ಇಂದೋರ್ ಮಾರ್ಚ್ 30: ರಾಮನವಮಿ ದಿನ ಮಧ್ಯಪ್ರದೇಶದ ಇಂದೋರ್ನ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಭಾರಿ ಅವಘಡ ಸಂಭವಿಸಿದೆ. ಪಟೇಲ್ ನಗರ ಪ್ರದೇಶದಲ್ಲಿ ಬಾವಿಯ ಮೇಲ್ಛಾವಣಿ ಕುಸಿದು 25 ಕ್ಕೂ ಹೆಚ್ಚು ಜನರು ಬಾವಿಗೆ ಬಿದ್ದಿದ್ದಾರೆ. ಬಾವಿಗೆ ಬಿದ್ದವರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ. ರಾಮನವಮಿಯಂದು ದೇವಸ್ಥಾನದಲ್ಲಿ ಭಕ್ತರ ದಂಡೇ ನೆರೆದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಬಾವಿಯಲ್ಲಿ ಬಿದ್ದವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ.
#WATCH | Madhya Pradesh: Many feared being trapped after a stepwell at a temple collapsed in Patel Nagar area in Indore.
ವರದಿಗಳ ಪ್ರಕಾರ, ರಾಮ ನವಮಿಯಂದು ಪಟೇಲ್ ನಗರದ ದೇವಸ್ಥಾನದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಮಧ್ಯಾಹ್ನ 12 ಗಂಟೆಗೆ ಈ ಘಟನೆ ಸಂಭವಿಸಿದೆ. ಇಂದೋರ್ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದ್ದಾರೆ. ವಿಡಿಯೊ ದೃಶ್ಯಾವಳಿಗಳಲ್ಲಿ, ಪೊಲೀಸರು ಹಗ್ಗಗಳನ್ನು ಬಳಸಿ ಜನರನ್ನು ಹೊರಗೆಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಇದುವರೆಗೆ ಐವರನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲ ಜನರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆಡಳಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಅಪಘಾತದ ನಂತರ ದೇವಾಲಯವನ್ನು ತೆರವು ಮಾಡಲಾಗಿದ್ದು, ಜನರು ದೇವಾಲಯದ ಆವರಣಕ್ಕೆ ಪ್ರವೇಶಿಸದಂತೆ ಸ್ಥಳದಲ್ಲಿ ಪೊಲೀಸ್ ತಂಡವನ್ನು ಸಹ ನಿಯೋಜಿಸಲಾಗಿದೆ. ರಕ್ಷಿಸಲ್ಪಟ್ಟವರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಘಟನೆಯ ಬಗ್ಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಇಂದೋರ್ ಜಿಲ್ಲಾಧಿಕಾರಿ ಮತ್ತು ಇಂದೋರ್ ಆಯುಕ್ತರಿಗೆ ಸಿಎಂ ಚೌಹಾಣ್ ಸೂಚನೆ ನೀಡಿದ್ದಾರೆ. "ಸಿಎಂಒ ಇಂದೋರ್ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಂದೋರ್ ಪೊಲೀಸ್ ಮತ್ತು ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಭಕ್ತರನ್ನು ಸ್ಥಳಾಂತರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೆಲವರನ್ನು ರಕ್ಷಿಸಲಾಗಿದೆ" ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
"ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಿಂದ ಸುಮಾರು 19 ಜನರನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು, ಜಿಲ್ಲಾಡಳಿತ ಮತ್ತು ಎಸ್ಡಿಆರ್ಎಫ್ ತಂಡಗಳು ಸ್ಥಳದಲ್ಲಿದ್ದು ಹಲವಾರು ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ" ಎಂದು ಅದು ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಸಚಿವ ನರೋತಮ್ ಮಿಶ್ರಾ, ದುರ್ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 11 ಮೃತದೇಹಗಳನ್ನು (10 ಮಹಿಳೆ ಮತ್ತು ಒಬ್ಬ ಪುರುಷ) ಸ್ಥಳದಿಂದ ಹೊರತೆಗೆಯಲಾಗಿದ್ದು, 19 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಿದವರಲ್ಲಿ ಇಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಮಾಹಿತಿಯ ಪ್ರಕಾರ, ದೇವಸ್ಥಾನದ ಒಳಗೆ ಭಕ್ತರು ಬಾವಿಯ ಮೇಲೆ ನಿಂತಿದ್ದಾಗ ಅದರ ಹೊದಿಕೆ ಕುಸಿದಿದೆ. ಬಾವಿಯೊಳಗೆ ಇನ್ನೂ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘಟನೆಯಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ಹಾಗೂ ಗಾಯಗೊಂಡವರಿಗೆ 50,000 ಪರಿಹಾರ ಘೋಷಣೆ ಮಾಡಿದ್ದಾರೆ.
Indore:On the day of Ram Navami, a major accident took place at the Beleshwar Mahadev Julelal Temple in Indore, Madhya Pradesh. More than 25 people fell into the well after the roof of the well collapsed in Patel Nagar area.