68ನೇ ವಯಸ್ಸಿನಲ್ಲಿ ಈಜು ಕಲಿತು ಬರೋಬ್ಬರಿ 170 ಪದಕ ಗೆದ್ದ 81 ವರ್ಷದ ವೆಂಕಟ ಸುಬ್ಬಲಕ್ಷ್ಮಿ ಸಾಧನೆಯ ಕಥೆ

ಜೀವನದಲ್ಲಿ ಎನ್ನನ್ನಾದರೂ ಸಾಧನೆ ಮಾಡಲು ವಯಸ್ಸು ಕೇವಲ ಒಂದು ನಂಬರ್‌ ಮಾತ್ರ ಎಂಬ ಈ ಮಾತನ್ನಾ ನಾವೆಲ್ಲ ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ, ಆಂಧ್ರಪ್ರದೇಶದ ಅಮಲಾಪುರಂ ನಿವಾಸಿ ವೆಂಕಟ ಸುಬ್ಬಲಕ್ಷ್ಮಿ ಅವರು ಈ ಮಾತನ್ನ ಅಕ್ಷರಶಃ ಸಾಬೀತುಪಡಿಸಿದ್ದಾರೆ.

60 ವರ್ಷ ದಾಟಿದರೆ ಸಾಕು, ಮೈಕೈ ನೋವು ಎಂದು ಮನೆಯಲ್ಲಿ ಕುಳಿತುಕೊಳ್ಳುವವರೇ ಹೆಚ್ಚು. ಆದರೆ, ಇವರು ವೆಂಕಟಮ್ಮ ತಮ್ಮ 68ನೇ ವಯಸ್ಸಿನಲ್ಲಿ ಮೊಮ್ಮಗನ ಸವಾಲನ್ನ ಸ್ವೀಕರಿಸಿ ಮೊದಲ ಬಾರಿಗೆ ಸ್ವಿಮ್ಮಿಂಗ್ ಪೂಲ್‌ಗೆ ಇಳಿದರು. ಇಂದು 81ನೇ ವಯಸ್ಸಿನಲ್ಲಿ ಬರೋಬ್ಬರಿ 170ಕ್ಕೂ ಹೆಚ್ಚು ಪದಕಗಳನ್ನ ಕೊರಳಿಗೆ ಹಾಕಿಕೊಂಡು ಜಗತ್ತಿಗೇ ಮಾದರಿಯಾಗಿದ್ದಾರೆ. ಇದು ಕೇವಲ ಕ್ರೀಡಾ ಸಾಧನೆಯಲ್ಲ, ಬದಲಾಗಿ ಛಲವಿದ್ದರೆ ವಯಸ್ಸು ಯಾವುದಕ್ಕೂ ಅಡ್ಡಿಯಾಗುವುದಿಲ್ಲ ಎಂದು ಸಾರುವ ಸ್ಫೂರ್ತಿಯ ಕಥೆ.

Inspiring Story 81 Year Old Venkata Subbalaxmi Wins 170 Medals After Taking Up Swimming at 68

ಮೊಮ್ಮಗನ ಸವಾಲು ಮತ್ತು ಸ್ವಿಮ್ಮಿಂಗ್ ಪೂಲ್‌ಗೆ ಎಂಟ್ರಿ

ವೃತ್ತಿಯಲ್ಲಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವೆಂಕಟ ಸುಬ್ಬಲಕ್ಷ್ಮಿ ಅವರು ನಿವೃತ್ತಿ ಜೀವನ ನಡೆಸುತ್ತಿದ್ದರು. ಒಂದು ದಿನ ಅವರ ಮೊಮ್ಮಗ ತಮಾಷೆಯಾಗಿ "ನನ್ನ ಜೊತೆ ಈಜಲು ಬರುತ್ತೀರಾ?" ಎಂದು ಸವಾಲು ಹಾಕಿದ್ದ. ಆ ಸವಾಲನ್ನ ನಕ್ಕು ಸುಮ್ಮನಾಗದ ಸುಬ್ಬಲಕ್ಷ್ಮಿ ಅವರು, ಅದನ್ನ ಗಂಭೀರವಾಗಿ ಪರಿಗಣಿಸಿದರು.

ಅಂದು ತಮ್ಮ 68ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಈಜಲು ಬೇಕಾದ ಸರಿಯಾದ ಉಡುಗೆ ಹಾಕಿಕೊಂಡು ಸ್ವಿಮ್ಮಿಂಗ್ ಪೂಲ್‌ಗೆ ಧುಮುಕಿದರು. ತಮಾಷೆಗಾಗಿ ಅಥವಾ ಮೊಮ್ಮಗನ ಮೇಲಿನ ಪ್ರೀತಿಗಾಗಿ ಶುರುವಾದ ಈ ಆಟ, ಅವರ ಬದುಕಿನ ಹೊಸ ತಿರುವಿಗೆ ಕಾರಣವಾಯಿತು.

ಕೇವಲ ಒಂದು ವರ್ಷದಲ್ಲಿ ಎಲ್ಲಾ ಶೈಲಿಯ ಈಜು ಕರಗತ

ಆರಂಭದಲ್ಲಿ ಈಜು ಕಲಿಯುವುದು ಕಷ್ಟವೆನಿಸಿದರೂ ಸುಬ್ಬಲಕ್ಷ್ಮಿ ಅವರು ಛಲ ಬಿಡಲಿಲ್ಲ. ಕೇವಲ 6 ತಿಂಗಳ ಪರಿಶ್ರಮದಿಂದ ಅವರು ಪೂಲ್‌ನಲ್ಲಿ ಸರಾಗವಾಗಿ ಈಜಲು ಆರಂಭಿಸಿದರು. ಒಂದು ವರ್ಷ ಕಳೆಯುವಷ್ಟರಲ್ಲಿ, ಬಟರ್‌ಫ್ಲೈ, ಬ್ಯಾಕ್‌ಸ್ಟ್ರೋಕ್, ಬ್ರೆಸ್ಟ್‌ಸ್ಟ್ರೋಕ್ ಹಾಗೂ ಫ್ರೀಸ್ಟೈಲ್‌ನಂತಹ ಎಲ್ಲಾ ಕಠಿಣ ಈಜು ಶೈಲಿಗಳನ್ನ ಅವರು ಕಲಿತುಕೊಂಡರು.

ವೆಂಕಟ ಸುಬ್ಬಲಕ್ಷ್ಮಿ ಅವರಲಿದ್ದ ಈ ಆಸಕ್ತಿ ಮತ್ತು ಶ್ರಮವನ್ನ ಕಂಡ ಕೋಚ್, "ನೀವು ಸ್ಪರ್ಧೆಗಳಲ್ಲಿ ಏಕೆ ಭಾಗವಹಿಸಬಾರದು?" ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಅವರು "ಏಕೆ ಭಾಗವಹಿಸಬಾರದು, ಖಂಡಿತ ಮಾಡುವೆ" ಎಂದು ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದರು.

170ಕ್ಕೂ ಹೆಚ್ಚು ಪದಕಗಳ ಬೇಟೆ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟು

ಒಮ್ಮೆ ಸ್ಪರ್ಧೆಗಿಳಿದ ಸುಬ್ಬಲಕ್ಷ್ಮಿ ಅವರು ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಇಂದು ತಮ್ಮ 81ನೇ ವಯಸ್ಸಿನಲ್ಲಿ ಅವರು 170ಕ್ಕೂ ಹೆಚ್ಚು ಪದಕಗಳನ್ನ ಗೆದ್ದುಕೊಂಡಿದ್ದಾರೆ. ವಿಶೇಷವೆಂದರೆ, ಅವರು ಕೇವಲ ಈಜಿನಲ್ಲಿ ಮಾತ್ರವಲ್ಲದೆ, ಅಥ್ಲೆಟಿಕ್ಸ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಟ್ರಿಪಲ್ ಜಂಪ್, ಲಾಂಗ್ ಜಂಪ್ ಹಾಗೂ ಸ್ಪ್ರಿಂಟಿಂಗ್‌ನಂತಹ ಕಠಿಣ ಕ್ರೀಡೆಗಳಲ್ಲೂ ಭಾಗವಹಿಸಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಭಾರತವನ್ನು ಪ್ರತಿನಿಧಿಸಿ 5ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ಇವರು, ಈಗಲೂ ಪ್ರತಿದಿನ ತಪ್ಪದೆ ಅಭ್ಯಾಸ ಮಾಡುತ್ತಾರೆ.

ವಯಸ್ಸು ದೇಹಕ್ಕೇ ಹೊರತು ಮನಸ್ಸಿಗಲ್ಲ

ತಮ್ಮ ಈ ಅಸಾಧಾರಣ ಸಾಧನೆಯ ಬಗ್ಗೆ ಎಬಿಎನ್ ವಾಹಿನಿಯೊಂದಿಗೆ ಮಾತನಾಡಿದ್ದ ಸುಬ್ಬಲಕ್ಷ್ಮಿ ಅವರು, "ವಯಸ್ಸಾಗುವುದು ಕೇವಲ ನಮ್ಮ ದೇಹಕ್ಕೆ ಮಾತ್ರ, ಮನಸ್ಸಿಗಲ್ಲ" ಎಂದು ಅತ್ಯಂತ ಉತ್ಸಾಹದಿಂದ ಹೇಳಿದ್ದಾರೆ. ಯಾವುದೇ ಹೊಸ ಕೆಲಸವನ್ನ ಪ್ರಾರಂಭಿಸಲು ನನಗೆ ವಯಸ್ಸಾಯಿತು, ಕಾಲ ಮಿಂಚಿಹೋಯಿತು ಎಂದು ಯೋಚಿಸುವ ಪ್ರತಿಯೊಬ್ಬರಿಗೂ ಸುಬ್ಬಲಕ್ಷ್ಮಿ ಅವರ ಬದುಕು ಒಂದು ಪಾಠವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+