6 ತಿಂಗಳಲ್ಲಿ ಭಾರತದಾದ್ಯಂತ 70 ಲಕ್ಷ ಮದುವೆ: 13 ಲಕ್ಷ ಕೋಟಿ ರೂಪಾಯಿ ವ್ಯಾಪಾರ ನಿರೀಕ್ಷೆ- ಅಂಕಿಅಂಶ, ವರದಿ, ವಿವರ
ಜನವರಿ ಮಧ್ಯದಿಂದ ಜೂನ್ ಅಂತ್ಯದವರೆಗೆ ಭಾರತದಾದ್ಯಂತ ಮದುವೆಗಳ ಅಬ್ಬರ ಬಲು ಜೋರಾಗಿರುತ್ತದೆ. ಈ ಮದುವೆ ಋತುವಿನಲ್ಲಿ ದೇಶದಾದ್ಯಂತ ಅಂದಾಜು 70 ಲಕ್ಷ ಮದುವೆಗಳು ನಡೆಯುವ ಸಾಧ್ಯತೆ ಇದೆ. ಮದುವೆಗೆ ಸಂಬಂಧಿಸಿದ ವ್ಯಾಪಾರ ವಹಿವಾಟು 13 ಲಕ್ಷ ಕೋಟಿ ರೂಪಾಯಿ ಮೌಲ್ಯವನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಅಂಕಿಅಂಶಗಳ ಪ್ರಕಾರ, ಮದುವೆ ಋತುವಿನ ಅವಧಿಯಲ್ಲಿ ದೇಶದಾದ್ಯಂತ ಸುಮಾರು 70 ಲಕ್ಷ ವಿವಾಹಗಳು ನಡೆಯಲಿವೆ. ವಿವಾಹದ ಖರೀದಿಗಳು ಮತ್ತು ವಿವಿಧ ವಿವಾಹ ಸಂಬಂಧಿತ ಸೇವೆಗಳಿಗೆ ಬೇಡಿಕೆ ವ್ಯಾಪಕ ಬೇಡಿಕೆ ಇರಲಿದೆ ಎಂದು ಹೇಳಿದೆ.

ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ ಸುಮಾರು 1.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 7 ಲಕ್ಷಕ್ಕೂ ಅಧಿಕ ವಿವಾಹಗಳು ನಡೆಯಲಿವೆ ಎಂದು ಅಂದಾಜಿಸಲಾಗಿದೆ.
2022ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ, ದೇಶದಾದ್ಯಂತ 32 ಲಕ್ಷ ವಿವಾಹ ಸಮಾರಂಭಗಳನ್ನು ನೇರವೇರಿಸಲಾಗಿದೆ. ಇದಕ್ಕಾಗಿ 3.75 ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.

ಸಿಎಐಟಿ ಪ್ರಕಾರ, ಪ್ರತಿ ಮದುವೆಯ ಸರಾಸರಿ ವೆಚ್ಚವು ಸುಮಾರು 3 ಲಕ್ಷದಿಂದ ರೂಪಾಯಿಗಳಿಂದ 1 ಕೋಟಿ ರೂಪಾಯಿಗಳ ವರೆಗೆ ಇರುತ್ತದೆ. ಕೆಲವೊಮ್ಮೆ ಇದಕ್ಕಿಂತ ಹೆಚ್ಚಾಗಿರುತ್ತದೆ.
ಈ ಕುರಿತು ಮಾತನಾಡಿರುವ ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿಸಿ ಭರ್ತಿಯಾ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, 'ಮದುವೆಯ ಸೀಸನ್‌ಗೋಸ್ಕರ ದೇಶದಾದ್ಯಂತ ವ್ಯಾಪಾರಿಗಳು ಭಾರೀ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಎಲ್ಲಾ ವ್ಯವಸ್ಥೆಗಳಾಗಿವೆ ಎಂದು ತಿಳಿಸಿದ್ದಾರೆ.

ಮದುವೆಯ ಸೀಸನ್‌ಗೆ ಮುಂಚಿತವಾಗಿ, ಮನೆಗಳ ದುರಸ್ತಿ ಮತ್ತು ಪೇಂಟಿಂಗ್ ಮಾಡಿಸಲಾಗುತ್ತದೆ. ಇದರಲ್ಲಿ ದೊಡ್ಡ ಪ್ರಮಾಣದ ವ್ಯಾಪಾರ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ಆಭರಣಗಳು, ಸೀರೆಗಳು, ಲೆಹೆಂಗಾ-ಚೋಲಿ, ಪೀಠೋಪಕರಣಗಳು, ಸಿದ್ಧ ಉಡುಪುಗಳು, ಬಟ್ಟೆಗಳು, ಪಾದರಕ್ಷೆಗಳು, ಮದುವೆ ಮತ್ತು ಶುಭಾಶಯ ಪತ್ರಗಳನ್ನು ಖರೀದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಿಹಿತಿಂಡಿಗಳು, ಹಣ್ಣುಗಳು, ಪೂಜಾ ಸಾಮಗ್ರಿಗಳು, ದಿನಸಿ, ಆಹಾರ ಧಾನ್ಯಗಳು, ಅಲಂಕಾರ ಸಾಮಗ್ರಿಗಳು, ಮನೆ ಅಲಂಕಾರಿಕ ವಸ್ತುಗಳು, ವಿದ್ಯುತ್, ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಉಡುಗೊರೆ ಸೇರಿದಂತೆ ಇತ್ಯಾದಿಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆಯಿದೆ. ಈ ವರ್ಷ ಉತ್ತಮ ವ್ಯಾಪಾರ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
'ಬ್ಯಾಂಕ್ವೆಟ್ ಹಾಲ್‌ಗಳು, ಹೋಟೆಲ್‌ಗಳು, ತೆರೆದ ಹುಲ್ಲುಹಾಸುಗಳು, ಸಮುದಾಯ ಕೇಂದ್ರಗಳು, ಸಾರ್ವಜನಿಕ ಉದ್ಯಾನವನಗಳು, ಫಾರ್ಮ್ ಹೌಸ್‌ಗಳು ಮತ್ತು ಮದುವೆಗಳಿಗಾಗಿ ಹಲವಾರು ರೀತಿಯ ಸ್ಥಳಗಳನ್ನು ದೇಶಾದ್ಯಂತ ಸಂಪೂರ್ಣವಾಗಿ ಸಿದ್ಧಪಡಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಪ್ರತಿ ಮದುವೆಯಲ್ಲಿ ಪರಿಕರಗಳ ಖರೀದಿಯ ಜೊತೆಗೆ, ಟೆಂಟ್ ಡೆಕೋರೇಟರ್‌ಗಳು, ಹೂವಿನ ಅಲಂಕಾರಗಳು, ಪಾತ್ರೆಗಳು, ಅಡುಗೆ ಸೇವೆ, ಪ್ರಯಾಣ ಸೇವೆ, ಕ್ಯಾಬ್ ಸೇವೆ, ತರಕಾರಿ ಮಾರಾಟಗಾರರು, ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳು, ಶೆಹನಾಯ್ ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ಸಹ ಒಳಗೊಂಡಿರುತ್ತದೆ ಎಂದು ಅವರು ಹೇಳಿದ್ದಾರೆ.
ಆರ್ಕೆಸ್ಟ್ರಾ, ಡಿಜೆ ಇತ್ಯಾದಿಗಳ ಜೊತೆಗೆ ಹಲವು ರೀತಿಯ ಸೇವೆಗಳು ಇರುತ್ತವೆ. ಇದರೊಂದಿಗೆ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಪ್ಯಾಕೇಜಿಂಗ್ ಕೂಡ ದೊಡ್ಡ ವ್ಯಾಪಾರವಾಗಿ ಹೊರಹೊಮ್ಮಿದೆ ಎಂದು ಖಂಡೇಲ್ವಾಲ್ ತಿಳಿಸಿದ್ದಾರೆ.
ಪ್ರತಿ ಮದುವೆಯ ವೆಚ್ಚದಲ್ಲಿ ಸುಮಾರು 20 ಪ್ರತಿಶತದಷ್ಟು ವರ ಮತ್ತು ವಧುವಿನ ಕಡೆಯವರಿಗೆ ಹೋಗುತ್ತದೆ. ವೆಚ್ಚದ 80 ಪ್ರತಿಶತವು ಮದುವೆಯನ್ನು ನೆರವೇರಿಸುವಲ್ಲಿ ಕೆಲಸ ಮಾಡುವ ಮೂರನೇ ವ್ಯಕ್ತಿಯ ಏಜೆನ್ಸಿಗಳಿಗೆ ಹೋಗುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications