ಸೆಳೆಯಲು ಕೇಂದ್ರ ಸರ್ಕಾರ ಕೆಲವು ಪ್ರಮುಖ ಘೋಷಣೆಗಳನ್ನು ಮಾಡಿದೆ. ಯಾವ್ಯಾವ ಕ್ಷೇತ್ರಕ್ಕೆ ಏನೆಲ್ಲ ಘೋಷಣೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ. ಬಜೆಟ್‌ನಲ್ಲಿ ಹಲವು ಕ್ಷೇತ್ರಗಳಿಗೆ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಕ್ಷಣ ಕ್ಷಣದ ಅಪ್ಡೇಟ್‌ಗಾಗಿ ಒನ್‌ ಇಂಡಿಯಾ ಅನ್ನು ಫಾಲೋ ಮಾಡಿ.

Feb 01, 2024, 8:16 pm IST

Budget 2024: ರೈತರು, ಬಡವರ ಪರಿಸ್ಥಿತಿ ಸುಧಾರಿಸುವತ್ತ ಸರ್ಕಾರದ ಗಮನ: ಕೇಂದ್ರ ಬಜೆಟ್‌ನ ಪ್ರಮುಖಾಂಶಗಳೇನು?

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ 2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ.
Feb 01, 2024, 8:15 pm IST

Railways Budget 2024: ರೈಲ್ವೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?, ಹಂಚಿಕೆ-ಅಂಕಿ ಸಂಖ್ಯೆಗಳು ವಿವರ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಗಳವಾರ ಪ್ರಸಕ್ತ ಸಾಲಿನ 2024-2025 ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಮಂಡಿಸಿದರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಮಹತ್ತರ ಬದಲಾವಣೆಗಳು ಆಗಿವೆ. ಆದಷ್ಟು ಈ ಬಜೆಟ್ ಮೇಲೆ ಇಟ್ಟಿದ್ದ ನಿರೀಕ್ಷೆಗಳನ್ನು ವಿತ್ತ ಸಚಿವರು ಹುಸಿ ಮಾಡದೇ ಕೆಲವು ಘೋಷಣೆಗಳನ್ನು ಮಾಡಿದ್ದಾರೆ.
Feb 01, 2024, 8:13 pm IST

Budget 2024; ಮೋದಿ ದೂರದೃಷ್ಟಿ ಬಜೆಟ್‌ನಲ್ಲಿ ಅಡಗಿದೆ; ಹೆಚ್‌ಡಿಕೆ

ಲೋಕಸಭೆ ಚುನಾವಣೆ ಎದುರಿರುವಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಚುನಾವಣೆ ಎದುರಿರುವುದರಿಂದ ಮಧ್ಯಂತರ ಬಜೆಟ್ ಮಂಡನೆ ಮಾಡಲಾಗಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ಬಂದ ಮೇಲೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ.
Feb 01, 2024, 8:10 pm IST

Budget 2024 of India: ಬಜೆಟ್ ಬಗ್ಗೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ

ವಿಧಾನಸಭಾ ಚುನಾವಣೆ ಮುನ್ನ ಕಾಂಗ್ರೆಸ್‌ ಪಕ್ಷಕ್ಕೆ ತೆರಳಿ, ಲೋಕಸಭಾ ಚುನಾವಣೆ ಮೊದಲು ಮರಳಿ ಬಿಜೆಪಿಗೆ ಬಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Feb 01, 2024, 8:09 pm IST

Budget 2024: ರಿಯಲ್‌ ಎಸ್ಟೇಟ್‌ಗೆ ಬಜೆಟ್‌ನಲ್ಲಿ ಸಿಗದ ಬೆಂಬಲ: ಕುಸಿತ ಕಂಡ ಷೇರುಗಳು

2024 ರ ಮಧ್ಯಂತರ ಬಜೆಟ್ ನಂತರ ರಿಯಲ್‌ ಎಸ್ಟೇಟ್ ವಲಯಕ್ಕೆ ಯಾವುದೇ ದೊಡ್ಡ ಘೋಷಣೆಗಳನ್ನು ಮಾಡದ ನಂತರ ರಿಯಲ್ ಎಸ್ಟೇಟ್ ಷೇರುಗಳು ಫೆಬ್ರವರಿ 1 ರಂದು ಕುಸಿತ ಕಂಡವು.
Feb 01, 2024, 8:06 pm IST

Budget 2024: ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ₹770 ಕೋಟಿ ನೆರವು ನೀಡಿದ ಕೇಂದ್ರ ಸರ್ಕಾರ

ಭಾರತದ ಮಧ್ಯಂತರ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ಅನುದಾನ ಹಂಚಿಕೆಯಲ್ಲಿ ಗಣನೀಯ ಹೆಚ್ಚಳ ಮಾಡಲಾಗಿದೆ. ಮಧ್ಯಂತರ ಬಜೆಟ್ 2023-24 ರ ಆರ್ಥಿಕ ವರ್ಷಕ್ಕೆ ₹770.90 ಕೋಟಯನ್ನು ಮಾಲ್ಡೀವ್ಸ್‌ಗೆ ನೀಡಲಾಗಿದೆ.
Feb 01, 2024, 8:05 pm IST

'ನಿರ್ಮಲಾ ಸೀತಾರಾಮನ್ ಅವರ 28 ಪುಟಗಳ ಭಾಷಣ ಸುಳ್ಳುಗಳ ಸರಮಾಲೆಯಿಂದ ಕೂಡಿದೆ': ಸಿದ್ದರಾಮಯ್ಯ ಟೀಕೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ಒಂದರಂದು 2024-25ನೇ ಸಾಲಿನ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್‌ಗೆ ಬಿಜೆಪಿ ನಾಯಕರು ಸಂತೋಷ ವ್ಯಕ್ತಪಡಿಸಿದ್ದರೇ, ಕಾಂಗ್ರೆಸ್ ಸೇರಿ ಅನೇಕ ಪ್ರತಿಪಕ್ಷಗಳು ಇದು ನೀರಸ ಬಜೆಟ್ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ "ಇದು ವಿಕಸಿತ ಭಾರತ ಅಲ್ಲ ವಿನಾಶಕಾರಿ ಭಾರತದ ಬಜೆಟ್" ಎಂದಿದ್ದಾರೆ.
Feb 01, 2024, 7:34 pm IST

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬೆನ್ನಲ್ಲೇ, ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್, ಇದೇ ರೀತಿ ಮುಂದುವರಿದರೆ ಪ್ರತ್ಯೇಕ ದೇಶದ ಬೇಡಿಕೆ ಮುಂದಿಡುವುದಾಗಿ ಬೆದರಿಕೆ ಹಾಕಿದ್ದಾರೆ.
Feb 01, 2024, 7:14 pm IST

ದಕ್ಷಿಣ ಭಾರತ & ಉತ್ತರ ಭಾರತದ ಕುರಿತು ಹೇಳಿಕೆ ನೀಡುವಾಗ ಪ್ರತ್ಯೇಕ ರಾಷ್ಟ್ರದ ಬಗ್ಗೆ ಬೇಡಿಕೆ ಇಟ್ಟಿರುವ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಕೇಂದ್ರ ಬಜೆಟ್ ವಿಚಾರವಾಗಿ ಮಾತನಾಡುವ ವೇಳೆ ಸಂಸದ ಡಿ.ಕೆ. ಸುರೇಶ್, ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪ ಮಾಡಿದರು. ಅಲ್ಲದೆ ಉತ್ತರ ಭಾರತ ಮಾತ್ರ ಹೆಚ್ಚಿನ ಅನುದಾನ ಪಡೆಯುತ್ತಿದೆ ಎಂದರು. ಹೀಗಿದ್ದಾಗ ಪ್ರತ್ಯೇಕ ದೇಶ ಆಗುವ ಬಗ್ಗೆ ಕೂಡ ಭವಿಷ್ಯ ನುಡಿದರು. ಈ ಬಗ್ಗೆ ಡಿ.ಕೆ. ಶಿವಕುಮಾರ್ ಇದೀಗ ಪ್ರತಿಕ್ರಿಯಿಸಿದ್ದಾರೆ.
Feb 01, 2024, 6:44 pm IST

ದಕ್ಷಿಣ ರಾಜ್ಯಗಳಿಗೆ ಅನ್ಯಾಯ: 'ಪ್ರತ್ಯೇಕ ರಾಷ್ಟ್ರ'ದ ಕುರಿತು ಸಂಸದ ಡಿಕೆ ಸುರೇಶ್‌ ಸ್ಪೋಟಕ ಹೇಳಿಕೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರು ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರವು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದು,ಇಂದಿನ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದ್ರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Feb 01, 2024, 5:02 pm IST

ಮಧ್ಯಂತರ ಬಜೆಟ್ ಅನ್ನು ಸ್ವಾಗತಿಸುತ್ತೇನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಮಧ್ಯಂತರ ಬಜೆಟ್ ಅನ್ನು ನಾನು ಸ್ವಾಗತಿಸುತ್ತೇನೆ. ಕೃಷಿ ವಲಯ ಮತ್ತು ಕೃಷಿಧಾನ್ಯಗಳ ಬೆಳೆಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಯುವ ಉದ್ಯಮಿಗಳಿಗೆ ಪ್ರೋತ್ಸಾಹ, ಉತ್ಪಾದನೆಗೆ ಒತ್ತು ಇತ್ಯಾದಿ ಕ್ರಮಗಳು ಸ್ವಾಗತಾರ್ಹ ಎಂದು ತಮ್ಮ ಟ್ವೀಟ್‌ನಲ್ಲಿ ಎಚ್‌ಡಿಕೆ ತಿಳಿಸಿದ್ದಾರೆ.
Feb 01, 2024, 4:59 pm IST

ರಾಷ್ಟ್ರದ ಪ್ರಗತಿನಿಷ್ಠ ಬಜೆಟ್: ಬಿಎಸ್‌ವೈ

ಹೆಮ್ಮೆಯ ಪ್ರಧಾನಿ ಅವರ ನವಭಾರತದ ಪರಿಕಲ್ಪನೆಯ ಸಾರ್ಕಾರದ ನಿಟ್ಟಿನಲ್ಲಿ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ, ರಾಷ್ಟ್ರದ ಪ್ರಗತಿನಿಷ್ಠ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ಶ್ರೀಮತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಚುನಾವಣಾಪೂರ್ವ ಜನಪ್ರಿಯ ಘೋಷಣೆಗಳ ಬಜೆಟ್ ಮಂಡಿಸದೆ, ಈ ಮಧ್ಯಂತರ ಬಜೆಟ್ ಮೂಲಕ ನಮ್ಮ ಯುವಜನತೆ, ರೈತರು, ಮಹಿಳೆಯರು ಹಾಗೂ ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ಜೀವನಮಟ್ಟ ಸುಧಾರಿಸುವ, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ ವಾಸ್ತವಿಕ ಆಯವ್ಯಯವನ್ನು ಕೇಂದ್ರ ವಿತ್ತ ಸಚಿವೆ ಮಂಡಿಸಿದ್ದಾರೆ ಎಂದು ಬಿಎಸ್‌ವೈ ಟ್ವೀಟ್‌ನಲ್ಲಿ ತಿಳಿಸಿದ್ದಾರೆ
Feb 01, 2024, 4:36 pm IST

ಡಿ.ಕೆ.ಸುರೇಶ್‌ ವಿರುದ್ಧ ದೇಶದ್ರೋಹ ಕೇಸ್‌ ದಾಖಲಿಸಬೇಕು

ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತದೆ ಎಂಬ ಡಿ.ಕೆ.ಸುರೇಶ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಡಿ.ಕೆ.ಸುರೇಶ್‌ ವಿರುದ್ಧ ಪೊಲೀಸರು ದೇಶದ್ರೋಹ ಕೇಸ್‌ ಹಾಕಬೇಕು. ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲೂ ಅದೇ ರೀತಿಯಾಗಿ ನಡೆದುಕೊಂಡರು. ಕೇರಳದಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರ ಗೆದ್ದಿಲ್ಲದಿದ್ದರೂ ಅಲ್ಲಿ ಎಲ್ಲಾ ರೀತಿಯಲ್ಲೂ ಪ್ರಧಾನಿ ಮೋದಿ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
Feb 01, 2024, 4:30 pm IST

ಇದು ಕಳಪೆ ಬಜೆಟ್‌: ಡಿಸಿಎಂ ಡಿಕೆಶಿ

ಮಧ್ಯಂತರ ಕೇಂದ್ರ ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ಇದು ಕಳಪೆ ಬಜೆಟ್‌ ಆಗಿದ್ದು, ನಮಗೆ ತುಂಬಾ ನಿರಾಸೆಯಾಗಿದೆ. ಇಷ್ಟೊಂದು ಕಳಪೆ ಬಜೆಟ್‌ ನಾನು ಯಾವತ್ತೂ ನೋಡಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Feb 01, 2024, 4:19 pm IST

ಭಾರತ ಒಟ್ಟಾಗಬೇಕು: ಡಿ.ಕೆ.ಶಿವಕುಮಾರ್‌

ಕೇಂದ್ರ ಬಜೆಟ್‌ ಮಂಡನೆಯಾದ ಬೆನ್ನಲ್ಲೇ ಡಿ.ಕೆ.ಸುರೇಶ್‌ ಅವರು ದಕ್ಷಿಣ ಭಾರತದ ಹಣವನ್ನೆಲ್ಲ ಉತ್ತರ ಭಾರತಕ್ಕೆ ಹಂಚುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಜನ ಆ ರೀತಿ ಯೋಚನೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಭಾರತ ಒಟ್ಟಾಗಬೇಕು, ನಾವೆಲ್ಲರೂ ಭೂತಾಯಿ ಮಕ್ಕಳು. ನಾನು ಅಖಂಡ ಭಾರತದವನು, ಭಾರತ ಒಂದೇ ದೇಶ ಎಂದರು.
Feb 01, 2024, 4:10 pm IST

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್

ನಿರ್ಮಲಾ ಸೀತಾರಾಮನ್ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ಮಾಡಿದ್ದಾರೆ. ಯುವ ಸಬಲೀಕರಣಕ್ಕೆ, ರೈತರ ಕ್ಷೇಮಾಭವೃದ್ಧಿ, ಬಡವರ ಕಲ್ಯಾಣ, ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
Feb 01, 2024, 4:00 pm IST

ರಾಜನಾಥ್ ಸಿಂಗ್ ಪ್ರತಿಕ್ರಿಯೆ

ಆತ್ಮವಿಶ್ವಾಸ, ಬಲಿಷ್ಠ ಮತ್ತು ಸ್ವಾವಲಂಬಿ ಉತ್ತೇಜಕ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವೆ ಶ್ರೀಮತಿ ಅವರಿಗೆ ಅಭಿನಂದನೆಗಳು. ಈ ಬಜೆಟ್ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಯಾಗಿದೆ. ಬಜೆಟ್‌ನಲ್ಲಿ ಮೂಲಸೌಕರ್ಯ, ವಸತಿ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ರಾಜನಾಥ್‌ ಸಿಂಗ್‌ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.
Feb 01, 2024, 3:26 pm IST

ಮೆಟ್ರೋ ಯೋಜನೆ ಜಾರಿ ಕುರಿತು ಹುಬ್ಬಳ್ಳಿ ಮಂದಿ ಹೇಳಿದ್ದಿಷ್ಟು

ಮೂರು ಕಾರಿಡಾರ್‌ಗಳಿಗೆ ಒತ್ತು ಕೊಡುವುದಾಗಿ ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಿಮೆಂಟ್ ಉದ್ಯಮಗಳು ಹೆಚ್ಚಿರುವುದರಿಂದ ಸಿಮೆಂಟ್ ಕಾರಿಡಾರ್ ಮಾಡಬೇಕು. ಟೈರ್ ಟು ಸಿಟಿಗಳಲ್ಲಿಯೂ ಮೆಟ್ರೋ ಯೋಜನೆ ಜಾರಿಗೆ ತರುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪೂರ್ಣ ಬಜೆಟ್ ಮಂಡನೆ ಆಗಿಲ್ಲ. ಹೀಗಾಗಿ ಹೆಚ್ಚಿನದನ್ನು ನಿರೀಕ್ಷೆ ಮಾಡುವಂತಿಲ್ಲ. ಚುನಾವಣೆ ನಂತರ ಇದರಲ್ಲಿ ಹಲವಾರು ಬದಲಾವಣೆಗಳನ್ನು ನಿರೀಕ್ಷಿಸಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಕೈಗಾರಿಕೋದ್ಯಮಿಗಳ ಹೇಳಿದ್ದಾರೆ.
Feb 01, 2024, 3:25 pm IST

ಹುಬ್ಬಳ್ಳಿಯಲ್ಲಿ ಬಜೆಟ್‌ ಕುರಿತು ಪ್ರತಿಕ್ರಿಯೆಗಳು ಹೀಗಿವೆ

ಕೇಂದ್ರ ಬಜೆಟ್‌ಗೆ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಜೆಟ್‌ನಲ್ಲಿ ಪ್ರಮುಖ ನಾಲ್ಕು ಸೆಕ್ಟರ್‌ಗೆ ಆದ್ಯತೆ ನೀಡಲಾಗಿದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ಫಲಕ ಅಳವಡಿಕೆ, ಮಹಿಳೆಯರಿಗೆ ಸರ್ವೈಕಲ್ ಕ್ಯಾನ್ಸರ್ ಲಸಿಕೆ, ಯುವ ಜನತೆಗೆಗೆ ಆದ್ಯತೆ, ಬಡವರಿಗೆ ಮನೆ ನಿರ್ಮಾಣ ಇವುಗಳಾಗಿವೆ ಎಂದು ಇಲ್ಲಿನ ಕೆಲವರು ಹೇಳಿದ್ದಾರೆ. ಮತ್ತೊಂದೆಡೆ ಇನ್ನೂ ಕೆಲವರು ಜಿಎಸ್‌ಟಿಯಲ್ಲಿ ಸರಳೀಕರಣ ಮಾಡುತ್ತೇವೆ ಅಂತಾ ಅಂದುಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ. ಪ್ರವಾಸೋದ್ಯಮಕ್ಕೆ ಒತ್ತು ಕೊಡೋದಾಗಿ ಹೇಳಿದ್ದಾರೆ. ಕರ್ನಾಟಕದ ಪ್ರವಾಸಿ ತಾಣಗಳಿಗೆ ಒತ್ತುಕೊಟ್ಟರೆ ಒಳ್ಳೆಯದಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಜನರು ಆಗ್ರಹಿಸಿದ್ದಾರೆ.
Feb 01, 2024, 3:19 pm IST

ಅಮಿತ್‌ ಶಾ ಹೇಳಿದ್ದೇನು?

ಮುಂದಿನ ಐದು ದಶಕಗಳ ಕಾಲ ರಾಜ್ಯಗಳಿಗೆ ಒಟ್ಟು ₹75,000 ಕೋಟಿ ಬಡ್ಡಿ ರಹಿತ ಸಾಲ ನೀಡುವ ನಿರ್ಧಾರವು ಕೇಂದ್ರ-ರಾಜ್ಯ ಸಂಬಂಧಗಳನ್ನು ಬಲಪಡಿಸುವಲ್ಲಿ ಬದಲಾವಣೆಯನ್ನು ಸಾಬೀತುಪಡಿಸುತ್ತದೆ. ಮೋದಿ ಜಿ ಅವರು ಕಲ್ಪಿಸಿದ ಭಾರತದಲ್ಲಿ ಯಾವುದೇ ಪ್ರದೇಶವು ಹಿಂದುಳಿದಿಲ್ಲ ಎಂಬುದನ್ನು ಇದು ಖಚಿತಪಡಿಸುತ್ತದೆ ಎಂದು ಅಮಿತ್‌ ಶಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ.
Feb 01, 2024, 3:10 pm IST

ಇಂಧ್ರ ಧನುಷ್‌ ಯೋಜನೆ ಮೂಲಕ ಯು-ವಿನ್‌ ಯೋಜನೆಯಡಿ 9-14 ವರ್ಷ ವಯಸ್ಸಿನ ಬಾಲಕಿಯರಿಗೆ ಗರ್ಭಕೋಶ ಕ್ಯಾನ್ಸರ್‌ ವಿರುದ್ಧ ಹೋರಾಡಲು ಲಸಿಕೆ ನೀಡಲಾಗುತ್ತದೆ.
Feb 01, 2024, 2:53 pm IST

43 ಕೋಟಿ ಯುವಜನತೆಗೆ ಸಾಲ-ಯಾರೆಲ್ಲಾ ಅರ್ಹರು?

ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 43 ಕೋಟಿ ಯುವಜನತೆಗೆ 22.05 ಲಕ್ಷ ಕೋಟಿಯಷ್ಟು ಸಾಲ ನೀಡಲಾಗುತ್ತದೆ. ಅದರಲ್ಲೂ ಹೊಸ ಉದ್ಯಮ ಸ್ಥಾಪಿಸುವ ಯುವಕರು ಇದಕ್ಕೆ ಅರ್ಹರಾಗಿದ್ದು, ಸಾಲ ಪಡೆಯುವ ಯುವಕರು ಉದ್ಯೋಗಸ್ಥರಾಗುತ್ತಾರೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದರು.
Feb 01, 2024, 2:16 pm IST

ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಿದ ಬಜೆಟ್‌ ಒಂದು ಮಧ್ಯಂತರ ಬಜೆಟ್ ಆಗಿದೆ. ಆದರೂ ಇದು ಕಳೆದ ಒಂಬತ್ತು ವರ್ಷಗಳ ದೃಢವಾದ ಆರ್ಥಿಕ ಚಿತ್ರಣವನ್ನು ಒದಗಿಸಿದೆ. ಏಕ-ಅಂಕಿಯ ಹಣದುಬ್ಬರವನ್ನು ನಿಯಂತ್ರಿಸುವುದು, ಎಫ್‌ಡಿಐ ಹೆಚ್ಚಿಸುವುದು, ಉದ್ಯೋಗ ದರವನ್ನು ಹೆಚ್ಚಿಸುವುದು ಮತ್ತು ಜನಕಲ್ಯಾಣ ಯೋಜನೆಗಳನ್ನು ಹೆಚ್ಚಿಸುವಂತಹ ಉನ್ನತ ಹೂಡಿಕೆಯ ಸೂಚಕಗಳನ್ನು ಬಜೆಟ್ ಎತ್ತಿ ತೋರಿಸಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
Feb 01, 2024, 1:50 pm IST

ಉತ್ತರ ಭಾರತಕ್ಕೆ ದಕ್ಷಿಣದ ಹಣ ಹಂಚಿಕೆ: ಡಿ.ಕೆ.ಸುರೇಶ್‌ ಆಕ್ರೋಶ

ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆ ಆಗುತ್ತಿದೆ. ಇದಕ್ಕೆ ನಾವು ಪ್ರತ್ಯೇಕವಾಗಿ ಧ್ವನಿ ಎತ್ತಬೇಕಾಗುತ್ತದೆ ಎಂದು ಕೇಂದ್ರ ಬಜೆಟ್‌ ಮಂಡನೆಯಾದ ಬೆನ್ನಲ್ಲೇ ಡಿ.ಕೆ.ಸುರೇಶ್‌ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Feb 01, 2024, 1:44 pm IST

ಮಹಿಳೆಯರು ಗಮನಿಸಬೇಕಾದ ಅಂಶಗಳು

ಮಹಿಳೆಯರು ಗಮನಿಸಬೇಕಾದ ಅಂಶಗಳು
83 ಲಕ್ಷ ಎಸ್‌ಎಚ್‌ಜಿಎಸ್‌ 9 ಕೋಟಿ ಮಹಿಳೆಯರಿಗಾಗಿ ಲಕ್‌ಪತಿ ದೀದಿ ಯೋಜನೆ ಜಾರಿ ಮಾಡಲಾಗಿದ್ದು, ಈಗಾಗಲೇ 1 ಕೋಟಿ ಲಕ್‌ಪತಿ ದೀದಿ ಮಹಿಳೆಯರು ಆಗಿದ್ದಾರೆ. ಈ ಒಂದು ಕೋಟಿ ದೀದಿಯರನ್ನು 3 ಕೋಟಿಗೆ ಏರಿಸುವ ಗುರು ಹೊಂದಿದ್ದೇವೆ. ಹಾಗೂ ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಪ್ರಯೋಜನಗಳ ವಿಸ್ತರಿಸಣೆ ಮಾಡಲಾಗುತ್ತದೆ. ಬಾಡಿಗೆ ಮನೆಗಳು, ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಹೊಸ ಮನೆಯನ್ನು ಖರೀದಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೆರವು ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ.
Feb 01, 2024, 1:30 pm IST

ಬಜೆಟ್‌ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಬಜೆಟ್‌ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಬಜೆಟ್‌ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು, ಇದು ದೇಶದ ಭವಿಷ್ಯ ನಿರ್ಮಿಸುವ ಬಜೆಟ್‌ ಆಗಿದ್ದು, ನಂಬಿಕೆಯನ್ನು ಒಳಗೊಂಡಿದೆ. ಬಡವರು ಮಧ್ಯಮ ವರ್ಗದವರಿಗೆ ಈ ಬಜೆಟ್‌ ಸಹಕಾರಿಯಾಗಿದೆ. ಆಯುಷ್ಮಾನ್‌ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದರು. ಹಾಗೆಯೇ ಇದೇ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ತಂಡಕ್ಕೆ ಧನ್ಯವಾದ ಹೇಳಿದರು.
Feb 01, 2024, 1:14 pm IST

ಮೀನುಗಾರರಿಗೆ 55 ಲಕ್ಷ ಉದ್ಯೋಗಗಳ ಸೃಷ್ಟಿ

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಬಡ, ಮಧ್ಯಮ ವರ್ಗದವರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಲ್ಲದೆ ಈ ಯೋಜನೆಯಡಿಯಲ್ಲಿ ಮೀನುಗಾರರಿಗೆ 55 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ.
Feb 01, 2024, 12:59 pm IST

ರೈಲ್ವೆ ಕ್ಷೇತ್ರಕ್ಕೆ ಸಿಕ್ಕಿದ್ದೇನು?

ರೈಲ್ವೆ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ಪಿಎಂ ಗತಿ ಶಕ್ತಿ ಯೋಜನೆ ಮೂಲಕ ಮೂರು (ಎನರ್ಜಿ, ಮಿನರಲ್‌, ಸಿಮೆಂಟ್‌) ಪ್ರಮುಖ ರೈಲ್ವೆ ಕಾರಿಡರ್‌ ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಪೋರ್ಟ್‌ ಕನೆಕ್ಟಿವಿಟಿ ಕಾರಿಡಾರ್‌, ಪ್ರಯಾಣಿಕರ ಸುರಕ್ಷತೆಗಾಗಿ ಮೂರು ಕಾರಿಡಾರ್‌ ನಿರ್ಮಾಣ, ವಂದೇ ಭಾರತ್‌ ಕೋಚ್‌ಗೆ ಬದಲಾವಣೆ ಹಾಗೂ ಸಣ್ಣಪುಟ್ಟ ನಗರಗಳಿಗೂ ಮೆಟ್ರೋ ವಿಸ್ತರಣೆ ಮಾಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Feb 01, 2024, 12:34 pm IST

ಶೇಕಡಾ 3ರಷ್ಟು ತೆರಿಗೆ ಸಂಗ್ರಹ ಹೆಚ್ಚಳ

ನೇರ ತೆರಿಗೆ ಸಂಗ್ರಹ ಪ್ರಮಾಣ ಕಳೆದ 10 ವರ್ಷಗಳಲ್ಲಿ ಶೇಕಡಾ 3ರಷ್ಟು ಹೆಚ್ಚಳ ಆಗಿದೆ. 2024-25ರ ಆರ್ಥಿಕ ವರ್ಷಕ್ಕೆ ತೆರಿಗೆ ಸಂಗ್ರಹ 26.02 ಟ್ರಿಲಿಯನ್ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.
Feb 01, 2024, 12:25 pm IST

ನಾಲ್ಕು ವರ್ಗಗಳ ಕಡೆಗೆ ಆದ್ಯತೆ ನೀಡಲು ಸೂಚನೆ

ನಾಲ್ಕು ವರ್ಗಗಳ ಕಡೆಗೆ ಆದ್ಯತೆ ನೀಡಲು ಸೂಚನೆ
ಕೇಂದ್ರ ಸರ್ಕಾರವು ಬಡವರು, ಮಹಿಳೆಯರು, ಯುವಕರು ಮತ್ತು ರೈತರು ಈ ನಾಲ್ಕು ವರ್ಗಗಳ ಮೇಲೆ ದೃಷ್ಟಿಹರಿಸಬೇಕಿದೆ. ಇವರು ಅಭಿವೃದ್ಧಿಯಾದರೆ ಇಡೀ ದೇಶವೇ ಅಭಿವೃದ್ಧಿ ಆದಂತೆ. ಇದರ ಸಂಕಲ್ಪ ಸರ್ಕಾರದ್ದಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದರು.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+