ಐಟಿ ದೈತ್ಯ ಟಿಸಿಎಸ್, ಇನ್ಫೋಸಿಸ್‌ಗೆ ಕೋಟಿಗಟ್ಟಲೆ ಆದಾಯ; ದಶಕ ಕಳೆದರೂ ಉದ್ಯೋಗಿಗಳ ಸಂಬಳದಲ್ಲಿ ಬದಲಾವಣೆ ಇಲ್ಲ
ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ದಶಕಗಳಿಂದಲೂ ತಮ್ಮ ಮಕ್ಕಳು ಟಿಸಿಎಸ್ (TCS), ಇನ್ಫೋಸಿಸ್ (Infosys) ಅಥವಾ ವಿಪ್ರೋದಂತಹ (Wipro) ಐಟಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವುದು ಒಂದು ದೊಡ್ಡ ಕನಸಾಗಿತ್ತು. ಇದು ಕೇವಲ ಒಂದು ಉದ್ಯೋಗದ ಆಫರ್ ಲೆಟರ್ ಆಗಿರಲಿಲ್ಲ; ಬದಲಿಗೆ ಆರ್ಥಿಕ ಭದ್ರತೆ, ಸಾಮಾಜಿಕ ಗೌರವ ಮತ್ತು ಉಜ್ವಲ ಭವಿಷ್ಯದ ಭರವಸೆಯಾಗಿತ್ತು. ಆದರೆ, ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಐಟಿ ಕಂಪನಿಗಳ ಲಾಭಾಂಶ ಮತ್ತು ಆದಾಯ ದಾಖಲೆ ಮಟ್ಟಕ್ಕೆ ಏರಿದ್ದರೂ, ಕೆಳಹಂತದಲ್ಲಿ ಕೆಲಸಕ್ಕೆ ಸೇರುವ ಯುವ ಎಂಜಿನಿಯರ್‌ಗಳ ಸಂಬಳ ಮಾತ್ರ ಕಳೆದ ಎರಡು ದಶಕಗಳಿಂದ ಯತಾಸ್ಥಿತಿಯಲ್ಲಿ ಮುಂದುವರಿದಿದೆ.
19 ವರ್ಷಗಳ ಹಿಂದಿನ ಸಂಬಳವೇ ಇಂದೂ ಇದೆ
ಅಂಕಿಅಂಶದ ಪ್ರಕಾರ, 2007ರಲ್ಲಿ ಟಿಸಿಎಸ್ ಕಂಪನಿಗೆ 'ಅಸಿಸ್ಟೆಂಟ್ ಸಿಸ್ಟಮ್ಸ್ ಎಂಜಿನಿಯರ್ ಟ್ರೈನಿ' ಆಗಿ ಸೇರಿದ ಹೊಸ ಪದವೀಧರನ ವಾರ್ಷಿಕ ವೇತನ (LPA) ಸರಿಸುಮಾರು 3.16 ಲಕ್ಷ ರೂಪಾಯಿಗಳಾಗಿತ್ತು. ಇಂದಿಗೆ ಅಂದರೆ 2026ಕ್ಕೆ ಬಂದರೆ, ಅದೇ ಹುದ್ದೆಗೆ ನೀಡಲಾಗುತ್ತಿರುವ ಸಂಬಳ ಸುಮಾರು 3.36 ಲಕ್ಷ ರೂಪಾಯಿಗಳು. ಅಂದರೆ, ಕಳೆದ 19 ವರ್ಷಗಳಲ್ಲಿ ವಾರ್ಷಿಕ ವೇತನದಲ್ಲಿ ಆದ ಹೆಚ್ಚಳ ಕೇವಲ 20,000 ರೂಪಾಯಿಗಳು ಮಾತ್ರ.

ಇದು ಕೇವಲ ಟಿಸಿಎಸ್ ಕಂಪನಿಗೆ ಮಾತ್ರ ಸೀಮಿತವಾಗಿಲ್ಲ. ಇನ್ಫೋಸಿಸ್, ವಿಪ್ರೋ ಮತ್ತು ಅಕ್ಸೆಂಚರ್‌ನಂತಹ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಹೊಸ ಉದ್ಯೋಗಿಗಳ ವೇತನವು ಇಂದಿಗೂ 3 ರಿಂದ 4 ಲಕ್ಷ ರೂಪಾಯಿಗಳ ನಡುವೆಯೇ ಇರುವುದು ಐಟಿ ಕ್ಷೇತ್ರದ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.
ಹಣದುಬ್ಬರ ಮತ್ತು ಶಿಕ್ಷಣ ವೆಚ್ಚದ ಹೊರೆ
19 ವರ್ಷಗಳ ಹಿಂದೆ 3 ಲಕ್ಷ ರೂಪಾಯಿ ಸಂಬಳವು ಬೆಂಗಳೂರು ಅಥವಾ ಪುಣೆಯಂತಹ ನಗರಗಳಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಕಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ. ಅಂದಿನಿಂದ ಇಂದಿನವರೆಗೆ ಶಿಕ್ಷಣದ ಶುಲ್ಕ ನಾಲ್ಕು ಪಟ್ಟು ಹೆಚ್ಚಾಗಿದೆ. ಖಾಸಗಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಮುಗಿಸಲು ಇಂದು ಪೋಷಕರು 10 ರಿಂದ 25 ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡುತ್ತಿದ್ದಾರೆ. ಇದಕ್ಕಾಗಿ ಪಡೆದ ಶಿಕ್ಷಣ ಸಾಲದ ಕಂತು (EMI), ಮನೆ ಬಾಡಿಗೆ, ಸಾರಿಗೆ ವೆಚ್ಚ ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಲೆಕ್ಕ ಹಾಕಿದರೆ, ಒಬ್ಬ ಹೊಸ ಎಂಜಿನಿಯರ್‌ನ ಕೈಗೆ ಸಿಗುವ ಸಂಬಳ ಕೇವಲ ಜೀವನ ನಿರ್ವಹಣೆಗೂ ಸಾಲುತ್ತಿಲ್ಲ.
ವಾಸ್ತವಿಕವಾಗಿ ನೋಡಿದರೆ, 2007ರಲ್ಲಿದ್ದ 3 ಲಕ್ಷ ರೂಪಾಯಿಗಳ ಮೌಲ್ಯಕ್ಕೆ ಹೋಲಿಸಿದರೆ, ಇಂದಿನ 3.3 ಲಕ್ಷ ರೂಪಾಯಿಗಳ ಖರೀದಿ ಸಾಮರ್ಥ್ಯವು ಶೇ. 50-60ರಷ್ಟು ಕುಸಿದಿದೆ. ಅಂದರೆ, ಅಂದು ಆರಾಮದಾಯಕ ಜೀವನ ನಡೆಸುತ್ತಿದ್ದ ಫ್ರೆಶರ್‌ಗಳು ಇಂದು ಜೀವನ ಸಾಗಿಸಲು ಪರದಾಡುತ್ತಿದ್ದಾರೆ.
ಶಿಕ್ಷಣ ತಜ್ಞರು ಈ ಸ್ಥಿತಿಯನ್ನು 'ವ್ಯವಸ್ಥೆಯ ವೈಫಲ್ಯ' ಎಂದು ಬಣ್ಣಿಸಿದ್ದಾರೆ. "ಜೆಇಇ (JEE) ನಂತಹ ಕಠಿಣ ಪರೀಕ್ಷೆಗಳನ್ನು ಎದುರಿಸಿ ಬರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇವಲ 3 ಲಕ್ಷ ರೂಪಾಯಿ ನೀಡುವುದು ಅವರ ಪ್ರತಿಭೆಗೆ ನೀಡುವ ಅಪಮಾನ," ಎಂದು ಶಿಕ್ಷಣ ಸಂಸ್ಥೆಯೊಂದರ ಸಿಇಒ ಸೌರಭ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಕಂಪನಿಗಳ ಸಿಇಒಗಳ ಸಂಬಳ ಕೋಟ್ಯಂತರ ರೂಪಾಯಿಗಳಲ್ಲಿ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ತಳಮಟ್ಟದ ಉದ್ಯೋಗಿಗಳ ಸಂಬಳ ಸ್ಥಗಿತಗೊಂಡಿರುವುದು ದೊಡ್ಡ ಆತಂಕವನ್ನು ಸೃಷ್ಟಿಸಿದೆ.
ಸಹಜವಾಗಿ ಸಾಮಾನ್ಯ ಐಟಿ ಸೇವೆಗಳಲ್ಲಿ ಸಂಬಳ ಕಡಿಮೆಯಿದ್ದರೂ, ಕೆಲವು ವಿಶೇಷ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆ. ಎಐ (AI), ಮಷಿನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಸೆಕ್ಯೂರಿಟಿಯಂತಹ ವಿಷಯಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳು 15 ರಿಂದ 20 ಲಕ್ಷ ರೂಪಾಯಿಗಳವರೆಗೆ ಸಂಬಳ ಪಡೆಯುತ್ತಿದ್ದಾರೆ. ಆದರೆ, ಇಂತಹ ಅವಕಾಶಗಳು ಕೇವಲ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಅಥವಾ ವಿಶೇಷ ಕೌಶಲ ಹೊಂದಿದವರಿಗೆ ಮಾತ್ರ ಲಭ್ಯವಿದೆ.
ಮುಂದಿನ ಮಾರ್ಗವೇನು?
ಭಾರತದ ಐಟಿ ಉದ್ಯಮವು ಇಂದಿಗೂ ಜಾಗತಿಕ ಶಕ್ತಿಯಾಗಿದೆ ನಿಜ. ಆದರೆ, ಹೊಸ ತಲೆಮಾರಿನ ಎಂಜಿನಿಯರ್‌ಗಳಿಗೆ ಈ ಕ್ಷೇತ್ರವು ಕೇವಲ 'ಭ್ರಮೆ'ಯಾಗಬಾರದು. ಕಂಪನಿಗಳು ತಮ್ಮ ಲಾಭದ ಒಂದು ಭಾಗವನ್ನು ಯುವ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮತ್ತು ಅವರ ವೇತನವನ್ನು ಆರ್ಥಿಕ ವಾಸ್ತವಕ್ಕೆ ಅನುಗುಣವಾಗಿ ಪರಿಷ್ಕರಿಸಲು ಬಳಸಬೇಕಿದೆ. ಇಲ್ಲದಿದ್ದರೆ, ಎಂಜಿನಿಯರಿಂಗ್ ಪದವಿಯ ಮೇಲಿನ ನಂಬಿಕೆ ಕ್ಷೀಣಿಸಿ, ದೇಶದ ಪ್ರತಿಭೆಗಳು ಬೇರೆ ದಾರಿ ಹುಡುಕುವ ಅನಿವಾರ್ಯತೆ ಎದುರಾಗಲಿದೆ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications