ದಕ್ಷಿಣ ರಾಜ್ಯಗಳಿಗೆ ಅನ್ಯಾಯ: 'ಪ್ರತ್ಯೇಕ ರಾಷ್ಟ್ರ'ದ ಕುರಿತು ಸಂಸದ ಡಿಕೆ ಸುರೇಶ್ ಸ್ಪೋಟಕ ಹೇಳಿಕೆ
ದೆಹಲಿ, ಫೆಬ್ರವರಿ 01: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರು ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರವು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದು,ಇಂದಿನ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದ್ರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರದ ಮಧ್ಯಂತರ ಬಜೆಟ್ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಸುರೇಶ್, ಇಂದು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನ ಉತ್ತರ ಭಾರತಕ್ಕೆ ಬಿಡುತ್ತಿದ್ದಾರೆ.ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಸಂಸದ ಡಿ ಕೆ ಸುರೇಶ್ ಗರಂ ಆಗಿದ್ದಾರೆ.

ನಾವು ನಮ್ಮ ಸರಿಯಾದ ಹಣವನ್ನು ಮಾತ್ರ ಬೇಡಿಕೆ ಮಾಡುತ್ತಿದ್ದೇವೆ. ದಕ್ಷಿಣ ಭಾರತದ ರಾಜ್ಯಗಳಿಗೆ ಜಿಎಸ್‌ಟಿ ಮತ್ತು ನೇರ ತೆರಿಗೆಯ ಸರಿಯಾದ ಪಾಲನ್ನು ಕೇಂದ್ರವು ಸರಿಯಾಗಿ ನೀಡುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳು ಅನ್ಯಾಯವನ್ನು ಎದುರಿಸುತ್ತಿವೆ. ದಕ್ಷಿಣ ರಾಜ್ಯಗಳಿಂದ ಸಂಗ್ರಹಿಸುವ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ನೀಡಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಪ್ರತ್ಯೇಕ ದೇಶದ ಬೇಡಿಕೆಗೆ ಒತ್ತಾಯಿಸಲಾಗುವುದು ಎಂದು ಸುರೇಶ್ ಹೇಳಿದರು.
ಪ್ರಸ್ತುತ ವಿವಿಧ ರಾಜ್ಯಗಳಿಗೆ ಹಣ ಹಂಚಿಕೆ ಸರಿಯಲ್ಲ ಎಂದು ಕಾಂಗ್ರೆಸ್ ಸಂಸದರು ಹೇಳಿದರು. ದೇಶದ ವಿವಿಧ ರಾಜ್ಯಗಳಿಗೆ ಹೇಗೆ ಹಣ ಹಂಚಿಕೆಯಾಗಿದೆ ಎಂಬುದನ್ನು ನೋಡಿದರೆ ನಮ್ಮ ರಾಜ್ಯಗಳ ಹಣವನ್ನು ಉತ್ತರದ ರಾಜ್ಯಗಳಿಗೆ ಹರಿಸುತ್ತಿರುವುದು ಸ್ಪಷ್ಟವಾಗುತ್ತದೆ.
ಇದರಿಂದ ನಮಗೆ ಅನ್ಯಾಯವಾಗಿದೆ. ಕೇಂದ್ರವು ನಮ್ಮಿಂದ 4 ಲಕ್ಷ ಕೋಟಿಗೂ ಅಧಿಕ ಹಣವನ್ನು ಪಡೆಯುತ್ತಿದ್ದು, ಅದಕ್ಕೆ ಪ್ರತಿಯಾಗಿ ನಾವು ಪಡೆಯುತ್ತಿರುವುದು ಅತ್ಯಲ್ಪ. ಇದನ್ನು ನಾವು ಪ್ರಶ್ನಿಸಬೇಕಾಗಿದೆ. ಇದನ್ನು ಸರಿಪಡಿಸದಿದ್ದಲ್ಲಿ ದಕ್ಷಿಣದ ಎಲ್ಲಾ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹಿಸಿ ಧ್ವನಿ ಎತ್ತಬೇಕಾಗುತ್ತದೆ ಎಂದು ಸುರೇಶ್ ಹೇಳಿದರು.
15ನೇ ಹಣಕಾಸು ಆಯೋಗದ ಶಿಫಾರಸ್ಸು ಮಾಡಿರುವ ಅನುದಾನವೂ ರಾಜ್ಯಕ್ಕೆ ಬಂದಿಲ್ಲ. ಇದು ಚುನಾವಣಾ ಬಜೆಟ್ ಆಗಿದ್ದು, ಇದರಲ್ಲಿ ಹೊಸದೇನೂ ಇಲ್ಲ.ಇದು ಚುನಾವಣಾ ಬಜೆಟ್. ಮಧ್ಯಂತರ ಬಜೆಟ್‌ನಲ್ಲಿ ಹೆಸರು ಮಾತ್ರ ಬದಲಾವಣೆ ಮಾಡಲಾಗಿದೆ. ಅವರು ಕೆಲವು ಸಂಸ್ಕೃತ ಹೆಸರುಗಳನ್ನು ಪರಿಚಯಿಸಿದ್ದಾರೆ ಮತ್ತು ಯೋಜನೆಗಳನ್ನು ಪರಿಚಯಿಸಿದ್ದಾರೆ ಎಂದು ಡಿ ಕೆ ಸುರೇಶ್ ಹೇಳಿದರು.












Click it and Unblock the Notifications