ಬಜೆಟ್ ನಂತರ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ: ಬಿಜೆಪಿ ನಾಯಕರ ಕಿಡಿ
ದೆಹಲಿ, ಫೆಬ್ರವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬೆನ್ನಲ್ಲೇ, ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್, ಇದೇ ರೀತಿ ಮುಂದುವರಿದರೆ ಪ್ರತ್ಯೇಕ ದೇಶದ ಬೇಡಿಕೆ ಮುಂದಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ದೆಹಲಿಯಲ್ಲಿ ಸಂಸತ್ತಿನ ಹೊರಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ಟೀಕಿಸುವ ಸಂದರ್ಭದಲ್ಲಿ ಸುರೇಶ್ ಈ ಹೇಳಿಕೆ ನೀಡಿದ್ದಾರೆ. ಇದು ಸಕತ್ ಕಿಡಿ ಹಬ್ಬಿಸಿದ್ದು, ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಎಂಪಿ ರೇಣುಕಾಚಾರ್ಯ, ಆರ್. ಅಶೋಕ್, ಸುನೀಲ್ ಕುಮಾರ್ ಅವರಂತಹ ನಾಯಕರು ಭಾರಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬಿಜೆಪಿ ಟೀಕೆ
"ಅಖಂಡ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ಸಿಗರ ಮನಸ್ಥಿತಿ ಇಂದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ದೇಶವನ್ನು ಮತ್ತೊಮ್ಮೆ ವಿಭಜಿಸುವ ಬಹುದೊಡ್ಡ ಷಡ್ಯಂತ್ರ ಸಂಸದ ಡಿ. ಕೆ. ಸುರೇಶ್ ಅವರ ಬಾಯಲ್ಲಿ ಬಂದಿದೆ!. ದೇಶವನ್ನೇ ತುಂಡು ಮಾಡುವ ಮತಾಂಧ ಜಿಹಾದಿಗಳನ್ನು ಬಳಸಿಕೊಂಡು ಅವರನ್ನು ಪೋಷಣೆ ಮಾಡುತ್ತಿರುವ ಕಾಂಗ್ರೆಸ್, ಇಂದು ಜಿಹಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.
ಧರ್ಮದ ಆಧಾರದ ಮೇಲೆ ಭಾರತವನ್ನು ಒಡೆದಾದ ಮೇಲೂ ಕಾಂಗ್ರೆಸ್‌ಗೆ, ದೇಶವನ್ನು ಛಿದ್ರ ಮಾಡುವ ಮಹದಾಸೆ ಈಡೇರದೆ ಇರುವುದೇ ಇಂತಹ ಮತಿಗೇಡಿ ಹೇಳಿಕೆಗಳು ಹೊರ ಬರಲು ಕಾರಣ!" ಎಂದು ಕರ್ನಾಟಕ ಬಿಜೆಪಿ ಖಂಡಿಸಿದೆ.
"ಭಾರತದಲ್ಲಿ ಬದುಕುವ ಇಚ್ಛೆ ಇಲ್ಲದೆ ಇದ್ದರೆ, ದೇಶದ್ರೋಹಿ ಹೇಳಿಕೆಗಳನ್ನು ನೀಡುವುದು ಬಿಟ್ಟು ವಿಶಾಲ ಪ್ರಪಂಚದಲ್ಲಿ ಭಾರತ ಬಿಟ್ಟು ಬೇರೆ ಯಾವುದೇ ದೇಶಕ್ಕೆ ಕಾಂಗ್ರೆಸ್‌ನವರು ತೆರಳಬಹುದು!. ಅದು ಕಾಂಗ್ರೆಸ್ಸಿಗರೇ ಸೃಷ್ಟಿಸಿದ ಪಾಕಿಸ್ಥಾನದಲ್ಲಿ ಕಾಂಗ್ರೆಸ್ಸಿಗರಿಗೆ ರಾಜ ಮರ್ಯಾದೆ ಸಿಕ್ಕರೂ ಸಿಗಬಹುದು!" ಎಂದು ಹೇಳಿದೆ.
ಎಂಪಿ ರೇಣುಕಾಚಾರ್ಯ ಖಂಡನೆ
"ಡಿ.ಕೆ.ಸುರೇಶ್ ಹೇಳಿಕೆಗೆ ಕಾಂಗ್ರೆಸ್ ಬೆಂಬಲವಿದ್ದರೆ ಬಹಿರಂಗವಾಗಿ ಹೇಳಬೇಕು. ಇಲ್ಲದಿದ್ದರೆ ಕೂಡಲೇ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಅಂದು ನೆಹರು ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಮುಂದೊಂದು ದಿನ ಇವರ ಕೈಗೆ ಅಧಿಕಾರ ಸಿಕ್ಕರೆ ಅಖಂಡ ಭಾರತದ ಸ್ಥಿತಿ ಏನಾಗುತ್ತದೆ ಎಂದು ಉಯಿಸಲು ಅಸಾಧ್ಯ?" ಎಂದಿದ್ದಾರೆ.
"ಉತ್ತರ ಭಾರತದ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ತಮ್ಮ ಒಡೆದು ಆಳುವ ನೀತಿಯಿಂದ ದಕ್ಷಿಣ ಭಾರತದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ದುರಾಲೋಚನೆ ಇರಬಹುದು. ಪ್ರಜ್ಞಾವಂತ ಮತದಾರರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು. ಇದು ದೇಶದ ಸಮಸ್ತ ಸ್ವತಂತ್ರ್ಯ ಹೋರಾಟಗಾರರಿಗೆ ಅಪಮಾನ. ಸಂಸದ ಡಿ.ಕೆ.ಸುರೇಶ್ ಭಾರತವನ್ನು ಇಬ್ಭಾಗಿಸಿ ದಕ್ಷಿಣ ಭಾರತ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳಿರುವುದು ಬಾಯ್ತಪ್ಪಿದ ಮಾತಿನಿಂದಲ್ಲ. ಇದು ಕಾಂಗ್ರೆಸ್‍ನ ಗುಪ್ತ ಅಜೆಂಡಾ ಎಂಬುದರಲ್ಲಿ ಎರಡು ಮಾತಿಲ್ಲ" ಎಂದು ಕಿಡಿಕಾರಿದ್ದಾರೆ.

"ಭಾರತ, ಪಾಕಿಸ್ತಾನ ಇಬ್ಭಾಗಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ. ಸ್ವತಂತ್ರ್ಯಪೂರ್ವದಲ್ಲೇ ದೇಶವನ್ನು ವಿಭಜಿಸಿದ ಕಾಂಗ್ರೆಸ್ ಈಗ ಮತ್ತೊಮ್ಮೆ ದೇಶ ಒಡೆಯುವ ಮಾತುಗಳನ್ನು ಹೇಳುತ್ತಿರುವುದು ಅಚ್ಚರಿ ಏನು ಇಲ್ಲ..!. ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ದೇಶ ಒಗ್ಗೂಡುವುದು ಇಷ್ಟವಿಲ್ಲ. ಹೀಗಾಗಿಯೇ ಪದೇಪದೇ ಭಾರತ ವಿಭಜನೆಯ ಮಾತುಗಳನ್ನು ಕನವರಿಕೆ ಮಾಡುತ್ತಲೇ ಇದೆ" ಎಂದು ಟೀಕಿಸಿದ್ದಾರೆ.
ಮಾಜಿ ಸಚಿವ ಆರ್. ಅಶೋಕ್
"ಒಂದು ಕಡೆ ಕಾಂಗ್ರೆಸ್ ನ ನಾಯಕ ಶ್ರೀ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಇತ್ತ ಸಂಸದ ಶ್ರೀ ಡಿ ಕೆ ಸುರೇಶ್ ಅವರು ಭಾರತ್ ತೋಡೋ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯ ಫಲವಾಗಿ ಈಗಾಗಲೇ ಒಮ್ಮೆ ದೇಶ ವಿಭಜನೆ ಅನುಭವಿಸಿದ್ದು, ಈಗ ಮತ್ತೂಮ್ಮೆ ಭಾರತವನ್ನ ಒಡೆಯುವ ಮಾತನಾಡುತ್ತಿದ್ದಾರೆ. ದೇಶದ ಅಖಂಡತೆ, ಸಾರ್ವಭೌಮತೆ ಕಾಪಾಡುವ ಪ್ರಮಾಣ ವಚನ ಸ್ವೀಕರಿಸಿದ ಸಂಸದರೊಬ್ಬರು ಈ ರೀತಿ ಮಾತನಾಡುವುದು ಕಾಂಗ್ರೆಸ್ ಪಕ್ಷದ ವಿಭಜನಕಾರಿ ಮನಸ್ಥಿತಿಯನ್ನ ತೋರಿಸುತ್ತದೆ" ಎಂದು ಹೇಳಿದ್ದಾರೆ.
ಸುನೀಲ್ ಕುಮಾರ್
"ಭಾರತ ಜೋಡೋ ಯಾತ್ರೆಯ ಮುಂಚೂಣಿಯಲ್ಲಿದ್ದ ಸಂಸದ ಡಿ.ಕೆ.ಸುರೇಶ್ ಅವರೇ ಭಾರತ ಥೋಡೋ ಕೆಲಸಕ್ಕೆ ಮುಂದಾಗಿದ್ದಾರೆ.
ದೇಶದ ಅಖಂಡತೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಕಾಂಗ್ರೆಸ್ ನಾಯಕರು ತಲುಪಿರುವುದು ಅಕ್ಷಮ್ಯ ಅಪರಾಧ. ದಕ್ಷಿಣ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಮೂಡಿಸಬೇಕಾಗುತ್ತದೆ ಎಂಬ ದಾಷ್ಟ್ಯವನ್ನು ಸಹಿಸಲಾಗದು" ಎಂದಿದ್ದಾರೆ ಬಿಜೆಪಿ ನಾಯಕ ಸುನೀಲ್ ಕುಮಾರ್.
"ಕಾಂಗ್ರೆಸ್ ಮೈತ್ರಿ ಕೂಟದ ಭಾಗವಾಗಿದ್ದ ಡಿಎಂಕೆ ಸರ್ಕಾರದ ಸಚಿವರೊಬ್ಬರು ಈ ಹಿಂದೆ ಸನಾತನ ಧರ್ಮದ ವಿಚಾರದಲ್ಲಿ ದೇಶವನ್ನು ಒಡೆಯುವ ಮಾತನಾಡಿದ್ದರು. ಈಗ ಡಿ.ಕೆ.ಸುರೇಶ್ ಬಹಿರಂಗವಾಗಿ ದೇಶ ವಿಭಜನೆ ಮಾತನಾಡಿದ್ದಾರೆ. ದೇಶಕ್ಕೆ ಕಾಂಗ್ರೆಸ್ ನಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿತು ಎಂಬುದೊಂದು ಮಿಥ್ಯಾ ವಾದ ಎಂಬುದಕ್ಕೆ ಸುರೇಶ್ ಹೇಳಿಕೆ ಸಾಕ್ಷಿ" ಎಂದು ತಿಳಿಸಿದ್ದಾರೆ.












Click it and Unblock the Notifications