ಲೋಕಾರ್ಪಣೆಗೆ ಸಿದ್ಧವಾಯ್ತು ದೇಶದ ಅತಿ ಉದ್ದದ ಸಮುದ್ರ ಸೇತುವೆ: ಇದಕ್ಕೆ ತಗುಲಿದ ವೆಚ್ಚ ಎಷ್ಟು ಸಾವಿರ ಕೋಟಿ ಗೊತ್ತಾ?
ಮುಂಬೈ, ಜನವರಿ, 01: ಇದು ದೇಶದ ಅತೀ ಉದ್ದದ ಸಮುದ್ರ ಸೇತುವೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಗಾದರೆ ಈ ಸೇತುವೆ ಎಲ್ಲಿದೆ ಹಾಗೂ ಉದ್ಘಾಟನೆ ದಿನಾಂಕ, ವೆಚ್ಚ ಹಾಗೂ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೇಶದಲ್ಲಿ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಹಿತಿ ನೀಡಿದ್ದಾರೆ. ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ 21.8 ಕಿಲೋ ಮೀಟರ್ ಉದ್ದದ ಈ ಸೇತುವೆಯು ಪ್ರಸ್ತುತ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 12ರಂದು ಇದನ್ನು ಉದ್ಘಾಟನೆ ಮಾಡಲಿದ್ದು, ಈ ಸೇತುವೆಯಿಂದ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಶಿಂಧೆ ಮಾಧ್ಯಮಗಳಿಗೆ ತಿಳಿಸಿದರು.
ರಾಜ್ಯದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೆ MTHL ಮತ್ತಷ್ಟು ಸಂಪರ್ಕ ಕಲ್ಪಿಸಲಿದ್ದು, ಇದು 6 ಲೇನ್ ಮಾರ್ಗ ಹೊಂದಿದೆ. ಸಮುದ್ರದ ಮೇಲೆ 16.50 ಕಿಲೋ ಮೀಟರ್ ಮತ್ತು ಪ್ರದೇಶದಲ್ಲಿ 5.50 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಈ ಸೇತುವೆಗೆ "ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು" ಎಂದು ಹೆಸರನ್ನು ಇಡಲಾಗುತ್ತದೆ ಎನ್ನುವ ಮಾಹಿತಿ ತಿಳಿಯಿರಿ.
ವಿಶೇಷತೆಗಳೇನು?: ಈ ಯೋಜನೆಯು ಸರಿಸುಮಾರು 22 ಕಿಲೋ ಮೀಟರ್ ಉದ್ದದ 6 ಲೇನ್ (3+3-ಲೇನ್, 2 ತುರ್ತು ಲೇನ್) ಸೇತುವೆಯನ್ನು ಮುಂಬೈ ನಗರದ ಶಿವಡಿ ಮತ್ತು ಮುಖ್ಯ ಭೂಭಾಗದ ನ್ಹಾವಾವನ್ನು ಸಂಪರ್ಕಿಸಲಿದೆ.
ಯೋಜನೆ ರೂಪುಗೊಂಡಿದ್ದು ಯಾವಾಗ: 1962ರಲ್ಲೇ ಎರಡು ನಗರಗಳ ಮಧ್ಯೆ ಸಂಚಾರ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಜಾರಿ ಸಂಬಂಧ ಹಲವು ಅಧ್ಯಯನಗಳು ನಡೆದಿದ್ದವು. 2008ರಲ್ಲಿ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಜಾರಿಗೆ ಸಂಬಂಧ ಟೆಂಡರ್ ಆಹ್ವಾನಿಸಿತ್ತು. ಈ ಯೋಜನೆಯಲ್ಲಿ ರಾಜಕೀಯದದ ಗಾಳಿ ಸೋಕಿದ್ದು ಹಾಗೂ ಭಾರೀ ಟೀಕೆ ಬಂದ ಹಿನ್ನೆಲೆ ಸ್ಥಗಿತ ಮಾಡಲಾಗಿತ್ತು.
ಸೇತುವೆಗೆ ತಗುಲಿದ ವೆಚ್ಚ: ಕೊನೆಗೆ ಎಲ್ಲಾ ಇಲಾಖೆಗಳ ಅನುಮತಿ ಪಡೆದ ಬಳಿಕ 2016ರ ಡಿಸೆಂಬರ್ 24ರಂದು ಪ್ರಧಾನಿ ಮೋದಿ ಅವರು ಈ ಯೋಜನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಭೂಮಿ ಸ್ವಾಧೀನ ಪಡಿಸಿದ ಬಳಿಕ 2018ರ ಏಪ್ರಿಲ್ 24 ರಂದು ಕಾಮಗಾರಿ ಆರಂಭ ಆಗಿತ್ತು. ಈ ಪ್ರಕಾರ ಸೆಪ್ಟೆಂಬರ್ 22, 2022ಕ್ಕೆ ಮುಕ್ತಾಯ ಆಗಬೇಕಿತ್ತು. ಆದರೆ ಕೋವಿಡ್ ಲಾಕ್‌ಡೌನ್ ನಂತರ ಕಾರ್ಮಿಕರ ಸಮಸ್ಯೆಯಿಂದಾಗಿ ಯೋಜನೆ ವಿಳಂಬವಾಗಿದ್ದು, ಇದೀಗ ಜನವರಿಯಲ್ಲಿ ಉದ್ಘಾಟನೆಗೆ ಸಜ್ಜಾಗಿದೆ.
ಆರಂಭದಲ್ಲಿ ಈ ಯೋಜನೆ ನಿರ್ಮಾಣಕ್ಕೆ 14,712.70 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಈ ವೆಚ್ಚ 16,904.43 ಕೋಟಿ ರೂಪಾಯಿಗೆ ಏರಿಕೆ ಆಗಿದೆ ಎಂದು ಆರ್‌ಟಿಐ ಅಡಿ ಮಾಹಿತಿ ದೊರೆತಿದೆ.












Click it and Unblock the Notifications