Budget 2024: ರೈತರು, ಬಡವರ ಪರಿಸ್ಥಿತಿ ಸುಧಾರಿಸುವತ್ತ ಸರ್ಕಾರದ ಗಮನ: ಕೇಂದ್ರ ಬಜೆಟ್‌ನ ಪ್ರಮುಖಾಂಶಗಳೇನು?
ನವದೆಹಲಿ, ಫೆಬ್ರವರಿ 1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ 2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ.
ಈ ಬಾರಿ ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ಜನವರಿ 31ರಿಂದ ಫೆಬ್ರವರಿ 9 ರ ನಡುವೆ ಸಣ್ಣ ಅಧಿವೇಶನ ನಡೆಯುತ್ತಿದ್ದು, ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್‌ಅನ್ನು ಮಂಡಿಸಿದ್ದಾರೆ. ನರೇಂದ್ರ ಮೋದಿ ಎರಡನೇ ಅವಧಿ ಸರ್ಕಾರದ ಕೊನೆಯ ಬಜೆಟ್ ಅನ್ನು ಮಂಡಿಸುವಾಗ ಭಾರತದ ಆರ್ಥಿಕತೆಯು ಆಳವಾಗಿ ಪರಿವರ್ತನೆಯ ಮೂಲಕ ಸಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಪರಿಸ್ಥಿತಿಗಳನ್ನು ಸುಧಾರಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸಿದ್ದು, ಈ ನಾಲ್ಕು ವರ್ಗಗಳ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ನಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ 2024 ಭಾಷಣದಲ್ಲಿ ಹೇಳಿದರು.
ಬಜೆಟ್ 2024ರ ಪ್ರಮುಖಾಂಶಗಳು
*ಬಡ ಮತ್ತು ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರದ ಬಜೆಟ್ನಿಂದ ಬಂಪರ್
*ಬಡವರು ಹೊಸ ಮನೆ ಖರೀದಿಸಲು ಪಿಎಂ ಆವಾಸ್ ಯೋಜನೆ ಅಡಿ ನೆರವು
*2025ರ ವೇಳೆಗೆ ಲಕ್ಷಾಂತರ ಮಹಿಳೆಯರನ್ನ ಲಕ್ಷಾಧಿಪತಿಗಳನ್ನಾಗಿ ಮಾಡುವ ಗುರಿ
*ಆವಾಸ್ ಯೋಜನೆಯಡಿ ಮಹಿಳೆಯರಿಗೆ ಶೇ.70 ರಷ್ಟು ಮನೆ
*ಪಿಎಂ ಸೂಕ್ಷ್ಮ ಖಾದ್ಯ ಪ್ರಸಂಸ್ಕರಣ ಉದ್ಯಮದಿಂದ 2.4 ಲಕ್ಷ SHGಗೆ ನೆರವು
*ಮೆಟ್ರೋ ರೈಲು ಮತ್ತು ನಮೋ ಭಾರತ್ ಅಭಿವೃದ್ಧಿಗೆ ನೆರವು
*ಇ-ವಾಹನಗಳ ನಿರ್ಮಾಣ, ಚಾರ್ಜಿಂಗ್ಗೆ ಇಕೋ ಸಿಸ್ಟಮ್ ವಿಸ್ತರಣೆ
*ಲಕ್ಷದ್ವೀಪ ಸೇರಿದಂತೆ ದ್ವೀಪಗಳಲ್ಲಿ ಪ್ರವಾಸೋದ್ಯಮ ಯೋಜನೆಗಳು
*ವಾರ್ಷಿಕ 7 ಲಕ್ಷ ರೂಪಾಯಿ ವರೆಗೆ ತೆರಿಗೆಯಲ್ಲಿ ಯಾವುದೇ ವಿನಾಯತಿ ಇಲ್ಲ
*40 ಸಾವಿರ ರೈಲ್ವೆ ಕೋಚ್ಗಳ ಬದಲಾವಣೆಗೆ ಕ್ರಮ
*2024-25ರಲ್ಲಿ ಸರ್ಕಾರಕ್ಕೆ ಆದಾಯ 30.80 ಲಕ್ಷ ಕೋಟಿ ರೂ. ನಿರೀಕ್ಷೆ
*ಸರ್ಕಾರ 10 ವರ್ಷಗಳಲ್ಲಿ 250 ಮಿಲಿಯನ್ ಜನರನ್ನು ಬಡತನದಿಂದ ಹೊರತಂದಿದೆ
*ನೇರ ಮತ್ತು ಪರೋಕ್ಷ ಎರಡು ತೆರಿಗೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ
*ಟೂರಿಸಂ ಅಭಿವೃದ್ಧಿ ಮಾಡೋರಿಗೆ ಬಡ್ಡಿ ರಹಿತ ಸಾಲ
*ಸಕ್ಷಮ ಅಂಗನವಾಡಿ ಮತ್ತು ಪೋಷಣೆ 2.O ಅಡಿ ಪೌಷ್ಠಿಕ ಆಹಾರಕ್ಕೆ ಉತ್ತೇಜನ
*ಮುಂದಿನ 5 ವರ್ಷಗಳಲ್ಲಿ ಬಡವರಿಗಾಗಿ ಒಟ್ಟು 3 ಕೋಟಿ ಮನೆಗಳು ನಿರ್ಮಾಣ
*3 ಪ್ರಮುಖ ರೈಲ್ವೆ ಕಾರಿಡಾರ್ಗಳ ನಿರ್ಮಾಣ
*ಪರಿಷ್ಕೃತ ವಿತ್ತೀಯ ಕೊರತೆ: ಸರ್ಕಾರದ ಆದಾಯ ಮತ್ತು ವೆಚ್ಚಗಳ ನಡುವಿನ ಅಂತರ 2023-24 (FY24) ರಲ್ಲಿ ಜಿಡಿಪಿಯ 5.8% ರಷ್ಟಿದೆ. 2025 ರಲ್ಲಿ ಹಣಕಾಸಿನ ಕೊರತೆಯು ಜಿಡಿಪಿಯ 5.1% ಎಂದು ನಿರೀಕ್ಷಿಸಲಾಗಿದೆ. 2025-26 (FY26) ನಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ 4.5% ಕ್ಕಿಂತ ಕಡಿಮೆಗೊಳಿಸುವುದು ಗುರಿಯಾಗಿದೆ.
*ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ತೆರಿಗೆ ಸಲ್ಲಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ. ನೇರ ತೆರಿಗೆ ಸಂಗ್ರಹವು 2014 ರಿಂದ ಮೂರು ಪಟ್ಟು ಹೆಚ್ಚಾಗಿದೆ. 2024-25 ರಲ್ಲಿ ತೆರಿಗೆ ಸ್ವೀಕೃತಿಗಳು 26.02 ಲಕ್ಷ ಕೋಟಿ ರೂ. ನಷ್ಟಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು
*2047 ರ ವೇಳೆಗೆ ಭಾರತವನ್ನು 'ವಿಕ್ಷಿತ್ ಭಾರತ್' ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ನಮ್ಮ ಗಮನ ಸಬ್ಕಾ ಸಾಥ್, ಸಬ್ಕಾ ವಿಕಾಸ್" ಎಂದು ಹೇಳಿದರು.












Click it and Unblock the Notifications