ಸನಾತನ ಧರ್ಮವನ್ನು ನಾಶಮಾಡಲು ವಿರೋಧ ಪಕ್ಷಗಳು ಬಯಸುತ್ತಿವೆ: ಪ್ರಧಾನಿ ಮೋದಿ ತೀಕ್ಷ್ಣ ವಾಗ್ದಾಳಿ
ನವದೆಹಲಿ, ಸೆಪ್ಟೆಂಬರ್ 14: ಸನಾತನ ಧರ್ಮವನ್ನು ನಾಶಮಾಡಲು ವಿರೋಧ ಪಕ್ಷಗಳು ಬಯಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದ ಬಿನಾದಲ್ಲಿ ಇಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಹರಿಹಾಯ್ದರು.
ಪ್ರತಿಪಕ್ಷಗಳ ಒಕ್ಕೂಟ 'ಇಂಡಿಯಾ' ಮೈತ್ರಿಕೂಟವನ್ನು ಕಟುವಾಗಿ ಟೀಕಿಸಿದ ಮೋದಿ, 'ಅವರು ( ಇಂಡಿಯಾ ಮೈತ್ರಿಕೂಟ ) ಈ ದೇಶದಿಂದ ಸನಾತನ ಸಂಸ್ಕೃತಿಯನ್ನು ಅಳಿಸಲು ಬಯಸುತ್ತಾರೆ' ಎಂದು ಹೇಳಿದರು.

'ಇಂಡಿಯಾ' ಮೈತ್ರಿಕೂಟಕ್ಕೆ ನಾಯಕರಿಲ್ಲ. ಅವರು ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಗುಪ್ತ ಕಾರ್ಯಸೂಚಿಯನ್ನು ಸಹ ನಿರ್ಧರಿಸಿದ್ದಾರೆ. 'ಇಂಡಿಯಾ' ಒಕ್ಕೂಟವು ಸನಾತನ ಸಂಸ್ಕೃತಿಯನ್ನು ಕೊನೆಗಾಣಿಸುವ ಸಂಕಲ್ಪದೊಂದಿಗೆ ಬಂದಿದೆ ಎಂದು ಪ್ರಧಾನಿ ಆರೋಪಿಸಿದರು.
ಸ್ವಾಮಿ ವಿವೇಕಾನಂದರು ಮತ್ತು ಲೋಕಮಾನ್ಯ ತಿಲಕರಿಗೆ ಸ್ಫೂರ್ತಿ ನೀಡಿದ ಸನಾತನ ಧರ್ಮವನ್ನು 'ಇಂಡಿಯಾ' ಮೈತ್ರಿಯ ಜನರು ಅಳಿಸಲು ಬಯಸುತ್ತಾರೆ. ಈ ಮೈತ್ರಿಯು ಸನಾತನ ಧರ್ಮವನ್ನು ನಾಶಮಾಡಲು ಬಯಸುತ್ತದೆ. ಇಂದು ಬಹಿರಂಗವಾಗಿ ಸನಾತನವನ್ನು ಗುರಿಯಾಗಿಸಲು ಆರಂಭಿಸಿದ್ದಾರೆ. ನಾಳೆ ನಮ್ಮ ಮೇಲೆ ದಾಳಿಯನ್ನು ಹೆಚ್ಚಿಸುತ್ತಾರೆ. ದೇಶಾದ್ಯಂತ ಇರುವ ಎಲ್ಲಾ ಸನಾತನಿಗಳು ಮತ್ತು ನಮ್ಮ ದೇಶವನ್ನು ಪ್ರೀತಿಸುವ ಜನರು ಎಚ್ಚರವಾಗಿರಬೇಕು. ಅಂತಹವರನ್ನು ನಾವು ತಡೆಯಬೇಕು ಎಂದು ತಿಳಿಸಿದರು.

ರಾಜ್ಯದ ಜನರನ್ನು ಭೇಟಿ ಮಾಡಲು ನನಗೆ ಅವಕಾಶ ನೀಡಿದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ಸರ್ಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಂದು 50,000 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದೇವೆ. ನಮ್ಮ ದೇಶದ ಹಲವಾರು ರಾಜ್ಯಗಳ ಬಜೆಟ್ ಕೂಡ 50,000 ಕೋಟಿ ರೂ. ಆಗಿದೆ ಎಂದು ಮೋದಿ ಹೇಳಿದರು.
ಅದು ದೆಹಲಿ ಅಥವಾ ಭೋಪಾಲ್ ಆಗಿರಲಿ, ನಮ್ಮ ಸರ್ಕಾರ ಬಡವರ ಮನೆ ಬಾಗಿಲಿಗೆ ತಲುಪಿ ಅವರಿಗೆ ಸೇವೆ ಸಲ್ಲಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ಒದಗಿಸಿದ್ದೇವೆ. ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗಿಲ್ಲವೆಂಬುದನ್ನು ನಾವು ಖಚಿತಪಡಿಸಿದ್ದೇವೆ ಎಂದು ತಿಳಿಸಿದರು.
'ನನ್ನ ಪ್ರೀತಿಯ ಕುಟುಂಬದ ಸದಸ್ಯರೇ, ನಮ್ಮ ಸರ್ಕಾರವು ದೇಶದ ಪ್ರತಿಯೊಂದು ಮನೆಗೂ ಸಮೃದ್ಧಿಯನ್ನು ತರಲು ಪ್ರಯತ್ನಿಸುತ್ತಿದೆ. ಮಧ್ಯಪ್ರದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಮನೆಗಳನ್ನು ಹೊಂದಿವೆ. ಶೌಚಾಲಯದ ಭರವಸೆ ಈಡೇರಿಸಿದ್ದೇವೆ' ಎಂದು ಹೇಳಿದರು.
ಅದೇ ರೀತಿ ಬ್ಯಾಂಕ್ ಖಾತೆಗಳು, ಎಲ್‌ಪಿಜಿ ಗ್ಯಾಸ್‌ನಂತಹ ಎಲ್ಲಾ ಭರವಸೆಗಳನ್ನು ನಾವು ಈಡೇರಿಸಿದ್ದೇವೆ. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನೂ ಕಡಿಮೆ ಮಾಡಿದ್ದೇವೆ. ನಮ್ಮ ಕಲ್ಯಾಣ ಯೋಜನೆಗಳ ಭಾಗವಾಗಿ ಸುಮಾರು 75 ಲಕ್ಷ ಕುಟುಂಬಗಳನ್ನು ಉಜ್ವಲ ಯೋಜನೆಯ ಅಡಿಯಲ್ಲಿ ತರಲಾಗುವುದು ಎಂದು ಅವರು ಭರವಸೆ ನೀಡಿದರು.
ಮಧ್ಯವರ್ತಿಗಳನ್ನು ತೊಲಗಿಸಿ ಜನರಿಗೆ ನೇರ ಅನುಕೂಲ ಕಲ್ಪಿಸಿದ್ದೇವೆ. ಈ ಯೋಜನೆಯಿಂದ ಲಕ್ಷಾಂತರ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ಮೋದಿ ತಿಳಿಸಿದರು.
ಜಿ20 ಶೃಂಗಸಭೆಯ ಯಶಸ್ಸಿನ ಶ್ರೇಯಸ್ಸು 140 ಕೋಟಿ ಭಾರತೀಯರಿಗೆ ಸಲ್ಲುತ್ತದೆ. ಇದು ನಮ್ಮ ದೇಶದ ಸಾಮೂಹಿಕ ಶಕ್ತಿಗೆ ಸಾಕ್ಷಿಯಾಗಿದೆ. ಜಿ20 ಪ್ರತಿನಿಧಿಗಳು ನಮ್ಮ ದೇಶದ ವೈವಿಧ್ಯತೆ ಮತ್ತು ಪರಂಪರೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.












Click it and Unblock the Notifications